ರಾಮಾಯಣ ಧಾರಾವಾಹಿ ಚಿತ್ರೀಕರಣದ ವೇಳೆ ನಡೆದಿತ್ತು ಅಚ್ಚರಿಯ ಸಂಗತಿ: ಸೀತಾ ಪಾತ್ರಧಾರಿ ದೀಪಿಕಾ ಹೇಳಿದ್ದೇನು?

ರಮಾನಂದ್ ಸಾಗರ್ ಅವರ ʼರಾಮಾಯಣʼ ಧಾರಾವಾಹಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಈ ಧಾರಾವಾಹಿಗೆ ಅಸಂಖ್ಯಾತ ಅಭಿಮಾನಿಗಳಾಗಿದ್ದಾರೆ. ಈ ಧಾರಾವಾಹಿ ಶೂಟಿಂಗ್ ವೇಳೆ ಒಂದು ಸ್ವಾರಸ್ಯಕರ ಘಟನೆ ನಡೆದಿತ್ತು, ಈ ಚಮತ್ಕಾರಿ ಘಟನೆಯ ಬಗ್ಗೆ  ಈ ಧಾರಾವಾಹಿಯಲ್ಲಿ ಸೀತಾಮಾತೆಯ ಪಾತ್ರವನ್ನು ನಿರ್ವಹಿಸಿದ್ದ  ನಟಿ ದೀಪಿಕಾ ಚಿಖ್ಲಿಯಾ ಟೋಪಿವಾಲಾ ಅವರು ಹೇಳಿದ್ದಾರೆ. ಈ ಕುರಿತ ವೈರಲ್ ವಿಡಿಯೋ ಇಲ್ಲಿದೆ. 

ರಾಮಾಯಣ ಧಾರಾವಾಹಿ ಚಿತ್ರೀಕರಣದ ವೇಳೆ ನಡೆದಿತ್ತು ಅಚ್ಚರಿಯ ಸಂಗತಿ: ಸೀತಾ ಪಾತ್ರಧಾರಿ ದೀಪಿಕಾ ಹೇಳಿದ್ದೇನು?
ವೈರಲ್​ ವಿಡಿಯೋ
Edited By:

Updated on: Jan 16, 2024 | 4:39 PM

ರಮಾನಂದ್ ಸಾಗರ್ ಅವರ ರಾಮಾಯಣ ಧಾರಾವಾಹಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. 1987 ರಿಂದ 1988 ರವೆಗೆ ಸುದೀರ್ಘ ಕಾಲ ಪ್ರಸಾರವಾಗಿದ್ದ ಈ ಧಾರಾವಾಹಿಯನ್ನು ಕೊರೊನಾ ಸಮಯದಲ್ಲಿ ಮರುಪ್ರಸಾರ ಮಾಡಲಾಗಿದ್ದು, ಈ ಸಮಯದಲ್ಲೂ ಭರ್ಜರಿ ಪ್ರದರ್ಶನವನ್ನು ಕಂಡಿತ್ತು.  ಆದ್ರೆ ಜನಪ್ರಿಯ ಧಾರಾವಾಹಿಯ ವಿಚಾರ ಈಗ್ಯಾಕೆ ಅಂತ ಯೋಚ್ನೇ ಮಾಡ್ತಿದ್ದೀರಾ, ಈ ಧಾರಾವಾಹಿಗೆ  ಪ್ರಭು ಶ್ರೀರಾಮನ  ಕೃಪೆ ಎಷ್ಟಿತ್ತು ಎಂಬ ಬಗ್ಗೆ ರಾಮಾಯಾಣ ಧಾರಾವಾಹಿಯಲ್ಲಿ ಸೀತಾಮಾತೆಯ ಪಾತ್ರವನ್ನು ನಿರ್ವಹಿಸುತ್ತಿದ್ದ ನಟಿ ದೀಪಿಕಾ ಚಿಖ್ಲಿಯಾ ಟೋಪಿವಾಲಾ ಒಂದು ಅದ್ಭುತ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು ಡಾ.  ಪೂರ್ಣಿಮಾ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬನ್ನಿ ಆ ಸ್ವಾರಸ್ಯಕರ ಘಟನೆ ಏನೆಂಬುದನ್ನು ನೋಡೋಣ.

ರಾಮಾಯಾಣ ಧಾರಾವಾಹಿ ಶೂಟಿಂಗ್ ವೇಳೆ ನಡೆದ ದೇವರ ಚಮತ್ಕಾರದ ಬಗ್ಗೆ ನಟಿ ದೀಪಿಕಾ ಚಿಖ್ಲಿಯಾ ಟೋಪಿವಾಲಾ ಹಂಚಿಕೊಂಡಿದ್ದಾರೆ. ಅವರು ಹೇಳುತ್ತಾರೆ,   ಒಂದು ದಿನ ಪ್ರಭು ಶ್ರೀರಾಮಚಂದ್ರ ಚಿಕ್ಕ ಮಗುವಾಗಿದ್ದಾಗ ಕಾಗೆಯೊಂದಿಗೆ ಆಟವಾಡುತ್ತಿದ್ದ ದೃಶ್ಯವನ್ನು ಚಿತ್ರೀಕರಿಸಬೇಕಿತ್ತು. ಆದ್ರೆ ಆಗ ವಿ.ಎಫ್.ಎಕ್ಸ್ ಅಥವಾ ಗ್ರಾಫಿಕ್ಸ್  ಇರಲಿಲ್ಲ. ಆ ಸಂದರ್ಭದಲ್ಲಿ ಕಾಗೆಯನ್ನು ಬಳಸಿಕೊಂಡು ಈ ದೃಶ್ಯವನ್ನು ಹೇಗೆ ಚಿತ್ರೀಕರಣ ಮಾಡುವುದು, ಇದು ನಮ್ಮಿಂದ ಸಾಧ್ಯಾನಾ ಅಂತ ರಮಾನಂದ ಸಾಗರ್ ಅವರು ಯೋಚಿಸುತ್ತಾರೆ. ಶೂಟಿಂಗ್ ಮಾಡಿದ್ರೂ ಈಗ ಕಾಗೆಗಳನ್ನು ಎಲ್ಲಿಂದ ತರೋದು, ಅಂತ ರಮಾನಂದ ಸಾಗರ್ ಅವರು ಚಿಂತಿತರಾಗುತ್ತಾರೆ. ಹೀಗೆ ಯೋಚಿಸುತ್ತಿರುವಾಗ ನಮ್ಮ ಶೂಟಿಂಗ್ ಸ್ಥಳದ ಬಳಿ ಸಂಜೆಯ ಹೊತ್ತಿಗೆ ಕಾಗೆಗಳು ಬರುತ್ತೆ  ಅಲ್ವಾ, ಅದೇ ಕಾಗೆಗಳನ್ನು  ಹಿಡಿದು ಹೇಗಾದರೂ ಶ್ರೀ ರಾಮನ ಬಾಲ್ಯಕ್ಕೆ ಸಂಬಂಧಿಸಿದ ಈ  ಒಂದು ದೃಶ್ಯವನ್ನು ಶೂಟ್ ಮಾಡಬೇಕೆಂದು ರಮಾನಂದ್ ಸಾಗರ್ ಅವರು ದೃಢ ನಿರ್ಧಾರವನ್ನು ಮಾಡುತ್ತಾರೆ. ನಂತರ ಎಲ್ಲರೂ ಸೇರಿ ಹೇಗೋ ರಾತ್ರಿ 12 ಗಂಟೆಯ ಹೊತ್ತಿಗೆ 4 ಕಾಗೆಗಳನ್ನು ಸೆರೆ ಹಿಡಿಯುತ್ತಾರೆ. ಆದರೆ ಬೆಳಗ್ಗೆ ಧಾರಾವಾಹಿ  ಚಿತ್ರೀಕರಣಕ್ಕೂ ಮುನ್ನವೇ ಪಂಜರದಲ್ಲಿದ್ದ ಮೂರು ಕಾಗೆಗಳು ಹಾರಿ ಹೋಗಿ, ಕೇವಲ  ಒಂದು ಕಾಗೆ ಮಾತ್ರ ಉಳಿದಿತ್ತು.

ಆದ್ರೆ  ಪ್ರಭು ಶ್ರೀರಾಮನ ಬಾಲ್ಯದ ಈ ಒಂದು ಮುಖ್ಯ ದೃಶ್ಯವನ್ನು  ಚಿತ್ರೀಕರಣ ಮಾಡುವ ವೇಳೆ ಆ ಕಾಗೆಯೂ ಹಾರಿ ಹೋದ್ರೆ ಏನು ಗತಿ, ಮುಂದಿನ ವಾರವೇ  ಈ ಸಂಚಿಕೆಯನ್ನು ದೂರದರ್ಶನಕ್ಕೆ ಪ್ರಸಾರ ಮಾಡಲು ಕಳುಹಿಸಬೇಕಿತ್ತು. ಇಷ್ಟು ದಿನ ಧಾರವಾಹಿ ಪ್ರಸಾರದಲ್ಲಿ ವಿಳಂಬವಾಗಿರಲ್ಲಿಲ್ಲ ಈಗೇನಾದರೂ ವಿಳಂಬವಾದರೆ ವೀಕ್ಷಕರು ಏನೆಂದುಕೊಳ್ಳಬಹುದು ಎಂದು ರಮಾನಂದ ಸಾಗರ್  ಚಿಂತಿತರಾಗಿರುತ್ತಾರೆ.

ವೈರಲ್​​​ ವಿಡಿಯೋ ಇಲ್ಲಿದೆ:

ನಂತರ ಹೇಗೋ  ಮನಸ್ಸು ಗಟ್ಟಿ ಮಾಡಿ, ಲೈಟ್ಸ್ ಕ್ಯಾಮರಾಗಳನ್ನೆಲ್ಲಾ ಸಿದ್ಧ ಪಡಿಸಿ ಚಿತ್ರೀಕರಣ  ಮಾಡಲು ನಿರ್ಧರಿಸುತ್ತಾರೆ. ಮತ್ತು  ಪ್ರಭು ಶ್ರೀರಾಮನ ಬಾಲ್ಯದಲ್ಲಿ ಕಾಗೆಯೊಂದಿಗೆ ಆಟವಾಡುತ್ತಿರುವ   ದೃಶ್ಯವನ್ನು ಚಿತ್ರೀಕರಿಸಲು ಮಗುವನ್ನು ಕೂಡಾ ಕ್ಯಾಮರಾದ ಮುಂದೆ ಕೂರಿಸುತ್ತಾರೆ. ನಂತರ ರಮಾನಂದ ಸಾಗರ್ ಅವರು ಕಾಗೆಯನ್ನು ಅಲ್ಲಿಗೆ ಕರೆತರುವಂತೆ ಹೇಳುತ್ತಾರೆ. ಪಂಜರದಲ್ಲಿದ್ದ ಕಾಗೆಯನ್ನು ಚಿತ್ರೀಕರಣದ ನಡೆಯುತ್ತಿರುವ  ಸ್ಥಳಕ್ಕೆ ಕರೆತರಲಾಯಿತು.  ಕಾಗೆ ಎಷ್ಟು ಜೋರಾಗಿ ʼಕಾವ್ ಕಾವ್ʼ ಎಂದು ಕೂಗುತ್ತಿತ್ತೆಂದರೆ , ಇಡೀ ಸ್ಟುಡಿಯೋದಲ್ಲಿಯೇ ಆ ಸದ್ದು  ಪ್ರತಿಧ್ವನಿಸುತ್ತಿತ್ತು. ಆ ಸಂದರ್ಭದಲ್ಲಿ  ದೇವರ ಮೇಲೆ ಭಾರ ಹಾಕಿ  ರಮಾನಂದ ಸಾಗರ್ ಅವರು ಕೈ ಮುಗಿಯುತ್ತಾ ಆಧ್ಯಾತ್ಮಿಕವಾಗಿ ಕಾಗೆಯನ್ನು ಬರ ಮಾಡಿಕೊಳ್ಳುತ್ತಾರೆ. ಇಷ್ಟು ಹೊತ್ತು ಚೀರಾಡುತ್ತಿದ್ದ ಕಾಗೆಯು ಆ ತಕ್ಷಣವೇ ಶಾಂತ ರೀತಿಯಲ್ಲಿ ವರ್ತಿಸಲು ಪ್ರಾರಂಭಿಸಿತು.

ಇದನ್ನೂ ಓದಿ:  ನಾವಂತೂ ಮನೆಯವ್ರಿಗೆ ಹೆಲ್ಪ್ ಮಾಡ್ತೀವಪ್ಪಾ; ಕಟ್ಟಿಗೆ ಹೊತ್ತು ತಂದ ಶ್ವಾನ  

ರಮಾನಂದ ಸಾಗರ್ ಅವರು ಕಾಗೆಗೆ ಕೈ ಮುಗಿಯುತ್ತಾ ಹೇ ಕಾಗೆಯೇ,  ನಾನು ಕ್ಲಿಷ್ಟಕರ ಪರಿಸ್ಥಿತಿಯಲ್ಲಿದ್ದೇನೆ. ಚಿತ್ರೀಕರಣ ಸರಾಗವಾಗಿ ಸಾಗುವಂತೆ ದಯವಿಟ್ಟು ನನಗೆ ಸಹಾಯ ಮಾಡು, ಧಾರಾವಾಹಿ ಮಂದಿನ ವಾರ ಪ್ರಸಾರವಾಗಲಿದೆ, ಕೋಟಿಗಟ್ಟಲೆ ಜನರು ಅದನ್ನು ವೀಕ್ಷಿಸುತ್ತಾರೆ ಎಂದು ಹೇಳುತ್ತಾ, ಕ್ಯಾಮರಾದ ಮುಂದೆ ನಿಂತು ಚಿತ್ರೀಕರಣ ಪ್ರಾರಂಭಿಸುತ್ತಾರೆ.   ಆ ವೇಳೆಯಲ್ಲಿ ಕಾಗೆ ಹಾರಿ ಹೋಗದೆ, ಮಗುವಿನೊಂದಿಗೆ ಆಟವಾಡಲು ಪ್ರಾರಂಭಿಸುತ್ತೆ. ಪ್ರಭು ಶ್ರೀರಾಮನ ಈ ಚಮತ್ಕಾರವನ್ನು ಕಂಡು ನಟಿ ದೀಪಿಕಾ ಚಿಖ್ಲಿಯಾ ಟೋಪಿವಾಲಾ ಸೇರಿದಂತೆ ಸ್ಟುಡಿಯೋದಲ್ಲಿದ್ದವರೆಲ್ಲರೂ ಒಂದು ಬಾರಿ ಶಾಕ್ ಆಗ್ತಾರೆ. ಈ ನಮ್ಮ ಧಾರಾವಾಹಿಗೆ ಫ್ರಭು ಶ್ರೀರಾಮ ದೇವರ ಆಶಿರ್ವಾದ ಎಷ್ಟಿತ್ತೆಂದು ಇದರಲ್ಲಿಯೇ ಗೊತ್ತಾಗುತ್ತೆ ಎಂದು ನಟಿ ದೀಪಿಕಾ ಹೇಳುತ್ತಾರೆ.

ಈ ಕುರಿತ ವಿಡಿಯೋವನ್ನು ಡಾ.ಪೂರ್ಣಿಮ (@PoornimaNimo)  ಎಂಬವರು ತಮ್ಮ  X ಖಾತೆಯಲ್ಲಿ ಹಂಚಿಕೊಂಡಿದ್ದು, ನಟಿ ಕಾಗೆಯ ಚಮತ್ಕಾರದ ನೈಜ್ಯ ಕಥೆಯನ್ನು ಹೇಳುವ ಸುಂದರ ವಿಡಿಯೋವನ್ನು ನೋಡಬಹುದು.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:10 am, Sat, 30 December 23