ತುಳಸಿ ಹಾರ, ಯೂಲೂ ಬೈಕ್ ಮೇಲೆ ಮೆರವಣಿಗೆ​.. ₹2 ಲಕ್ಷಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಮದುವೆಯಾದ ಜೋಡಿ

| Updated By: guruganesh bhat

Updated on: Apr 04, 2021 | 3:51 PM

ವಿವಾಹ ಮಹೋತ್ಸವದಲ್ಲಿ ವಧು ವರರು ತುಳಸಿ ಹಾರವನ್ನು ಬದಲಾಯಿಸಿಕೊಂಡಿದ್ದು, ಅದರ ಕುರಿತಾಗಿ ವಿಚಾರಿಸಿದಾಗ ತುಳಸಿ ಎಲೆಗಳು ಒಣಗಿದ ನಂತರ ಅದನ್ನು ಪುಡಿ ಮಾಡಿ ಚಹಾದಲ್ಲಿ ಬಳಸಬಹುದಾಗಿದೆ. ಈ ಹಾರವನ್ನು ಗಾಜಿಯಾಪುರದ ನನ್ನ ಸ್ನೇಹಿತರು ಮಾಡಿಕೊಟ್ಟಿದ್ದಾರೆ ಎಂದು ವಿವರಣೆ ನೀಡಿದ್ದಾರೆ.

ತುಳಸಿ ಹಾರ, ಯೂಲೂ ಬೈಕ್ ಮೇಲೆ ಮೆರವಣಿಗೆ​.. ₹2 ಲಕ್ಷಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಮದುವೆಯಾದ ಜೋಡಿ
ತುಳಸಿ ಹಾರ ಬದಲಾಯಿಸಿಕೊಂಡ ನವವಿವಾಹಿತರು
Follow us on

ಭಾರತದಲ್ಲಿ ಮದುವೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಶಾಸ್ತ್ರ, ಸಂಪ್ರದಾಯಗಳ ವಿಚಾರದಲ್ಲಿ ಎಷ್ಟು ಮಹತ್ವವಿದೆಯೋ, ಅಷ್ಟೇ ಅಥವಾ ಅದಕ್ಕಿಂತ ತುಸು ಹೆಚ್ಚೇ ಮಹತ್ವ ವಿಜೃಂಭಣೆಗೂ ಇದೆ. ಮದುವೆ ಎಂದರೆ ಹೀಗಿರಬೇಕು, ಹಾಗಿರಬೇಕು, ಅದ್ದೂರಿಯಾಗಿ ಆಗಬೇಕು, ಇಡೀ ಊರೇ ಹುಬ್ಬೇರಿಸುವಂತೆ ಇರಬೇಕು ಎಂದು ಅನೇಕರು ತಮ್ಮ ಮದುವೆ ಬಗ್ಗೆ ವರ್ಷಗಳ ಕಾಲ ಕನಸು ಕಂಡಿರುತ್ತಾರೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಅತ್ಯಂತ ಸರಳವಾಗಿ ಮದುವೆ ಆಗಬೇಕು. ಯಾವ ಖರ್ಚಿಲ್ಲದೇ, ಆಡಂಬರವಿಲ್ಲದೇ, ಗೌಜು, ಗದ್ದಲವಿಲ್ಲದೇ ಮದುವೆ ಆಗುವುದರಲ್ಲೇ ಖುಷಿ ಇದೆ ಎನ್ನುವವರೂ ಇದ್ದಾರೆ.

ಸರಳ ಮದುವೆಯೇ ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗುತ್ತಿದೆ ಕೂಡ. ಹೀಗಿರುವಾಗ ದೆಹಲಿಯ ಜೋಡಿಯೊಂದು ಕೊಂಚ ವಿಭಿನ್ನವಾಗಿ, ಸರಳವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಮದುವೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆದಿತ್ಯ ಅಗರ್​ವಾಲ್ ಹಾಗೂ ಮಾಧುರಿ ಬಲೋಡಿ ಎನ್ನುವ ಜೋಡಿ ವಿಶಿಷ್ಟ ರೀತಿಯಲ್ಲಿ ಮದುವೆಯಾಗಿದ್ದು, ತಮ್ಮ ವಿವಾಹ ಕಾರ್ಯಕ್ರಮದಲ್ಲಿ ಪರಿಸರಕ್ಕೆ ಹಾನಿ ಉಂಟುಮಾಡಬಹುದಾದ ವಸ್ತುಗಳನ್ನು ಬಳಸದೇ ಪರಿಸರ ಪ್ರೀತಿ ಮೆರೆದಿದ್ದಾರೆ.

ಪರಿಸರ ಸ್ನೇಹಿ ವಿವಾಹ ಆಗಬೇಕು ಎನ್ನುವುದು ವಧುವಿನ ಅಪೇಕ್ಷೆಯಾಗಿದ್ದು ಅದಕ್ಕೆ ವರ ಹಾಗೂ ಕುಟುಂಬಸ್ಥರು ಬೆಂಬಲ ಸೂಚಿಸಿದ್ದಾರೆ. ವರ ಆದಿತ್ಯ ಅಗರ್​ವಾಲ್​ ಮದುವೆಯ ದಿನ ಕಾರಿನಲ್ಲಿ ಮೆರವಣಿಗೆ ಮಾಡುವ ಬದಲು ಯೂಲೂ ಬೈಕ್​ ಮೂಲಕ ಆಗಮಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವರ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ.

ಯೂಲೂ ಬೈಕ್​ ಮೇಲೆ ಮೆರವಣಿಗೆಯಲ್ಲಿ ಬಂದ ವರ

ಮೇಲಾಗಿ ಈ ಜೋಡಿ ಮದುವೆಗೆ ಯಾವುದೇ ಕಲ್ಯಾಣ ಮಂಟಪ ಅಥವಾ ಛತ್ರಗಳ ಮೊರೆ ಹೋಗದೇ ವಧುವಿನ ಸಂಬಂಧಿಕರ ಮನೆಯ ಕೈದೋಟದಲ್ಲೇ ಮದುವೆಯಾಗಿದ್ದಾರೆ. ಹಳೆಯ ಬಾಟಲಿ, ಸುದ್ದಿ ಪತ್ರಿಕೆಗಳು ಹಾಗೂ ಇನ್ನಿತರ ಪರಿಸರ ಸ್ನೇಹಿ ವಸ್ತುಗಳ ಮೂಲಕ ಮರಗಿಡಗಳನ್ನು ಅಲಂಕರಿಸಿ ಅದನ್ನೇ ಮದುವೆ ಮಂಟಪವನ್ನಾಗಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಾಧುರಿ ನಾವು ಮನೆಯಿಂದ ವಸ್ತುಗಳನ್ನು ಎಸೆಯುವ ಬದಲು ಮರುಬಳಕೆ ಮಾಡುವುದಕ್ಕೆ ಪ್ರಾಶಸ್ತ್ಯ ನೀಡುತ್ತೇವೆ. ಅದನ್ನು ನಾನು ಬಾಲ್ಯದಿಂದಲೂ ಅನುಸರಿಸಿಕೊಂಡು ಬಂದಿದ್ದೇನೆ. ಮದುವೆಗೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸದೇ ಡಿಜಿಟಲ್ ಆಮಂತ್ರಣ ಪತ್ರಿಕೆಯ ಮೂಲಕ ಬಂಧುಬಳಗದವರನ್ನು ಆಹ್ವಾನಿಸಿದ್ದೇವೆ. ಹಾಗೆಯೇ, ಮದುವೆ ಮಂಟಪದಲ್ಲಿ ಬ್ಯಾನರ್ ಕಟ್ಟುವ ಬದಲು ಹಲಗೆಯ ಮೇಲೆ ಸೀಮೆಸುಣ್ಣದಿಂದ ಅಲಂಕರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ವಿಶೇಷವೆಂದರೆ ವಿವಾಹ ಮಹೋತ್ಸವದಲ್ಲಿ ವಧು ವರರು ತುಳಸಿ ಹಾರವನ್ನು ಬದಲಾಯಿಸಿಕೊಂಡಿದ್ದು, ಅದರ ಕುರಿತಾಗಿ ವಿಚಾರಿಸಿದಾಗ ತುಳಸಿ ಎಲೆಗಳು ಒಣಗಿದ ನಂತರ ಅದನ್ನು ಪುಡಿ ಮಾಡಿ ಚಹಾದಲ್ಲಿ ಬಳಸಬಹುದಾಗಿದೆ. ಈ ಹಾರವನ್ನು ಗಾಜಿಯಾಪುರದ ನನ್ನ ಸ್ನೇಹಿತರು ಮಾಡಿಕೊಟ್ಟಿದ್ದಾರೆ ಎಂದು ವಿವರಣೆ ನೀಡಿದ್ದಾರೆ.

ಸ್ಲೇಟು, ಬಳಪದಲ್ಲಿ ವಧು ವರರ ಹೆಸರು ಬರೆದು ಫಲಕ ತಯಾರು

ಆಶೀರ್ವಾದವೇ ಉಡುಗೊರೆ
ಇವರಿಬ್ಬರ ಮದುವೆಯಲ್ಲಿ ಯಾವುದೇ ತೆರನಾದ ಉಡುಗೊರೆ ವಿನಿಮಯವಾಗಿಲ್ಲ ಎನ್ನುವುದು ಇನ್ನೊಂದು ವಿಶೇಷ. ಎರಡೂ ಕುಟುಂಬದವರು ತಲಾ ಒಂದೊಂದು ಕೆಜಿ ಹಣ್ಣುಗಳನ್ನು ಖರೀದಿಸಿದ್ದು ಬಿಟ್ಟರೆ ಬೇರಾವ ಉಡುಗೊರೆಗಳನ್ನೂ ಹಂಚಿಕೊಂಡಿಲ್ಲ ಎಂದು ನವವಿವಾಹಿತರು ತಿಳಿಸಿದ್ದಾರೆ. ಅಲ್ಲದೇ ₹2 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡದೇ ಮದುವೆಯಾಗಬೇಕು ಎಂದು ನಿರ್ಧರಿಸಿದ ಈ ಜೋಡಿ ಯಾವುದೇ ದುಂದುವೆಚ್ಚ ಮಾಡಿಲ್ಲ. ವಧುವಿನ ಸೀರೆ ₹2,500ಬೆಲೆ ಬಾಳುವುದಾಗಿದ್ದು, ವರನ ಧಿರಿಸು ₹3,000 ಮೌಲ್ಯದ್ದಾಗಿದೆ. ಇಡೀ ವಿವಾಹ ಕಾರ್ಯಕ್ರಮದಲ್ಲಿ ಹೊಸ ವಸ್ತುಗಳಿಗಿಂತಲೂ ಮರುಬಳಕೆ ಮಾಡಬಹುದಾದ ವಸ್ತುಗಳಿಗೆ ಪ್ರಾಧಾನ್ಯತೆ ನೀಡಿದ ಸಲುವಾಗಿ ಅವರ ಯೋಜನೆಯಂತೆ ಕಡಿಮೆ ವೆಚ್ಚದಲ್ಲಿ ಮದುವೆ ನೆರವೇರಿದೆ.

ಅಲಂಕೃತಗೊಂಡ ಕೈದೋಟ

ಮರುಬಳಕೆ ವಸ್ತುಗಳಿಂದ ಸಿಂಗಾರ

ಇದನ್ನೂ ಓದಿ:
ಬೆಳಗ್ಗೆ ಮದುವೆ, ಸಂಜೆ ಪೊಲೀಸ್​ ಸ್ಟೇಷನ್​ಗೆ ಹಾಜರ್​​; ವಿವಾದದಲ್ಲಿ ಚೈತ್ರಾ ಕೋಟೂರ್ ವಿವಾಹ ವಿಚಾರ! 

ಚಹಲ್-ಧನಶ್ರೀ ಮದುವೆ ಮೂವಿ ರಿಲೀಸ್: ಸಖತ್​ ಸ್ಟೆಪ್ಸ್​ ಹಾಕಿದ ಕ್ರಿಕೆಟಿಗರು, ಕಾಮಿಡಿ ಮೂಡ್​ನಲ್ಲಿ ಚಹಲ್.. ವಿಡಿಯೋ ನೋಡಿ