Viral : ಭಿನ್ನಲಿಂಗಿಗಳ ಮದುವೆಯಂತೆ ಸಮಲಿಂಗಿಗಳ ವಿವಾಹ ಅಷ್ಟು ಸುಲಭವಲ್ಲ. ಸಮಾಜ ತಮ್ಮನ್ನು ಸ್ವೀಕರಿಸಲಾರದು ಎಂಬ ಆತಂಕ ಅವರಲ್ಲಿದ್ಧೇ ಇರುತ್ತದೆ. ಇದೀಗ ವೈರಲ್ ಆಗುತ್ತಿರುವ ಈ ಸುದ್ದಿಯನ್ನು ಗಮನಿಸಿ. ರಾಜಸ್ಥಾನದ ದೀಗ್ನಲ್ಲಿ ವಾಸವಾಗಿರುವ ಮೀರಾ ನಗಲಾದಲ್ಲಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಶಾಲೆಯಲ್ಲಿ ವಿದ್ಯಾರ್ಥಿನಿ ಆಗಿರುವ ಕಲ್ಪನಾಳೆಡೆ ಆಕರ್ಷಿತರಾಗಿದ್ದಾರೆ. ಜೀವನಪೂರ್ತಿ ಆಕೆಯೊಂದಿಗೇ ಕಳೆಯಬೇಕೆಂಬ ಹಂಬಲ ತೀವ್ರವಾಗುತ್ತ ಹೋಗಿದೆ. ಆಗ ಲಿಂಗವರ್ತನೆಗೆ ಒಳಗಾಗಿ ರಾಜಸ್ಥಾನದ ಭರತ್ಪುರದಲ್ಲಿ ಆಕೆಯೊಂದಿಗೆ ಮದುವೆಯಾಗಿದ್ದಾರೆ.
ಶಿಕ್ಷಕಿ ಮೀರಾ ಮತ್ತು ವಿದ್ಯಾರ್ಥಿನಿ ಕಲ್ಪನಾ ಎರಡು ವರ್ಷಗಳ ಕಾಲ ಆಪ್ತ ಸ್ನೇಹಿತರಾಗಿದ್ದರು. ನಂತರ 2018ರಲ್ಲಿ ಮೀರಾ, ಕಲ್ಪನಾಗೆ ಮದುವೆ ಕುರಿತು ಪ್ರಸ್ತಾಪ ಮಾಡಿದರು. ಆಗ ಕಲ್ಪನಾ ತಕ್ಷಣವೇ ಅದಕ್ಕೊಪ್ಪಿಗೆ ಸೂಚಿಸಿದರು. ಆದರೆ, ಸಮಲಿಂಗಿಗಳು ಮದುವೆಯಾಗುವುದನ್ನು ತಮ್ಮ ಕುಟುಂಬ ಮತ್ತು ಸಮಾಜ ಒಪ್ಪಲಾರದು ಎಂಬ ವಾಸ್ತವ ಅವರನ್ನು ಕಾಡತೊಡಗಿತು. ಆಗ ಮೀರಾ, ಲಿಂಗಪರಿವರ್ತನೆ ಇದಕ್ಕೆ ಸೂಕ್ತ ಹಾದಿ ಎಂದು ತೀರ್ಮಾನಿಸಿದರು. ಮೀರಾ ಗಂಡಾಗಿ ಪರಿವರ್ತನೆಗೊಂಡು ಆರವ್ ಆದರು. ನಂತರ ಪರಸ್ಪರ ಕುಟುಂಬದವರು ಇವರಿಬ್ಬರ ಮದುವೆಗೆ ಒಪ್ಪಿಗೆ ಸೂಚಿಸಿತು.
ಮೀರಾಗೆ ಲಿಂಗಪರಿವರ್ತನೆಗೆ ಅನುಮತಿ ಸಿಗುವುದು ಸುಲಭಸಾಧ್ಯವಾಗಿರಲಿಲ್ಲ. ಸಾಕಷ್ಟು ಬಾರಿ ಪ್ರಯತ್ನಿಸಿದ ನಂತರ 2019ರಲ್ಲಿ ಶಸ್ತ್ರಕ್ರಿಯೆಗೆ ಅನುಮತಿ ದೊರೆಯಿತು. ಇದೀಗ ಅಂದರೆ ನವೆಂಬರ್ 4ರಂದು ಇವರಿಬ್ಬರೂ ಮದುವೆಯಾಗಿದ್ದಾರೆ.
‘ಮುಂಚೆಯಿಂದಲೂ ನಾನು ಅವನನ್ನು ತುಂಬಾ ಪ್ರೀತಿಸುತ್ತಿದ್ದೆ. ಶಸ್ತ್ರಚಿಕಿತ್ಸೆಗೆ ಒಳಗಾಗದೇ ಇದ್ದರೂ ಅವನನ್ನು ಮದುವೆಯಾಗುತ್ತಿದ್ದೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ನಾನು ಅವನೊಂದಿಗೇ ಇದ್ದೆ’ ಎಂದು ಕಲ್ಪನಾ ಆರವ್ ಕುರಿತು ಹೇಳಿದ್ದಾರೆ.
‘ನನ್ನ ಲಿಂಗವನ್ನು ಪರಿವರ್ತಿಸಿಕೊಳ್ಳುವ ಬಯಕೆ ನನಗೆ ಯಾವಾಗಲೂ ಇತ್ತು. ಅಂತೂ 2019ರಲ್ಲಿ ಅದು ಯಶಸ್ವಿಯಾಯಿತು’ ಎಂದಿದ್ದಾರೆ ಆರವ್ ಕುಂತಲ್.
(ವಿ.ಸೂ : ಹೆಣ್ಣಾಗಿ ಹುಟ್ಟಿ ಗಂಡಾಗುವ ಬಯಕೆ ಶಿಕ್ಷಕಿಯಲ್ಲಿ ಇದ್ದುದರಿಂದಲೇ ಲಿಂಗಪರಿವರ್ತನೆಗೆ ಒಳಗಾಗಲು ಮುಂದಾಗಿರುತ್ತಾರೆ. ಏಕೆಂದರೆ, ಲಿಂಗಪರಿವರ್ತನೆ ಎನ್ನುವುದು ಕೇವಲ ಮನಸಿಗೆ ಸಂಬಂಧಿಸಿದ್ದಲ್ಲ, ಇದು ಸಂಪೂರ್ಣ ಮನೋದೈಹಿಕ. ಹಾರ್ಮೋನುಗಳಿಗೆ ಸಂಬಂಧಿಸಿದ್ದು. ಲಿಂಗಪರಿವರ್ತನೆಗೆ ಸಂಬಂಧಿಸಿದ ಕಾನೂನು ನಿಯಮ ಭಾರತದಲ್ಲಿ ಬಹಳ ಬಿಗಿಯಾಗಿದೆ.)
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:51 pm, Tue, 8 November 22