Viral Video: ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿಯಿತು; ಸೆಕೆಂಡುಗಳಲ್ಲಿ ಅಪಾಯದಿಂದ ಪಾರಾದ ಮಹಿಳೆ

ಜಿಟಿಜಿಟಿ ಮಳೆಯಲ್ಲಿ ಛತ್ರಿ ಹಿಡಿದು ಮಹಿಳೆಯೋರ್ವಳು ರಸ್ತೆಯಲ್ಲಿ ನಡೆದು ಸಾಗುತ್ತಿರುತ್ತಾಳೆ. ಕುಸಿದು ಬೀಳುತ್ತಿರುವ ಮರದಿಂದ ತಪ್ಪಿಸಿಕೊಂಡು ಅಪಾಯದಿಂದ ಪಾರಾದ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Viral Video: ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿಯಿತು; ಸೆಕೆಂಡುಗಳಲ್ಲಿ ಅಪಾಯದಿಂದ ಪಾರಾದ ಮಹಿಳೆ
ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿಯಿತು

Updated on: May 20, 2021 | 1:54 PM

ಭಯಂಕರ ತೌಕ್ತೆ ಚಂಡಮಾರುತದಿಂದ ಅದೆಷ್ಟೋ ಪ್ರದೇಶಗಳು ಹಾನಿಗೊಳಗಾಗಿವೆ. ಆರ್ಭಟದ ಮಳೆ, ಗಾಳಿಗೆ ಅದೆಷ್ಟೋ ಮರಗಳು ಕುಸಿದು ಬಿದ್ದಿವೆ. ಇಂತಹ ಸಮಯದಲ್ಲಿ ಕುಸಿದು ಬೀಳುತ್ತಿರುವ ಮರದಿಂದ ತಪ್ಪಿಸಿಕೊಂಡು ಅಪಾಯದಿಂದ ಪಾರಾದ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋ, ನೋಡುತ್ತಿದ್ದಂತೆಯೇ ಒಂದು ಕ್ಷಣ ಬೆಚ್ಚಿಬೀಳಿಸುವಂತಿದೆ.

ವಿಡಿಯೋದಲ್ಲಿ ಗಮನಿಸುವಂತೆ, ಜಿಟಿಜಿಟಿ ಮಳೆಯಲ್ಲಿ ಛತ್ರಿ ಹಿಡಿದು ಮಹಿಳೆಯೋರ್ವಳು ರಸ್ತೆಯಲ್ಲಿ ನಡೆದು ಸಾಗುತ್ತಿರುತ್ತಾಳೆ. ಗಾಳಿ ಬೇರೆ ಜೋರಾಗಿ ಬೀಸುತ್ತಿದೆ. ಇದ್ದಕ್ಕಿದ್ದಂತೆ ಎದುರಿದ್ದ ಮರ ಕುಸಿದು ಬೀಳುತ್ತದೆ. ಸೆಕೆಂಡುಗಳಲ್ಲಿ ಮಹಿಳೆ ಅಪಾಯದಿಂದ ಪಾರಾಗುತ್ತಾಳೆ. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಮಹಿಳೆಯ ರೋಚಕ ದೃಶ್ಯ ಸೆರೆಯಾಗಿದೆ.

ಮರ ಬೀಳುತ್ತಿರುವುದು ಗೋಚರವಾಗುತ್ತಿದ್ದಂತೆಯೇ ತಡಮಾಡದೇ ಆಕೆ ಹಿಂದಕ್ಕೆ ಬಂದು ನಿಲ್ಲುತ್ತಾಳೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ 8 ಸೆಕೆಂಡುಗಳ ಸಿಸಿಟಿವಿ ವಿಡಿಯೋ 30 ಸಾವಿರ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ತೌಕ್ತೆ ಚಂಡಮಾರುತದ ಗಾಳಿಯು ಭಯಂಕರವಾಗಿತ್ತು. ಇದರಿಂದ 2,500ಕ್ಕೂ ಹೆಚ್ಚು ಮನೆಗಳಿಗೆ ಹಾನಿಯುಂಟಾಗಿದೆ. ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಮೇ ತಿಂಗಳಿನಲ್ಲೇ ಅತಿ ಹೆಚ್ಚು ಮಳೆಯಾಗಿದ್ದು, ತೌಕ್ತೆ ಚಂಡಮಾರುತದಿಂದ 24 ಗಂಟೆಗಳಲ್ಲಿ 230 ಮಿಮೀ ಮಳೆಯಾಗಿ ಇತಿಹಾಸ ಸೃಷ್ಟಿಸಿದೆ. ಮೇ 17ರಂದು ರೆಕಾರ್ಡ್​ ಆದ ವಿಡಿಯೋವನ್ನು ಎಎನ್​ಐ ವರದಿ ಮಾಡಿದೆ.

ಮುಂಬೈನಲ್ಲಿ ತಾಕ್ತೆ ಚಂಡಮಾರುತದಿಂದಾಗಿ ಭಾರೀ ಮಳೆಯಾಗಿದ್ದು ಗಂಟೆಗೆ 100 ಕಿಲೋಮೀಟರ್​ಗಿಂತಲೂ ವೇಗದಲ್ಲಿ ಗಾಳಿ ಬೀಸಿದೆ. ಅದೆಷ್ಟೋ ದೈತ್ಯ ಮರಗಳು ನೆಲಕ್ಕುರುಳಿವೆ. ಭೀಕರ ಮಳೆ, ಗಾಳಿಯಿಂದ 11 ಗಂಟೆಗಳ ಕಾಲ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಗಿತಗೊಳಿಸಲಾಗುತ್ತು.