Rahul Gandhi: ಚರ್ಮದ ರಕ್ಷಣೆಗಾಗಿ ಮಗನಿಗೆ ಸನ್ ಸ್ಕ್ರೀನ್ ಲೋಷನ್ ಕಳುಹಿಸಿದ ಸೋನಿಯಾ ಗಾಂಧಿ
Bharat Jodo Yatra: ಬಿಸಿಲಿಗೆ ಚರ್ಮದ ಬಣ್ಣ ಕೆಡದಂತೆ ನೋಡಿಕೊಳ್ಳಲು ಸೋನಿಯಾ ಗಾಂಧಿಯವರು ತಮ್ಮ ಮಗ ರಾಹುಲ್ ಗಾಂಧಿಗೆ ಸನ್ ಸ್ಕ್ರೀನ್ ಲೋಷನ್ ಕಳುಹಿಸಿದ್ದಾರೆ. ಆದರೆ ಇದನ್ನು ಬಳಸುತ್ತಿಲ್ಲ ಎಂದು ಸ್ವತಃ ರಾಹುಲ್ ಗಾಂಧಿಯವರು ಕಾರ್ಯಕರ್ತರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದೇಶಾದ್ಯಂತ ಭಾರತ್ ಜೋಡೋ ಯಾತ್ರೆ (Bharat Jodo Yatra) ಕೈಗೊಂಡಿದ್ದು, ಪ್ರತಿದಿನ ಚಳಿ, ಮಳೆ, ಬಿಸಿಲನ್ನು ಲೆಕ್ಕಿಸದೆ ಒಂದಷ್ಟು ಕಿಲೋ ಮೀಟರ್ಗಳಷ್ಟು ಪಾದಯಾತ್ರೆ ನಡೆಸುತ್ತಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯನ್ನು ಪೂರ್ಣಗೊಳಿಸಿದ ರಾಹುಲ್ ಗಾಂಧಿ (Rahul Gandhi) ಆಂಧ್ರಪ್ರದೇಶದಲ್ಲಿ ಯಾತ್ರೆಯನ್ನು ಮುಂದುವರಿಸುತ್ತಿದ್ದಾರೆ. ಪಕ್ಷದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಸೋಮವಾರ ಯಾತ್ರೆಗೆ ವಿರಾಮ ನೀಡಲಾಗಿತ್ತು. ಈ ವೇಳೆ ಬಳ್ಳಾರಿಯಲ್ಲಿ ತಮ್ಮ ಬೆಂಬಲಿಗರ ಜೊತೆ ನಡೆಸಿದ ಮಾತುಕತೆಯಲ್ಲಿ ರಾಹುಲ್ ಗಾಂಧಿಯವರು ವಿಷಯವೊಂದನ್ನು ಸ್ಪಷ್ಟಪಡಿಸಿದ್ದಾರೆ. ಬಿಸಿಲಿನ ಬೇಗೆಯಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಅಮ್ಮ (ಸೋನಿಯಾ ಗಾಂಧಿ Sonia Gandhi) ತನಗೆ ಸನ್ಸ್ಕ್ರೀನ್ ಲೋಷನ್ (Sunscreen Lotion) ಕಳುಹಿಸಿದ್ದಾರೆ ಎಂದು ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಮುಂದೆ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಇರುವಂತೆ, ನೀವು ಬಿಸಿಲಿನಲ್ಲಿ ನಡೆಯುತ್ತಿದ್ದೀರಲ್ಲಾ ಚರ್ಮದ ಬಣ್ಣ ಕಪ್ಪಾಗದಂತೆ ತಡೆಯಲು ಏನು ಬಳಕೆ ಮಾಡುತ್ತೀರಿ ಎಂದು ಕಾರ್ಯಕರ್ತರು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ನಮ್ಮಮ್ಮ ಸನ್ ಸ್ಕ್ರೀನ್ ಲೋಷನ್ ಕಳುಹಿಸಿದ್ದಾರೆ. ಆದರೆ ನಾನು ಯಾವುದನ್ನು ಬಳಸುತ್ತಿಲ್ಲ ಎಂದು ಹೇಳಿದ್ದಾರೆ.
ನೀವು ಇಷ್ಟು ದೀರ್ಘವಾಗಿ ಬಿಸಿಲಿನಲ್ಲಿ ನಡೆದಾಗ ಆರಂಭದಲ್ಲಿ ಗುಳ್ಳೆಗಳ ಸಮಸ್ಯೆ ಕಾಡಿದೆಯೇ ಎಂದು ಕೇಳಲಾಗಿದೆ. ಇದಕ್ಕೆ ಆರಂಭದಲ್ಲಿ ಉತ್ತರ ನೀಡಿದ ರಾಹುಲ್ ಗಾಂಧಿ, ಎಲ್ಲರಿಗೂ ಗುಳ್ಳೆಗಳು ಬಂದಿವೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಮಹಿಳೆಯೊಬ್ಬರು ಇಲ್ಲ ಎಂದಾಗ ನನಗೂ ಇಲ್ಲ ಎಂದು ಉತ್ತರಿಸಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ‘ಭಾರತ್ ಜೋಡೋ ಯಾತ್ರೆ’ ಕೈಗೊಂಡಿರುವ ರಾಹುಲ್ ಗಾಂಧಿ, 3,570 ಕಿಲೋಮೀಟರ್‌ಗಳಷ್ಟು ಪಾದಯಾತ್ರೆ ಮಾಡಲಿದ್ದಾರೆ. ಈ ಪೈಕಿ 1,000 ಕಿ.ಮೀ ದೂರವನ್ನು ಅವರು ನಿನ್ನೆ (ಅ 17) ಪೂರ್ಣಗೊಳಿಸಿದ್ದಾರೆ.
Yes or no to sunscreen?Best moments so far?Break time means family time?
Listen to this heart to heart between @RahulGandhi and fellow Bharat Yatris?#BharatJodoYatrahttps://t.co/QR2y2lk9zX
— Bharat Jodo (@bharatjodo) October 17, 2022
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Tue, 18 October 22