ಆಟೋ ಚಾಲಕರ ಮಾನವೀಯ ಕಾರ್ಯ, ಪ್ರಾಮಾಣಿಕತೆಗಳಿಗೆ ಸಂಬಂಧಪಟ್ಟ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಹೌದು ಅಕಸ್ಮಾತ್ ಆಗಿ ಆಟೋದಲ್ಲಿ ಬಿಟ್ಟು ಹೋದ ಹಣ, ಚಿನ್ನಾಭರಣದಂತಹ ಬೆಲೆ ಬಾಳುವ ವಸ್ತುಗಳನ್ನು ತಾವು ಇಟ್ಟುಕೊಳ್ಳದೆ ಅದರ ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಮಾನವೀಯತೆಯನ್ನು ಮೆರೆದ ಹಲವು ಆಟೋ ಚಾಲಕರಿದ್ದಾರೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಇಲ್ಲೊಬ್ರು ಆಟೋ ಚಾಲಕ ತನ್ನ ಆಟೋದಲ್ಲಿ ಸಿಕ್ಕಂತಹ ಬೆಲೆಬಾಳುವ ಚಿನ್ನದ ಸರವನ್ನು ಅದರ ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಇವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಆಟೋ ಚಾಲಕನ ಈ ಮಾನವೀಯ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಇತ್ತೀಚಿಗೆ ಮೈಸೂರಿನ ತಳಿರು ಫೌಂಡೇಶನ್ ಸಂಸ್ಥಾಪಕಿ ಚಿತ್ರಾ ಅವರು ಬೆಂಗಳೂರಿಗೆ ಬಂದಂತಹ ಸಂದರ್ಭದಲ್ಲಿ ತಮ್ಮ ಬೆಳೆ ಬಾಳುವ ಚಿನ್ನದ ಸರವನ್ನು ಕಳೆದುಕೊಂಡಿರುತ್ತಾರೆ. ಅದು ಎಲ್ಲಿ ಬಿಸಾಡಿ ಹೋಗಿದೆ ಎಂಬುದೇ ಅವರಿಗೆ ಗೊತ್ತಿರೊಲ್ಲ, ಈ ಬಗ್ಗೆ ಬಹಳ ಬೇಸರದಿಂದ ಇದ್ದಂತಹ ಸಂದರ್ಭದಲ್ಲಿ ಮರುದಿನ ಇವರ ಮನೆಗೆ ಬಂದಂತಹ ಆಟೋ ಚಾಲಕರೊಬ್ಬರು ಕಳೆದುಹೋದ ಚಿನ್ನದ ಸರವನ್ನು ಚಿತ್ರಾ ಅವರಿಗೆ ವಾಪಸ್ ನೀಡುತ್ತಾರೆ. ಬೆಂಗಳೂರಿನ ಆಟೋ ಚಾಲಕರಾದ ಗಿರೀಶ್ ಅವರಿಗೆ ಈ ಚಿನ್ನದ ಸರ ತಮ್ಮ ಆಟೋದಲ್ಲಿ ಸಿಕ್ಕಿದ್ದು, ಈ ಬೆಲೆಬಾಳುವ ವಸ್ತು ಯಾರದ್ದೆಂದು ಪತ್ತೆ ಹಚ್ಚಿ, ʼನಗರ ಮೀಟರ್ಡ್ ಆಟೋʼ ಅಪ್ಲಿಕೇಷನ್ ಸಹಾಯದ ಮೂಲಕ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಿ ಚಿತ್ರಾರಿಗೆ ಚಿನ್ನದ ಸರವನ್ನು ಸೇಫ್ ಆಗಿ ವಾಪಸ್ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
NagaraAtuo ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ತಳಿರು ಫೌಂಡೇಶನ್ ಸಂಸ್ಥಾಪಕಿ ತಮ್ಮ ಮನೆಯನ್ನು ಹುಡುಕಿಕೊಂಡು ಬಂದು ತಾವು ಕಳೆದುಕೊಂಡಿದ್ದ ಬೆಲೆಬಾಳುವ ಚಿನ್ನದ ಸರವನ್ನು ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಗಿರೀಶ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ʼಡಿಜಿಟಲ್ ಕಾಂಡೋಮ್ʼ ಬಿಡುಗಡೆ, ಇದರ ವಿಶೇಷತೆ ಏನ್ ಗೊತ್ತಾ?
ಅಕ್ಟೋಬರ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹ ಪ್ರಾಮಾಣಿಕ ವ್ಯಕ್ತಿಗೆ ನನ್ನದೊಂದು ಸಲಾಂʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಕಾಲದಲ್ಲೂ ಇಂತಹ ಅದ್ಭುತ ವ್ಯಕ್ತಿತ್ವದ ವ್ಯಕ್ತಿ ಸಿಗುವುದು ಅಪರೂಪʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ