ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ. ಜಡಿ ಮಳೆಗೆ ಇಡೀ ನಗರವೇ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೂ ಅಲ್ಲಲ್ಲಿ ನೀರು ನಿಂತು ಚರಂಡಿಗಳು ಕೂಡಾ ಮುಚ್ಚಿ ಹೋಗಿವೆ. ಸದ್ಯ ಈ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಪೌರ ಕಾರ್ಮಿಕರು ನಿರತರಾಗಿದ್ದು, ಕಾರ್ಮಿಕರು ಶೂ, ಕೈಗವಸ, ಹೆಲ್ಮೆಟ್ ಸೇರಿದಂತೆ ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಸ್ವಚ್ಛತಾ ಕಾರ್ಯವನ್ನು ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ದಯವಿಟ್ಟು ಬಡ ಜೀವಗಳ ಸುರಕ್ಷತೆಗೆ ಗಮನ ನೀಡಿ ಎಂದು ನೆಟ್ಟಿಗರು ಮನವಿ ಮಾಡಿದ್ದಾರೆ.
ಕಳೆದೆರಡು ದಿನಗಳಿಂದ ಸುರಿದ ಜಡಿ ಮಳೆಯಿಂದಾಗಿ ಬೆಳ್ಳಂದೂರಿನ ರಸ್ತೆ ಬಳಿ ಕೆಲವು ಚರಂಡಿಗಳು ಸಂಪೂರ್ಣವಾಗಿ ಮುಚ್ಚಿ ಹೋಗಿದ್ದು, ಇಬ್ಬರು ಪೌರ ಕಾರ್ಮಿಕರು ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಚರಂಡಿಯನ್ನು ಸ್ವಚ್ಛಗೊಳಿಸುವಂತಹ ಕಾರ್ಯವನ್ನು ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಪೌರ ಕಾರ್ಮಿಕರ ಸುರಕ್ಷತೆಯ ಕಡೆಗೂ ಸ್ವಲ್ಪ ಗಮನ ಹರಿಸಿ ಎಂದು ನೆಟ್ಟಿಗರು ಬಿಬಿಎಂಪಿ ಬಳಿ ಮನವಿ ಮಾಡಿದ್ದಾರೆ.
ಕಾರ್ತಿಕ್ ರೆಡ್ಡಿ ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪೌರ ಕಾರ್ಮಿಕರಿಗೆ ಶೂ, ಟಾರ್ಚ್, ಜಾಕೆಟ್, ಕೈ ಗವಸ, ಹೆಲ್ಮೆಟ್ ನೀಡಿ. ಇದು ಅವರ ಸುರಕ್ಷತೆಗೆ ಬೇಕಾಗಿರುವ ಮೂಲಭೂತ ವಸ್ತುಗಳಾಗಿವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬಿಬಿಎಂಪಿಯನ್ನು ಟ್ಯಾಗ್ ಮಾಡಿ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪೌರ ಕಾರ್ಮಿಕರಿಬ್ಬರು ತಮ್ಮ ಜೀವದ ಬಗ್ಗೆ ಲೆಕ್ಕಿಸದೆ ಶೂ, ಕೈ ಗವಸ, ಹೆಲ್ಮೆಟ್ ಇದ್ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆಯೇ ಮಳೆಯಿಂದಾಗಿ ತುಂಬಿ ಹೋಗಿದ್ದ ಚರಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಿದ್ದಾರೆ.
ಇದನ್ನೂ ಓದಿ: ಚಿಕನ್ ಮಂಚೂರಿಯನ್ ಬದಲು ಗ್ರಾಹರಿಗೆ ಚಿಕನ್ 65 ಕೊಟ್ಟು ಪ್ಲೀಸ್ ಇದನ್ನೇ ತಿನ್ನಿ ಎಂದ ಝೊಮ್ಯಾಟೊ
ಅಕ್ಟೋಬರ್ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೌದು ಪೌರ ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯಕ್ಕೂ ಆದ್ಯತೆ ನೀಡಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹೀಗೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡಿದರೆ ಇದರಿಂದ ಲೆಪ್ಟೊಸ್ಪಿರೋಸಿಸ್ ಕಾಯಿಲೆ ಬರುವ ಸಾಧ್ಯತೆ ಇದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ದಯವಿಟ್ಟು ಮೊದಲು ಪೌರ ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಿ ಎಂದು ಕೇಳಿಕೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ