ಸಾರ್ವಜನಿಕವಾಗಿ ಕ್ಯಾಬ್​ ಡ್ರೈವರ್​​ಗೆ​​​ ಕಪಾಳಮೋಕ್ಷ ಮಾಡಿದ ಟ್ರಾಫಿಕ್​​​ ಪೊಲೀಸ್

ಬೆಂಗಳೂರು ಟ್ರಾಫಿಕ್ ಪೊಲೀಸರ ದಬ್ಬಾಳಿಕೆಯ ಬಗ್ಗೆ ವಿಡಿಯೋವೊಂದು ವೈರಲ್​ ಆಗಿದೆ. ಕ್ಯಾಬ್ ಡ್ರೈವರ್‌ಗೆ ಪೊಲೀಸ್ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್ ಆಗಿದೆ. ಆರ್‌ಟಿ ನಗರದಲ್ಲಿ ನಡೆದ ಈ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ಇಂತಹ ಅಸಭ್ಯ ವರ್ತನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ.

ಸಾರ್ವಜನಿಕವಾಗಿ ಕ್ಯಾಬ್​ ಡ್ರೈವರ್​​ಗೆ​​​ ಕಪಾಳಮೋಕ್ಷ ಮಾಡಿದ ಟ್ರಾಫಿಕ್​​​ ಪೊಲೀಸ್
ವೈರಲ್​​ ವೀಡಿಯೋ

Updated on: Oct 23, 2025 | 5:49 PM

ಬೆಂಗಳೂರು, ಅ.23: ಬೆಂಗಳೂರು ಟ್ರಾಫಿಕ್​​ ಪೊಲೀಸರು (Traffic Police) ತಾವು ಮಾಡಬೇಕಾದ ಕೆಲಸ ಬಿಟ್ಟು ಬೇರೆಲ್ಲ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಇಷ್ಟೊಂದು ಟ್ರಾಫಿಕ್, ಅದರಿಂದ ಆಗುತ್ತಿರುವ ಅಪಘಾತಗಳು, ಇದನ್ನು ಸರಿ ಮಾಡುವುದು ಬಿಟ್ಟು, ಸಾರ್ವಜನಿಕರ ಮೇಲೆ ದರ್ಪ ತೋರಿಸುತ್ತಿದ್ದಾರೆ. ಇತ್ತೀಚೆಗೆ ಟ್ರಾಫಿಕ್​​​ ಪೊಲೀಸರು ಸಾರ್ವಜನಿಕರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇದೀಗ ಎಕ್ಸ್ ಖಾತೆಯಲ್ಲಿ​​​ ಟ್ರಾಫಿಕ್​​ ಪೊಲೀಸ್​​​ ಕ್ಯಾಬ್​ ಡ್ರೈವರ್​​ ಮೇಲೆ ಹಲ್ಲೆ ನಡೆಸಿರುವ ವಿಡಿಯೋವೊಂದು ವೈರಲ್​ ಆಗಿದೆ. ಈ ವಿಡಿಯೋ ನೋಡಿ ಬಹಳಷ್ಟು ಸೋಶಿಯಲ್​ ಮೀಡಿಯಾ ಬಳಕೆದಾರರು ಟ್ರಾಫಿಕ್​​ ಪೊಲೀಸ್​​​​​ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್​​ ಆಗಿರುವ ಪೋಸ್ಟ್​​​ ಪ್ರಕಾರ, ನಗರದ ಶೆಲ್ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಆರ್‌ಟಿ ನಗರ ಫ್ಲೈಓವರ್ ಬಳಿ ಈ ಘಟನೆ ನಡೆದಿದೆ. ಕ್ಯಾಬ್ ಚಾಲಕ ರಸ್ತೆ ಬದಿಯಲ್ಲಿ ಕಾರು ನಿಲ್ಲಿದಕ್ಕೆ ಟ್ರಾಫಿಕ್​ ಪೊಲೀಸ್​​​ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾದ ನಡೆದಿದೆ. ಕೋಪಗೊಂಡ ಪೊಲೀಸ್​​ ಸಾರ್ವಜನಿಕರ ಮುಂದೆ ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೋವನ್ನು ಎಕ್ಸ್​​ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ತಕ್ಷಣ ಈ ಗೂಂಡಾ ಅಧಿಕಾರಿಯ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಕಮೆಂಟ್​​ ಮಾಡಿದ್ದಾರೆ.

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

ಇನ್ನು ಈ ವಿಡಿಯೋವನ್ನು ನೋಡಿ ವ್ಯಕ್ತಿಯೊಬ್ಬರ ಪೊಲೀಸರ ಕರ್ತವ್ಯದ ಬಗ್ಗೆ ನೆನಪಿಸಿದ್ದಾರೆ. ” ಸಮವಸ್ತ್ರವು ಭಯವನ್ನುಂಟುಮಾಡಲು ಅಲ್ಲ, ಗೌರವ ನೀಡುವ ಉದ್ದೇಶದಿಂದ ನೀಡಲಾಗಿದೆ. ಹೌದು ಆ ಸ್ಥಳದಲ್ಲಿ ಪಾರ್ಕಿಂಗ್ ಮಾಡಬಾರದು, ಆದರೆ ಅಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಿರುವುದು ಯಾರ ಕೆಲಸ, ಪಾರ್ಕಿಂಗ್ ಮಾಡಿದ ಎಂಬ ಮಾತ್ರಕ್ಕೆ ಆತನ ಮೇಲೆ ಹಲ್ಲೆ ಮಾಡುವುದಾ? ಇದು ಅಧಿಕಾರದ ದರ್ಪ” ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಕಾನೂನು ಏನು ಹೇಳುತ್ತದೆ? ನೋ ಪಾರ್ಕಿಂಗ್​​ನಲ್ಲಿ ವಾಹನ ನಿಲ್ಲಿಸಿದ್ರೆ ದಂಡ ಹಾಕಿ ಎಂದು, ಆದರೆ ಒಬ್ಬ ಸಮಸ್ತ್ರದಲ್ಲಿರುವ ಅಧಿಕಾರಿ ಸಾರ್ವಜನಿಕವಾಗಿ ಹಲ್ಲೆ ಮಾಡುವುದು ಎಷ್ಟು ಸರಿ ಎಂದು ಕೇಳಿದ್ದಾರೆ.

ಇದನ್ನೂ ಓದಿ: ನಡುರಸ್ತೆಯಲ್ಲೇ ಸವಾರನಿಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್​​ ಪೊಲೀಸ್: ಸಿಬ್ಬಂದಿ ದರ್ಪಕ್ಕೆ ನೆಟ್ಟಿಗರು ಆಕ್ರೋಶ

ಇತ್ತೀಚೆಗೆ ಟ್ರಾಫಿಕ್​​ ಪೊಲೀಸ್​ ಸಿಬ್ಬಂದಿ ಬೈಕ್​​ ಸವಾರನಿಗೆ ನಡು ರಸ್ತೆಯಲ್ಲೇ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈ ಘಟನೆ ಸಿಲ್ಕ್ ಬೋರ್ಡ್ ಜಂಕ್ಷನ್​​ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:39 pm, Thu, 23 October 25