Viral: 16ರ ಬಾಲೆಯನ್ನು ಮದುವೆಯಾದ ಮುದುಕ! ವಿಷಯ ಬಹಿರಂಗವಾಗುತ್ತಿದ್ದಂತೆ ಜಡಲ ಸ್ವಾಮಿ ಎಸ್ಕೇಪ್
ಮಾಟ, ಮಂತ್ರದ ಹೆಸರಿನಲ್ಲಿ 16ವರ್ಷದ ಬಾಲಕಿಯನ್ನು ಮದುವೆಯಾಗಿದ್ದಾನೆ. ಈ ವಿಚಾರ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕೃಷ್ಣಾಪುರ ಗ್ರಾಮದಲ್ಲಿ ಸಂಚಲನ ಮೂಡಿಸಿದ್ದು, ಜಿಲ್ಲೆಯಾದ್ಯಂತ ಚರ್ಚೆಯಾಗುತ್ತಿದೆ.
ಮುದುಕನೊಬ್ಬ ಮಾಟ, ಮಂತ್ರದ ಹೆಸರಿನಲ್ಲಿ 16 ವರ್ಷದ ಬಾಲಕಿಯನ್ನು ಪುಸಲಾಯಿಸಿಕೊಂಡು ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ. ಇಂತಹ ಮೋಸದ ಹಾಗೂ ಅಮಾನವೀಯ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಈ ವಿಷಯ ಅಕ್ಕಪಕ್ಕದವರಿಗೆ ತಿಳಿದು ಪೊಲೀಸರ ಬಳಿ ಮಾಹಿತಿ ತಲುಪುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ. ಸದ್ಯ ಮುದುಕನೊಬ್ಬ ಅಪ್ರಾಪ್ತೆಯನ್ನು ಮದುವೆಯಾದ ವಿಚಾರ ಕೃಷ್ಣಾಪುರ ಗ್ರಾಮದಲ್ಲಿ ಸಂಚಲನ ಮೂಡಿಸಿದ್ದು, ಜಿಲ್ಲೆಯಾದ್ಯಂತ ಚರ್ಚೆಯಾಗುತ್ತಿದೆ.
ರಾಪ್ತಾಡು ಮಂಡಲದ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ಆರೋಗ್ಯ ಸರಿಯಿಲ್ಲ ಎಂದು ತನ್ನ ಮಗಳ ಸಹಿತ ಜಡಲ ಸ್ವಾಮಿ ಬಳಿ ಬಂದಿದ್ದಾರೆ. ಅದರಂತೆ ಆಕೆಗೆ ದೆವ್ವ ಹಿಡಿದಿದೆಯೆಂದು ನಿಗೂಢ ಪೂಜೆಗಳನ್ನು ಮಾಡಿದ ಜಡಲ ಸ್ವಾಮಿ, ತನ್ನ ಪೂಜೆಯಿಂದಲೇ ಆಕೆಯ ಕಾಯಿಲೆ ವಾಸಿಯಾಗಿದೆ ಎಂದು ನಂಬಿಸಿದ್ದಾನೆ. ಇದೇ ವೇಳೆ ಜಡಲ ಸ್ವಾಮಿಯ ಕಣ್ಣು ಆ ವ್ಯಕ್ತಿಯ ಮಗಳ ಮೇಲೆ ಬಿದ್ದಿದೆ. ಇಷ್ಟಕ್ಕೂ ಸುಮ್ಮನಾಗದ ಆತ ಬಾಲಕಿಯನ್ನ ಪುಸಲಾಯಿಸಿಕೊಂಡು ಮೂರು ತಿಂಗಳ ಹಿಂದೆ ಗುತ್ತು ಚಪ್ಪಡ ಅಲ್ಲದ ರಪಟು ಮಂಡಲದ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ.
ಈ ವಿಷಯ ಬಾಲಕಿಯ ಅಕ್ಕ-ಪಕ್ಕದವರಿಗೆ ತಿಳಿದು ಐಸಿಡಿಎಸ್ ಪಿಡಿ ಶ್ರೀದೇವಿ ಅವರಿಗೆ ಕರೆ ಮಾಡಿ ಮಾಹಿತಿ ತಲುಪಿಸಿದ್ದಾರೆ. ಅದರಂತೆ ಐಸಿಡಿಎಸ್, ಸಿಡಿಪಿಒ ಧನಲಕ್ಷ್ಮಿ ಹಾಗೂ ರಾಪ್ತಾಡು ಎಸ್‌ಎಸ್‌ಐ ರಾಘವರೆಡ್ಡಿ ಗ್ರಾಮಕ್ಕೆ ತೆರಳಿ ತನಿಖೆ ಆರಂಭಿಸಿದರು. ಅಧಿಕಾರಿಗಳು ಫೀಲ್ಡಿಗಿಳಿದಿರುವ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಜಡಲ ಸ್ವಾಮಿ ಪರಾರಿಯಾಗಿದ್ದಾನೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಐಸಿಡಿಎಸ್ ಅಧಿಕಾರಿಗಳು ಬಾಲಕಿಯನ್ನು ಅನಂತಪುರದ ಉಜ್ವಲಾ ಹೋಮ್‌ಗೆ ಸ್ಥಳಾಂತರಿಸಿದ್ದಾರೆ.
ಯಲ್ಲನೂರು ಮಂಡಲದ ಪಾತಪಾಲೆಂನ ಜಯಕೃಷ್ಣ ಅಲಿಯಾಸ್ ಜಡಲ ಸ್ವಾಮಿ (62) ಸಂಸಾರ ಸಹಿತ ಕೆಲ ಕಾಲದ ಹಿಂದೆ ಬುಕ್ಕಪಟ್ಟಣ ಮಂಡಲದ ಕೃಷ್ಣಾಪುರ ಗ್ರಾಮಕ್ಕೆ ವಲಸೆ ಬಂದು ನೆಲೆಸಿದ್ದನು. ಇಲ್ಲಿ ಕ್ಷುದ್ರ ಪೂಜೆ ಸಲ್ಲಿಸಿ ಪ್ರಸಿದ್ಧನಾಗಿದ್ದ ಜಡಲ ಸ್ವಾಮಿ, ವೈಸಿಪಿ ಗ್ರಾಮ ಸಮಿತಿ ಅಧ್ಯಕ್ಷನೂ ಆಗಿದ್ದಾನೆ. ಈತನಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು, ಓರ್ವಳಿಗೆ ಮದುವೆಯಾಗಿದೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:17 pm, Sun, 28 August 22