ಪ್ರತಿಯೊಬ್ಬ ಮನುಷ್ಯನಿಗೂ ಕೆಲಸ, ಸಂಸಾರ, ಮಕ್ಕಳು ಅನ್ನೋ ಜವಬ್ದಾರಿ ಇದ್ದೇ ಇದೆ. ಈ ಎಲ್ಲಾ ಜವಬ್ದಾರಿಗಳು ಹೆಗಲೇರಿದಾಗ, ಒತ್ತಡ ಹೆಚ್ಚಾದಾಗ ಒಬ್ಬಂಟಿಯಾಗಿರುವ ಸಮಯದಲ್ಲಿ ನಾವು ಏನನ್ನೋ ಯೋಚಿಸುತ್ತಾ ಸುಮ್ಮನೆ ಕುಳಿತು ಬಿಡುತ್ತೇವೆ. ಅದೇ ರೀತಿ ಇಲ್ಲೊಬ್ಬ ಬಸ್ ಕಂಡಕ್ಟರ್ ಕೂಡಾ ಬಸ್ ಹೊರಡುವ ಮುನ್ನ ಏನನ್ನೋ ಯೋಚಿಸುತ್ತಾ ಬೇಸರದಿಂದ ಕುಳಿತಿದ್ದರು. ಈ ದೃಶ್ಯವನ್ನು ಕಂಡ ಚಿತ್ರ ಕಲಾವಿದರೊಬ್ಬರು ಕಂಡಕ್ಟರ್ ಮುಖದಲ್ಲಿ ನಗು ತರಿಸಬೇಕೆಂದು ಬಸ್ಸಿನಲ್ಲಿ ಕುಳಿತು ಅವರ ಚಿತ್ರವನ್ನು ಬಿಡಿಸಿದ್ದಾರೆ. ಕಲಾವಿದ ಬಿಡಿಸಿದ ತನ್ನ ಚಿತ್ರವನ್ನು ಕಂಡು ಕಂಡಕ್ಟರ್ ಮೊಗದಲ್ಲಿ ನಗು ಮೂಡಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಸುಂದರ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.
ಈ ವಿಡಿಯೋವನ್ನು ಚಿತ್ರ ಕಲಾವಿದ ಆಕಾಶ್ ಸೆಲ್ವರಸು (imaginelife_official) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಚಿತ್ರ ಕಲಾವಿದ ಆಕಾಶ್ ಏನೋ ಯೋಚಿಸುತ್ತಾ ಬೇಸರದಲ್ಲಿದ್ದ ಬಸ್ ಕಂಡಕ್ಟರ್ ಒಬ್ಬರ ಸುಂದರ ಚಿತ್ರವನ್ನು ಬಿಡಿಸುವ ದೃಶ್ಯವನ್ನು ಕಾಣಬಹುದು. ಚಿತ್ರ ಬಿಡಿಸಿದ ಬಳಿಕ ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲರೂ ಈ ಸುಂದರ ಚಿತ್ರವನ್ನು ನೋಡಿ ಬಹಳ ಸಂತೋಷಪಟ್ಟರು. ಕೊನೆಯಲ್ಲಿ ಕಂಡಕ್ಟರ್ ತನ್ನ ಚಿತ್ರವನ್ನು ಕಂಡು ಭಾವುಕರಾಗಿ ಮನಸ್ಪೂರ್ವಕವಾಗಿ ನಕ್ಕಿದ್ದಾರೆ.
ಇದನ್ನೂ ಓದಿ: ಯಾವಾಗ ಮದುವೆ ಎಂದು ಪದೇ ಪದೇ ಕೇಳುತ್ತಿದ್ದ ಪಕ್ಕದ ಮನೆಯ ವೃದ್ದನನ್ನೇ ಕೊಂದ ವ್ಯಕ್ತಿ
ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕಂಡೆಕ್ಟರ್ ಸಾಹೆಬ್ರ ಆ ಒಂದು ನಗು ನಮ್ಮೆಲ್ಲರ ಮೊಗದಲ್ಲೂ ನಗು ತರಿಸಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಮ್ಮ ಕಲೆಯಿಂದ ಒಬ್ಬರ ಮುಖದಲ್ಲಿ ನಗು ತರಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳುʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ