
ನವದೆಹಲಿ, ಜನವರಿ 29: ಯಾವುದೇ ಒಂದು ಬ್ಯುಸಿನೆಸ್ ಮಾಡಬೇಕೆಂದರೂ ಮೊದಲು ಆ ಜಾಗದಲ್ಲಿ ಯಾವುದರ ಅಗತ್ಯ ಜಾಸ್ತಿಯಿದೆ ಅಥವಾ ಯಾವುದರ ಪೂರೈಕೆ ಕಡಿಮೆಯಿದೆ ಎಂಬುದನ್ನು ಅಧ್ಯಯನ ಮಾಡುವುದು ಬಹಳ ಮುಖ್ಯ. ಇದು ಗೊತ್ತಾಯಿತೆಂದರೆ ಅರ್ಧ ಬ್ಯುಸಿನೆಸ್ ಗೆದ್ದಂತೆ. ಹಿಮಾಚಲ ಪ್ರದೇಶದಲ್ಲಿ ಪ್ರವಾಸಕ್ಕೆ ಹೋಗಿದ್ದ ಕಂಟೆಂಟ್ ಕ್ರಿಯೇಟರ್ ಒಬ್ಬ ಒಂದು ದಿನಕ್ಕೆ ಅಲ್ಲಿ ಎಷ್ಟು ಮ್ಯಾಗಿ (Maggi) ಮಾರಾಟವಾಗುತ್ತದೆ ಎಂದು ನೋಡುವ ಕುತೂಹಲದಿಂದ ಒಂದು ದಿನ ಮ್ಯಾಗಿ ಮಾಡಿ ಮಾರಾಟ ಮಾಡಿದ್ದಾನೆ.
ಕಂಟೆಂಟ್ ಕ್ರಿಯೇಟರ್ ಹಿಲ್ ಸ್ಟೇಷನ್ನಲ್ಲಿ ಮ್ಯಾಗಿ ಸ್ಟಾಲ್ ಸ್ಥಾಪಿಸುವುದರಿಂದ ಎಷ್ಟು ಹಣ ಗಳಿಸಬಹುದು ಎಂದು ತಿಳಿಯಲು, ಮ್ಯಾಗಿ ಸ್ಟಾಲ್ ಹಾಕಿದ್ದಾನೆ. ಆತ ಒಂದು ದಿನಕ್ಕೆ ಸಂಪಾದಿಸಿದ ಹಣವೆಷ್ಟು ಎಂದು ಕೇಳಿದರೆ ನೀವು ಶಾಕ್ ಆಗುತ್ತೀರಿ. ಹಿಮಾಲಯದಲ್ಲಿ ಮ್ಯಾಗಿ ಮಾರಾಟ ಮಾಡುವ ಮೂಲಕ ದಿನಕ್ಕೆ 21,000 ರೂ. ಗಳಿಸಿದ ಯುವಕ ಬಾದಲ್ ಠಾಕೂರ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ರೈಲಿನೊಳಗೆ ಮ್ಯಾಗಿ ಬೇಯಿಸಿ, ಚಹಾ ಮಾಡಿದ ಮಹಿಳೆ! ರೈಲ್ವೆ ಇಲಾಖೆ ಎಚ್ಚರಿಕೆ
ಪ್ರವಾಸಿಗರ ಬೇಡಿಕೆಯನ್ನು ಗುರುತಿಸಿ ಶೀತ ವಾತಾವರಣದಲ್ಲಿ ಬಿಸಿ ಮ್ಯಾಗಿಯನ್ನು ಮಾರಾಟ ಮಾಡಿದ ಆತನ ಪ್ರಯೋಗವು ಸೂಪರ್ ಸಕ್ಸಸ್ ಆಗಿದೆ. ಒಂದು ದಿನಕ್ಕೆ ಮ್ಯಾಗಿ ಮಾರಾಟ ಮಾಡಿ 21,000 ರೂ. ಸಂಪಾದಿಸಿದ್ದಾನೆಂದರೆ ಒಂದು ತಿಂಗಳಿಗೆ ಅಲ್ಲಿರುವ ಮ್ಯಾಗಿ ವ್ಯಾಪಾರಿಗಳ ಆದಾಯ ಇಂಜಿನಿಯರ್ಗಳಿಗಿಂತ ದುಪ್ಪಟ್ಟಾಯಿತಲ್ಲ ಎಂದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಬಾದಲ್ ಠಾಕೂರ್ ಪರ್ವತಗಳಲ್ಲಿ ಸಣ್ಣದೊಂದು ಮ್ಯಾಗಿ ಸ್ಟಾಲ್ ಹಾಕಿದ್ದ. ಕೇವಲ ಒಂದು ಟೇಬಲ್, ಒಂದು ಎಲ್‌ಪಿಜಿ ಸಿಲಿಂಡರ್, ಕೆಲವು ಪಾತ್ರೆಗಳನ್ನು ಇಟ್ಟುಕೊಂಡು ಒಂದು ಟಾರ್ಪಲ್ ಹಾಕಿಕೊಂಡು ಸ್ಟಾಲ್ ಹಾಕಿದ್ದ. ತಂಪಾದ ಸ್ಥಳದಲ್ಲಿ ಬಿಸಿ ಮ್ಯಾಗಿ ಎಷ್ಟು ಮಾರಾಟವಾಗುತ್ತದೆ ಎಂದು ನೋಡುವುದು ಅವನ ಉದ್ದೇಶವಾಗಿತ್ತು. ಈ ವೇಳೆ ಬಾದಲ್ ಠಾಕೂರ್ ಒಂದು ದಿನದಲ್ಲಿ 300ಕ್ಕೂ ಹೆಚ್ಚು ಮ್ಯಾಗಿ ಪ್ಲೇಟ್‌ಗಳನ್ನು ಮಾರಾಟ ಮಾಡಿದ್ದಾನೆ. ಕೇವಲ ನಾಲ್ಕೈದು ಗಂಟೆಗಳಲ್ಲಿ ಸುಮಾರು 200 ಪ್ಲೇಟ್‌ಗಳು ಮಾರಾಟವಾದವು. ಇಡೀ ದಿನದ ಒಟ್ಟು ಪ್ಲೇಟ್‌ಗಳು 300ರಿಂದ 350ರವರೆಗೆ ತಲುಪಿದವು.
ಇದನ್ನೂ ಓದಿ: ಮಗನ ಮೇಲೆ ದಾಳಿ ಮಾಡಿದ ಚಿರತೆಯನ್ನು ಕತ್ತಿಯಿಂದ ಕೊಚ್ಚಿ ಕೊಂದ ರೈತ
ಆತ ಒಂದು ಪ್ಲೇಟ್ ಪ್ಲೇನ್ ಮ್ಯಾಗಿಯನ್ನು 70 ರೂ.ಗೆ ಮಾರಾಟ ಮಾಡಿದ್ದರೆ, ಪನೀರ್ ಮ್ಯಾಗಿಯನ್ನು 100 ರೂ.ಗೆ ಮಾರಾಟ ಮಾಡಿದ್ದ. ಪ್ರತಿ ಪ್ಲೇಟ್‌ಗೆ ಸರಾಸರಿ 70 ರೂ. ಬೆಲೆ ಇದ್ದರೂ, ಒಟ್ಟು ದೈನಂದಿನ ಮಾರಾಟ ಸುಮಾರು 21,000 ಆಗಿತ್ತು. ಈ ಅಂಕಿ ಅಂಶವು ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ಅತ್ಯಂತ ಆಶ್ಚರ್ಯಗೊಳಿಸಿದೆ. ಆತ ತನ್ನ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ವೀಡಿಯೊ ಈಗ ವೈರಲ್ ಆಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:33 pm, Thu, 29 January 26