Dakshina Kannada: ಸುಳ್ಯದಲ್ಲಿ ಗುಂಡಿ ತೋಡುವಾಗ ಪತ್ತೆಯಾಯ್ತು ಪುರಾತನ ಕಾಲದ ಗುಹೆ

| Updated By: Rakesh Nayak Manchi

Updated on: Aug 28, 2022 | 3:26 PM

ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ ಪುರಾತನ ಕಾಲದ ಗುಹೆ ಪತ್ತೆಯಾಗಿದೆ. ಇದನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮನಿಸುತ್ತಿದ್ದು, ಪತ್ತೆಯಾದ ಗುಹೆ ಹಾಗೂ ಅವಶೇಷಗಳ ಬಗ್ಗೆ ಪುರಾತತ್ವಶಾಸ್ತ್ರಜ್ಞರು ಅಧ್ಯಯನ ನಡೆಸುತ್ತಿದ್ದಾರೆ.

Dakshina Kannada: ಸುಳ್ಯದಲ್ಲಿ ಗುಂಡಿ ತೋಡುವಾಗ ಪತ್ತೆಯಾಯ್ತು ಪುರಾತನ ಕಾಲದ ಗುಹೆ
ಸುಳ್ಯದಲ್ಲಿ ಪತ್ತೆಯಾದ ಪುರಾತನ ಕಾಲದ ಗುಹೆ ಮತ್ತು ಅವಶೇಷಗಳು
Follow us on

ದಕ್ಷಿಣ ಕನ್ನಡ: ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ರೈತರೊಬ್ಬರು ಮಣ್ಣನ್ನು ಅಗೆಯುತ್ತಿದ್ದಾಗ ಒಂದು ಭೂಭಾಗ ಕುಸಿದುಬಿದ್ದು ಪುರಾತನ ಕಾಲದ ಗುಹೆಯೊಂದು ಪತ್ತೆಯಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಣ್ಣಿನ ಮಡಕೆಗಳು, ಬಟ್ಟಲುಗಳು ಮತ್ತು ವಿವಿಧ ಆಕಾರಗಳ ಸಣ್ಣ ಪಾತ್ರೆಗಳ ಅವಶೇಷಗಳು ಕಂಡುಬಂದಿವೆ. ಸದ್ಯ ಉಡುಪಿ ಪುರಾತತ್ವಶಾಸ್ತ್ರಜ್ಞರು ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ.

ಎಡಮಂಗಲ ಗ್ರಾಮದಲ್ಲಿ ರೈತ ಕಲ್ಲೇಂಬಿ ವಿಶ್ವನಾಥ ಗೌಡ ಎಂಬುವರಿಗೆ ಸೇರಿದ ಜಮೀನಿನಲ್ಲಿ ಖರ್ಜೂರ ನೆಡಲು ಗುಂಡಿ ತೋಡಲಾಗುತ್ತಿತ್ತು. ಈ ವೇಳೆ ಭೂಮಿ ಬಾಯ್ತೆರೆದು ದೊಡ್ಡ ಹೊಂಡದಂತಾಗಿದೆ. ಸ್ಥಳೀಯರು ಇದನ್ನು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಗುಹೆ ಎಂದು ತಿಳಿದುಬಂದಿದೆ. ಈ ಗುಹೆಯಲ್ಲಿ ಮಣ್ಣಿನ ಮಡಕೆಗಳು, ಬಟ್ಟಲುಗಳು ಮತ್ತು ವಿವಿಧ ಆಕಾರಗಳ ಸಣ್ಣ ಪಾತ್ರೆಗಳ ಅವಶೇಷಗಳು ಕಂಡುಬಂದಿದ್ದು, ಈ ಬಗ್ಗೆ ಪುರಾತತ್ವಶಾಸ್ತ್ರಜ್ಞರಿಗೆ ಮಾಹಿತಿ ತಿಳಿಸಲಾಗಿದೆ.

ಅದರಂತೆ, ಸ್ಥಳಕ್ಕೆ ಭೇಟಿ ಕೊಟ್ಟ ಉಡುಪಿಯ ಶಿರ್ವದ ಎಂಎಸ್‌ಆರ್‌ಎಸ್ ಕಾಲೇಜಿನ ಪುರಾತತ್ವಶಾಸ್ತ್ರಜ್ಞ ಪ್ರೊಫೆಸರ್ ಟಿ ಮುರುಗೇಶಿ ನೇತೃತ್ವದ ತಂಡವು ಉತ್ಖನನಗೊಂಡ ಸ್ಥಳದ ಹಾಗೂ ಪತ್ತೆಯಾದ ಅವಶೇಷಗಳ ಬಗ್ಗೆ ಅಧ್ಯಯನ ನಡೆಸುವಲ್ಲಿ ನಿರತವಾಗಿದೆ. ಸಂಪೂರ್ಣ ವೈಜ್ಞಾನಿಕ ಪರೀಕ್ಷೆಯ ನಂತರವಷ್ಟೇ ಪತ್ತೆಯಾದ ಗುಹೆ ಹಾಗೂ ಅವಶೇಷಗಳ ಬಗ್ಗೆ ಸಂಪೂರ್ಣ ವಿವರಗಳು ತಿಳಿದುಬರಲಿದೆ. ಸದ್ಯ ಪುರಾತನ ಕಾಲದ ಗುಹೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಆಗಮಿಸುತ್ತಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ