ಪುಟಾಣಿ ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಪೋಷಕರ ಜವಾಬ್ದಾರಿ ತುಂಬಾ ಮುಖ್ಯ. ವಿಶೇಷವಾಗಿ ಈ ಅಂಬೆಗಾಲಿಡುವ ಮಕ್ಕಳ ಬಗ್ಗೆ ಎಷ್ಟು ಜಾಗೃತೆ ವಹಿಸಿದರೂ ಸಾಕಾಗೊಲ್ಲ. ಕೆಲವೊಮ್ಮೆ ಪೋಷಕರ ಅಥವಾ ಮನೆಯವರ ಕಣ್ತಪ್ಪಿ ಕೆಲವೊಂದು ಅಪಾಯಗಳು ಸಂಭವಿಸುತ್ತದೆ. ಇದು ಮಗುವಿನ ಪ್ರಾಣಕ್ಕೂ ಕಂಟಕವನ್ನು ತಂದೊಡ್ಡುತ್ತವೆ. ಇಂತಹ ಹಲವಾರು ಘಟನೆಗಳನ್ನು ನೀವು ಕೂಡಾ ನೋಡಿರಬಹುದಲ್ವಾ. ಸದ್ಯ ಅಂತಹದ್ದೇ ಘಟನೆಯೊಂದು ಇದೀಗ ನಡೆದಿದ್ದು, ಪೋಷಕರ ಅಜಾಗರೂಕತೆಯಿಂದ ಅಂಬೆಗಾಲಿಡುವ ಮಗುವೊಂದು ಅಪಾರ್ಟ್ಮೆಂಟ್ ಒಂದರ ರೂಫ್ ಮೇಲೆ ಸಿಕ್ಕಿಹಾಕಿಕೊಂಡಿದೆ. ನಂತರ ನೆರೆಹೊರೆಯವರು ರಕ್ಷಣೆಗೆ ಧಾವಿಸಿ ಮಗುವಿನ ಪ್ರಾಣವನ್ನು ರಕ್ಷಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗಿದ್ದು, ಅಪಾರ್ಟ್ಮೆಂಟ್ ನಿವಾಸಿಗಳ ಈ ಮಾನವೀಯ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ಈ ಘಟನೆ ಚೆನ್ನೈನಲ್ಲಿ ನಡೆದಿದ್ದು, ಇಲ್ಲಿನ ಅಪಾರ್ಟ್ಮೆಂಟ್ ಒಂದರಲ್ಲಿ ಪೋಷಕರ ಅಜಾಗರೂಕತೆಯಿಂದ ಮನೆಯಿಂದ ಹೊರ ಬಂದ ಅಂಬೆಗಾಲಿಡುವ ಮಗುವೊಂದು ಸೀದಾ ಅಪಾರ್ಟ್ಮೆಂಟ್ ನ ಪ್ಲಾಸ್ಟಿಕ್ ಶೀಟ್ ನಿಂದ ಮುಚ್ಚಲಾದ ರೂಫ್ ಮೇಲೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಅಪಾರ್ಟ್ ಮೆಂಟ್ ಹೌಸಿಂಗ್ ಸೊಸೈಟಿಯ ನಿವಾಸಿಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೂಫ್ ಮೇಲೆ ಸಿಕ್ಕಿಹಾಕಿಕೊಂಡಿದ್ದ ಮಗುವನ್ನು ರಕ್ಷಣೆ ಮಾಡಿದ್ದಾರೆ.
ಈ ವಿಡಿಯೋವನ್ನು @FOXTV kerala ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಅಪಾರ್ಟ್ಮೆಂಟ್ ಒಂದರ ಎರಡನೇ ಅಂತಸ್ತಿನ ರೂಫ್ ಶೀಟ್ ಮೇಲೆ ಪುಟ್ಟ ಕಂದಮ್ಮ ಸಿಕ್ಕಿಹಾಕಿಕೊಂಡಿರುವ ದೃಶ್ಯವನ್ನು ಕಾಣಬಹುದು. ಮಗು ಅಳುವ ಸದ್ದನ್ನು ಕೇಳಿಸಿ ಹೌಸಿಂಗ್ ಸೊಸೈಟಿಯ ನಿವಾಸಿಗಳು ಆಗುವಂತಹ ದೊಡ್ಡ ಅಪಾಯವನ್ನು ತಡೆಯಲು ಹರ ಸಾಹಸವನ್ನೇ ಮಾಡುತ್ತಾರೆ. ಮಗು ಕೆಳಗೆ ಬಿದ್ದರೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ಕೆಳಗೆ ಒಂದಷ್ಟು ಜನರು ಬೆಡ್ಶೀಟ್ ಹಿಡಿದುಕೊಳ್ಳುತ್ತಾರೆ. ನಂತರ ಫಸ್ಟ್ ಫ್ಲೋರ್ ನ ಕಿಟಕಿಯಿಂದ ವ್ಯಕ್ತಿಯೊಬ್ಬರು ಬಂದು ರೂಫ್ ಮೇಲೆ ಸಿಕ್ಕಿಹಾಕಿಕೊಂಡಿದ್ದ ಮಗುವನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ಇದನ್ನೂ ಓದಿ: ರಾಕ್ಷಸನಂತೆ ವೃದ್ಧ ತಂದೆಯನ್ನು ಥಳಿಸಿದ ಮಗ,ನೆಟ್ಟಿಗರು ಫುಲ್ ಗರಂ!
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅಪಾರ್ಟ್ಮೆಂಟ್ ನಿವಾಸಿಗಳ ಸಮಯ ಪ್ರಜ್ಞೆ ಹಾಗೂ ಮಾನವೀಯ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ