ಕಾರಿನ ಬಾನೆಟ್​ ಮೇಲೆ ಕುಳಿತು ಕಲ್ಯಾಣ ಮಂಟಪಕ್ಕೆ ಬಂದ ವಧು; ವಿಡಿಯೋ ನೋಡಿ ಕೇಸ್ ಜಡಿದ ಪೊಲೀಸರು

| Updated By: Skanda

Updated on: Jul 14, 2021 | 12:32 PM

ವಧು ಮತ್ತು ಆಕೆಯ ಕಡೆಯವರು ಎಲ್ಲಾ ರೀತಿಯಲ್ಲೂ ನಿಯಮ ಉಲ್ಲಂಘನೆ ಮಾಡಿದ್ದು, ಅವರ ವಿರುದ್ಧ ಮೋಟಾರು ವಾಹನ ಕಾಯ್ದೆ ಹಾಗೂ ಬೇರೆ ಬೇರೆ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾರಿನ ಬಾನೆಟ್​ ಮೇಲೆ ಕುಳಿತು ಕಲ್ಯಾಣ ಮಂಟಪಕ್ಕೆ ಬಂದ ವಧು; ವಿಡಿಯೋ ನೋಡಿ ಕೇಸ್ ಜಡಿದ ಪೊಲೀಸರು
ಕಾರಿನ ಮೇಲೆ ಕುಳಿತು ಬಂದ ವಧು
Follow us on

ಕೆಲವು ಜನರಿಗೆ ನಾವು ಎಲ್ಲರಿಗಿಂತ ಭಿನ್ನವಾಗಿ ಕಾಣಬೇಕು ಎಂಬ ಆಸೆ ಇರುತ್ತದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳು (Social Media) ಕೈಗೆಟುಕಲು ಆರಂಭವಾದ ಮೇಲೆ ಯಾರು ಯಾವ ಕ್ಷಣದಲ್ಲಿ ಬೇಕಾದರೂ ಪ್ರಸಿದ್ಧರಾಗಬಹುದು. ವಿಪರ್ಯಾಸವೆಂದರೆ ಹೀಗೆ ಏಕಾಏಕಿ ಹೆಸರು ಮಾಡುವ ಹುಕಿಯಲ್ಲಿ ಪೇಚಿಗೆ ಸಿಲುಕುವವರೇ ಹೆಚ್ಚು. ಇಲ್ಲೊಬ್ಬಳು ಯುವತಿ ತನ್ನ ಮದುವೆಯ ದಿನ (Wedding Day) ಕಲ್ಯಾಣ ಮಂಟಪಕ್ಕೆ ವಿಭಿನ್ನವಾಗಿ ಬರಬೇಕೆಂಬ ಬಯಕೆಯನ್ನು ಈಡೇರಿಸಿಕೊಳ್ಳಲು ಹೋಗಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಅಷ್ಟಕ್ಕೂ ಆಕೆ ತನ್ನ ಪಾಡಿಗೆ ಆಸೆ ಈಡೇರಿಸಿಕೊಂಡು ಸುಮ್ಮನಾಗಿದ್ದರೆ ಆ ವಿಷಯ ಪೊಲೀಸರ ತನಕ ಹೋಗುತ್ತಲೇ ಇರಲಿಲ್ಲ. ಆದರೆ, ಆಕೆ ತಾನು ಮಾಡಿದ ಸಾಧನೆಯ ವಿಡಿಯೋವನ್ನು ವೈರಲ್​ (Viral Video) ಮಾಡಿ ಸಿಕ್ಕಿಬಿದ್ದಿದ್ದಾಳೆ.

ಪ್ರತಿಯೊಬ್ಬರಿಗೂ ವಿಭಿನ್ನವಾಗಿ, ಜೀವನಪರ್ಯಂತ ನೆನಪಿಟ್ಟುಕೊಳ್ಳುವ ಹಾಗೆ ಮದುವೆ ಆಗಬೇಕೆಂಬ ಬಯಕೆ ಇರುವಂತೆಯೇ ಈಕೆಗೂ ಮದುವೆಯ ದಿನ ಅದ್ಧೂರಿಯಾಗಿ ಎಲ್ಲರೂ ತಿರುಗಿನೋಡುವಂತೆ ಕಲ್ಯಾಣ ಮಂಟಪಕ್ಕೆ ಆಗಮಿಸುವ ಆಸೆಯಾಗಿದೆ. ಸಾಧಾರಣವಾಗಿ ಮದುವೆಯೆಂದ ಮೇಲೆ ವಧು, ವರರನ್ನು ಅದ್ಧೂರಿಯಾಗಿ ಕಾರಿನಲ್ಲಿ ಅಥವಾ ಸಾರೋಟಿನಲ್ಲಿ ಕರೆತರುವ ಪದ್ಧತಿಯಿದೆ. ಇಲ್ಲೂ ಅದೇ ರೀತಿ ಯುವತಿಯನ್ನು ದೊಡ್ಡ ಕಾರೊಂದರಲ್ಲಿ ಕರೆದುಕೊಂಡು ಬರಲಾಗಿದೆ. ಸೀರೆತೊಟ್ಟು ಸಿಂಗಾರಗೊಂಡ ವಧು ಕಾರಿನಲ್ಲಿ ಕಲ್ಯಾಣಮಂಟಪಕ್ಕೆ ಆಗಮಿಸಿದ್ದಾಳೆ. ಆದರೆ, ಕೆಲದಿನಗಳಲ್ಲೇ ಅದರ ವಿಡಿಯೋ ವೈರಲ್ ಆದ ನಂತರ ಆ ಘಟನೆಯೇ ಯುವತಿಗೆ ಮುಳುವಾಗಿದೆ.

ಈ ಪ್ರಕರಣ ಮಹಾರಾಷ್ಟ್ರದಲ್ಲಿ ನಡೆದಿದ್ದು, ಶುಭಾಂಗಿ ಎಂಬ ಹೆಸರಿನ ಯುವತಿಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ದೂರಿನಲ್ಲಿ ತಿಳಿಸಲಾಗಿರುವಂತೆ ಯುವತಿ ಕಾರಿನ ಬಾನೆಟ್​ ಮೇಲೆ ಕುಳಿತು ಕಲ್ಯಾಣ ಮಂಟಪದತ್ತ ಆಗಮಿಸಿದ್ದಾಳೆ. ಸಾಲದ್ದಕ್ಕೆ ಕಾರಿನ ಒಳಗೆ ಕುಳಿತವರು ಕೂಡಾ ಯಾರೂ ಮಾಸ್ಕ್ ಧರಿಸಿಲ್ಲ ಎನ್ನುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಹೀಗಾಗಿ ವಧು ಮತ್ತು ಆಕೆಯ ಕಡೆಯವರು ಎಲ್ಲಾ ರೀತಿಯಲ್ಲೂ ನಿಯಮ ಉಲ್ಲಂಘನೆ ಮಾಡಿದ್ದು, ಅವರ ವಿರುದ್ಧ ಮೋಟಾರು ವಾಹನ ಕಾಯ್ದೆ ಹಾಗೂ ಬೇರೆ ಬೇರೆ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಯುವತಿ ಚಲಿಸುತ್ತಿದ್ದ ಕಾರಿನ ಬಾನೆಟ್​ ಮೇಲೆ ಕುಳಿತಿದ್ದರೆ, ವಿಡಿಯೋಗ್ರಾಫರ್ ಅದನ್ನು ಚಿತ್ರೀಕರಿಸುತ್ತಿದ್ದ, ಕಾರಿನ ಒಳಗಿದ್ದವರು ಇದನ್ನು ಸಂಭ್ರಮಿಸುತ್ತಿದ್ದರು ಆದರೆ, ಇವರೆಲ್ಲರೂ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಕಾರಣ ವೈರಲ್ ವಿಡಿಯೋ ಆಧರಿಸಿ ಪೊಲೀಸರು ಅವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:
ಪಕ್ಕದಲ್ಲಿ ಪತಿ ಬಂದು ಕುಳಿತುಕೊಳ್ಳುತ್ತಿದ್ದಂತೆ ದೊಡ್ಡದಾಗಿ ಅಳುತ್ತ ಮತ್ತೊಬ್ಬರನ್ನು ತಬ್ಬಿಕೊಂಡ ವಧು; ಈ ವಿಡಿಯೋ ನೋಡಿದ್ರೆ ನಿಮಗೂ ನಗು ಬರುತ್ತೆ

Published On - 11:39 am, Wed, 14 July 21