Viral: ಬೆಂಗಳೂರಿನ ನಡುರಸ್ತೆಯಲ್ಲೇ ಕೈ ಕೊಟ್ಟ ಬೈಕ್, ಪೆಟ್ರೋಲ್ ನೀಡಿ ಮಾನವೀಯತೆ ಮೆರೆದ ರ‍್ಯಾಪಿಡೋ ಚಾಲಕ

ನಮ್ಮವರಿಗೆ ಯಾರಿಗಾದ್ರೂ ಕಷ್ಟ, ಸಮಸ್ಯೆಯೆಂದರೆ ಸಹಾಯ ಮಾಡಲು ಹಿಂದೆ ಮುಂದೆ ನೋಡ್ತಾರೆ. ಇನ್ನು ಅಪರಿಚಿತ ವ್ಯಕ್ತಿಗಳು ಕಷ್ಟದಲ್ಲಿ ಸಿಲುಕಿದ್ದಾರೆ ಎಂದರೆ ಕೇಳಬೇಕೇ, ನೋಡಿಯೂ ನೋಡದಂತೇ ಹೋಗ್ತಾರೆ. ಹೀಗಿರುವಾಗ ನಡುರಸ್ತೆಯಲ್ಲಿ ಪೆಟ್ರೋಲ್ ಖಾಲಿಯಾಗಿದ್ದು, ತೊಂದರೆಗೆ ಸಿಲುಕಿದ್ದ ಯುವಕನಿಗೆ ರ‍್ಯಾಪಿಡೋ ಚಾಲಕ ಸಹಾಯ ಮಾಡಿ ದೊಡ್ಡತನ ಮೆರೆದಿದ್ದಾನೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಬೆಂಗಳೂರಿನ ನಡುರಸ್ತೆಯಲ್ಲೇ ಕೈ ಕೊಟ್ಟ ಬೈಕ್, ಪೆಟ್ರೋಲ್ ನೀಡಿ ಮಾನವೀಯತೆ ಮೆರೆದ ರ‍್ಯಾಪಿಡೋ ಚಾಲಕ
ಪ್ರೆಟ್ರೋಲ್‌ ನೀಡಿ ಸಹಾಯ ಮಾಡಿದ ರ‍್ಯಾಪಿಡೋ ಚಾಲಕ
Image Credit source: Twitter

Updated on: Oct 05, 2025 | 2:13 PM

ಇಂದಿನ ಕಾಲದಲ್ಲಿ ಮನುಷ್ಯನಲ್ಲಿ ಮಾನವೀಯತೆ (humanity) ಅನ್ನೋದೇ ಮರೆಯಾಗಿದೆ, ಇದು ಹೆಚ್ಚಿನವರ ಅನುಭವದ ಮಾತು. ಇತರರ ಗೋಳು ನಮಗ್ಯಾಕೆ ಎಂದು ಸ್ವಾರ್ಥ ಜೀವನವನ್ನೇ ನಡೆಸುವ ಜನಗಳ ನಡುವೆ ಒಂದಷ್ಟು ಮಾನವೀಯ ಗುಣ ಹಾಗೂ ಸಹಾಯ ಮಾಡುವ ಮನೋಭಾವವನ್ನು ಮೈಗೂಡಿಸಿಕೊಂಡವರನ್ನು ಕಂಡಾಗ ಖುಷಿಯಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಒಳ್ಳೆಯ ವ್ಯಕ್ತಿಗಳ ಕುರಿತಾದ ವಿಡಿಯೋ ವೈರಲ್ ಆಗುತ್ತಿರುತ್ತದೆ. ಇದೀಗ ಯುವಕನೊಬ್ಬನು ದುರ್ಗಾಪೂಜೆಗೆ ಹೊರಟಿದ್ದ ವೇಳೆ ಪೆಟ್ರೋಲ್ ಖಾಲಿಯಾಗಿ ಬೈಕ್ ಬೆಂಗಳೂರಿನ (Bengaluru) ನಡುರಸ್ತೆಯಲ್ಲೇ ನಿಂತಿದೆ. ಈ ವೇಳೆ ರ‍್ಯಾಪಿಡೋ ಚಾಲಕನು ಈ ಯುವಕನಿಗೆ ತನ್ನ ಬೈಕ್‌ನಿಂದಲೇ ಪೆಟ್ರೋಲ್ ತೆಗೆದುಕೊಟ್ಟು ಸಹಾಯ ಮಾಡಿದ್ದಾನೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡು ಈ ಚಾಲಕನು ಮಾಡಿದ ಸಹಾಯಕ್ಕೆ ಯುವಕನು ಕೃತಜ್ಞತೆ ಸಲ್ಲಿಸಿದ್ದಾನೆ.

ರ‍್ಯಾಪಿಡೋ ಚಾಲಕನ ಸಹಾಯ ನೆನೆದ ಯುವಕ

HiSohan ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಪೋಸ್ಟ್‌ನಲ್ಲಿ ಯುವಕನು ನಡೆದ ಘಟನೆಯನ್ನು ವಿವರಿಸಿದ್ದು, ಬೆಂಗಳೂರು ನಿಜಕ್ಕೂ ಅದ್ಭುತ.. ನಾನು ನನ್ನ ಸ್ನೇಹಿತರೊಂದಿಗೆ ದುರ್ಗಾ ಪೂಜೆಗೆ ಹೋಗಲು ಸ್ಕೂಟರ್ ಬಾಡಿಗೆಗೆ ಪಡೆದಿದ್ದೆ. ಮೊದಲ ಪೆಟ್ರೋಲ್ ಪಂಪ್ ತಲುಪುವ ಮೊದಲೇ ನನ್ನ ಸ್ಕೂಟರ್‌ನಲ್ಲಿ ಇಂಧನ ಖಾಲಿಯಾಗಿತ್ತು! ನಾನು ರಾಪಿಡೋಗೆ ಕರೆ ಮಾಡಿ, ನನ್ನ ಪರಿಸ್ಥಿತಿಯನ್ನು ವಿವರಿಸಿ, ಪೆಟ್ರೋಲ್ ಪಂಪ್‌ಗೆ ಹೋಗೋಣ ಎಂದರೆ ಅಲ್ಲಿ ಬಾಟಲಿಯಲ್ಲಿ ಪೆಟ್ರೋಲ್ ಸಿಗುವುದಿಲ್ಲ ಎಂದು ಆತ ಹೇಳಿದ.

ಇದನ್ನೂ ಓದಿ
ಮದ್ವೆಯಾದ ಒಂದೇ ತಿಂಗಳಿಗೆ ಡಿವೋರ್ಸ್, ನಿರ್ಧಾರದ ಹಿಂದಿದೆ ಈ ಕಾರಣ
ಅಗಲಿದ ಶ್ವಾನದ ಫೋಟೋವನ್ನು ಆಟೋದಲ್ಲಿ ಇರಿಸಿದ ಬೆಂಗಳೂರಿನ ಆಟೋ ಚಾಲಕ
ಬೆಂಗಳೂರು ಆಟೋರಿಕ್ಷಾದ ಹಿಂದೆ ಬರೆದ ಬರಹ ವೈರಲ್
ಬೆಂಗಳೂರಿನ ಗುಂಡಿಗಳನ್ನು AI ರೇಸಿಂಗ್ ಆಟವನ್ನಾಗಿ ಪರಿವರ್ತಿಸಿದ ಟೆಕ್ಕಿ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸ್ಕೂಟರ್‌ನ್ನು ಪೆಟ್ರೋಲ್ ಪಂಪ್‌ಗೆ ತಳ್ಳಿಕೊಂಡು ಹೋಗುವುದು ಅಸಾಧ್ಯವಾಗಿತ್ತು. ಹೀಗಾಗಿ  ರ‍್ಯಾಪಿಡೋ ಚಾಲಕ ತನ್ನ ಟ್ಯಾಂಕ್‌ನಿಂದ ಪೆಟ್ರೋಲ್ ಕೊಟ್ಟ, ನಾನು ಕೇಳಲೂ ಇಲ್ಲ ನಾನು ಹಿಂದಿಯಲ್ಲಿ ಮಾತನಾಡುತ್ತಿದ್ದೆ. ಆ ಬಳಿಕ ಅವನು ನನ್ನ ಸ್ಕೂಟರ್‌ನ್ನು ಸ್ಟಾರ್ಟ್ ಮಾಡಲು ಸಹಾಯ ಮಾಡಿದ, ಆದರೆ ಇಂಧನದ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದನು ಎಂದು ಬರೆದುಕೊಂಡಿದ್ದು ಒಳ್ಳೆಯ ಮನಸ್ಸಿನ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಿದ್ದಾನೆ.

ಇದನ್ನೂ ಓದಿ:Viral: ಮದ್ವೆಯಾದ ಒಂದೇ ತಿಂಗಳಿಗೆ ಡಿವೋರ್ಸ್, ತನ್ನ ಈ ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಬೆಂಗಳೂರಿನ ಮಹಿಳೆ

ಅಕ್ಟೋಬರ್ 1 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಂಗಳೂರಿನಲ್ಲೂ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಇದ್ದಾರೆ, ಕಷ್ಟಕಾಲದಲ್ಲಿ ಇವರುಗಳೇ ನಮ್ಮ ಪಾಲಿಗೆ ದೇವರುಗಳಾಗುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬೆಂಗಳೂರಿನ ಟ್ರಾಫಿಕ್ ತುಂಬಾ ಕೆಟ್ಟದ್ದು, ಸಿಗ್ನಲ್ ಹಸಿರು ಬಣ್ಣಕ್ಕೆ ತಿರುಗುವ ವೇಳೆ ನಿಮ್ಮ ಬೈಕ್ ಪೆಟ್ರೋಲ್ ಖಾಲಿಯಾಗಬಹುದು ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಇಂತಹ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳೇ ಸಹಾಯ ಕ್ಕೆ ಬರುವುದು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ