ನಡುರಸ್ತೆಯಲ್ಲೇ ಸವಾರನಿಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್: ಸಿಬ್ಬಂದಿ ದರ್ಪಕ್ಕೆ ನೆಟ್ಟಿಗರು ಆಕ್ರೋಶ
ಬೆಂಗಳೂರಿನಲ್ಲಿ ಬೈಕ್ ಸವಾರನಿಗೆ ಕಪಾಳಮೋಕ್ಷ ಮಾಡುವ ಮೂಲಕ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ದರ್ಪ ಮೆರೆದ ವಿಡಿಯೋವೊಂದು ಸದ್ಯ ಭಾರೀ ವೈರಲ್ ಆಗುತ್ತಿದೆ. ಟ್ರಾಫಿಕ್ ಪೊಲೀಸ್ ಸಿಬ್ಬಂದಿ ನಡೆ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನುಚಿತ ವರ್ತನೆ ತೋರಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಬೆಂಗಳೂರು, ಅಕ್ಟೋಬರ್ 16: ಟ್ರಾಫಿಕ್ ಪೊಲೀಸ್ ಸಿಬ್ಬಂದಿ (Traffic police) ಬೈಕ್ ಸವಾರನಿಗೆ ನಡು ರಸ್ತೆಯಲ್ಲೇ ಕಪಾಳಮೋಕ್ಷ (slaps) ಮಾಡಿರುವಂತಹ ಘಟನೆಯೊಂದು ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ದರ್ಪ ತೋರಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಡೆದದ್ದೇನು?
ವೈರಲ್ ಆದ ವಿಡಿಯೋ ಪ್ರಕಾರ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮತ್ತು ಸವಾರರ ಮಧ್ಯೆ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ನೋಡನೋಡುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಸವಾರನಿಗೆ ಕಪಾಳಮೋಕ್ಷ ಮಾಡುತ್ತಾರೆ. ಈ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ವೈರಲ್ ಆಗಿರುವ ವಿಡಿಯೋ
“Accountability and respect go hand-in-hand. Action taken against staff for misbehavior” https://t.co/Dlu3pPmhsE
— DCP SOUTH TRAFFIC (@DCPSouthTrBCP) October 15, 2025
ಟ್ರಾಫಿಕ್ ಪೊಲೀಸ್ ಸಿಬ್ಬಂದಿ ವಿರುದ್ಧ ನೆಟ್ಟಿಗರು ಆಕ್ರೋಶ
ವೈರಲ್ ವಿಡಿಯೋ ಬೆನ್ನಲ್ಲೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದರೆ, ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ಇದು ಸಂಪೂರ್ಣವಾಗಿ ಅಧಿಕಾರದ ದುರುಪಯೋಗವಾಗಿದೆ. ಈ ಘಟನೆಯು ಪೊಲೀಸ್ ಇಲಾಖೆ ಮೇಲಿನ ಹೊಣೆಗಾರಿಕೆ, ಶಿಸ್ತು ಮತ್ತು ಸಾರ್ವಜನಿಕ ನಂಬಿಕೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬಿಎಂಟಿಸಿ ಬಸ್ ಕೆಟ್ಟು ನಿಂತಿದ್ದಕ್ಕೆ ಇಡೀ ಔಟರ್ರಿಂಗ್ ರಸ್ತೆ ಫುಲ್ ಜಾಮ್!
ಪೀಕ್ ಸಮಯದಲ್ಲಿ ರಾಂಗ್ ರೂಟ್ನಲ್ಲಿ ಬರುವ ಆಟೋ ಚಾಲಕರು, ಟ್ಯಾಂಕರ್‌ಗಳು ಮತ್ತು ಭಾರೀ ಗಾತ್ರದ ವಾಹನ ಸವಾರರ ವಿರುದ್ಧ ಅದೇ ಧೈರ್ಯವನ್ನು ತೋರಿಸಿ. ನಾವು ಕಠಿಣ ಕ್ರಮಕ್ಕಾಗಿ ಕಾಯುತ್ತಿದ್ದೇನೆ ಎಂದು ಮತ್ತೊಬ್ಬ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇತರ ಕೆಲ ನೆಟ್ಟಿಗರು ಕೂಡ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಅಮಾನತು
ಘಟನೆ ಕುರಿತಾಗಿ ನೆಟ್ಟಿಗರ ಆಕ್ರೋಶ ಬೆನ್ನಲ್ಲೇ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ದಕ್ಷಿಣ ಸಂಚಾರ ಡಿಸಿಪಿ ಟ್ವೀಟ್ ಮಾಡಿದ್ದು, ಅನುಚಿತ ವರ್ತನೆಗಾಗಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:09 pm, Thu, 16 October 25




