ವಾಷಿಂಗ್ಟನ್, ಜೂನ್ 13: ಇಲಾನ್ ಮಸ್ಕ್ (Elon Musk) ವಿಶ್ವದ ಅತಿದೊಡ್ಡ ಶ್ರೀಮಂತರಲ್ಲಿ ಒಬ್ಬರು. ಪ್ರಚಂಡ ಬುದ್ಧಿಮತ್ತೆ ಮತ್ತು ಅಷ್ಟೇ ವಿವಾದಗಳಿಗೂ ಎಡೆಯಾಗಿರುವಂತಹ ವ್ಯಕ್ತಿ. ಒಂದಲ್ಲ, ಎರಡಲ್ಲ, ಹಲವು ಕಂಪನಿಗಳ ಒಡೆಯ. ಇದ್ದುದ್ದನ್ನು ಇದ್ದ ಹಾಗೆ, ಕಡ್ಡಿ ಎರಡಾಗಿ ತುಂಡಾಗುವ ಹಾಗೆ ಮಾತನಾಡುವ ಜಾಯಮಾನ ಅವರದ್ದು. ಹಾಗೆಯೇ, ಹಲವು ತಿಕ್ಕುಲತನಗಳ ಆಗರವೂ ಹೌದು. ಅವರ ವಿರುದ್ಧ ಸಾಕಷ್ಟು ಲೈಂಗಿಕ ಆರೋಪಗಳು ಕೇಳಿಬಂದಿವೆ. ಇದೀಗ ಸ್ಪೇಸ್ಎಕ್ಸ್ನ ಎಂಟು ಮಾಜಿ ಮಹಿಳಾ ಉದ್ಯೋಗಿಗಳು ಇಲಾನ್ ಮಸ್ಕ್ ವಿರುದ್ಧ ಕಾನೂನು ಮೊಕದ್ದಮೆ ಹಾಕಿದ್ದಾರೆ. ಕಂಪನಿಯಲ್ಲಿ ಇದ್ದ ಲೈಂಗಿಕ ಕಿರುಕುಳ ವಾತಾವರಣ ವಿರುದ್ಧ ಧ್ವನಿ ಎತ್ತಿದ್ದಕ್ಕೆ ತಮ್ಮನ್ನು ಕೆಲಸದಿಂದ ಕಿತ್ತುಹಾಕಿದ್ದಾರೆ ಎಂದು ಈ ಮಾಜಿ ಉದ್ಯೋಗಿಗಳು ಆರೋಪಿಸಿದ್ದಾರೆ.
‘ಕೆಲಸದ ಸ್ಥಳದಲ್ಲಿ ಇಲಾನ್ ಮಸ್ಕ್ ಅಶ್ಲೀಲವಾಗಿ ಮಾತನಾಡುತ್ತಾರೆ. ಹುಡುಗಿಯರನ್ನು ಅವರ ಬ್ರಾ ಸೈಜ್ ಮೇಲೆ ಅಳೆಯುತ್ತಾರೆ. ಈ ರೀತಿಯ ಮೃಗೀಯ ಸ್ಥಳದ ವಾತಾವರಣವನ್ನು ಯಾರಾದರೂ ಪ್ರಶ್ನಿಸಿದರೆ, ಬೇರೆ ಕಡೆ ಕೆಲಸ ನೋಡುವಂತೆ ಹೇಳಿ ಉದ್ಯೋಗದಿಂದಲೇ ತೆಗೆದುಹಾಕುತ್ತಾರೆ,’ ಎಂದು ಇವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಬಡ್ಡಿದರ ಯಥಾಸ್ಥಿತಿ, ಆದರೆ ಇನ್ನೂ ಮೇಲ್ಮಟ್ಟದಲ್ಲಿ; ಹಣದುಬ್ಬರ ಕಡಿಮೆಯಾದರೂ ಗುರಿಗಿಂತ ಮೇಲೆ
ಇವರ ಪ್ರಕಾರ ಇಲಾನ್ ಮಸ್ಕ್ ಮಾತ್ರವಲ್ಲ, ಸ್ಪೇಸ್ಎಕ್ಸ್ನ ಕೆಲ ಎಕ್ಸಿಕ್ಯೂಟಿವ್ಗಳೂ ಕೂಡ ಅಶ್ಲೀಲ ನಡತೆ ತೋರುತ್ತಾರಂತೆ. ಈ ಎಕ್ಸಿಕ್ಯೂಟಿವ್ಗಳ ಜೊತೆ ಸೇರಿಕೊಂಡು ಮಸ್ಕ್ ಕೂಡ ಮಹಿಳಾ ಉದ್ಯೋಗಿಗಳ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಾರಂತೆ.
ಟೆಸ್ಲಾ, ಸ್ಪೇಸ್ಎಕ್ಸ್, ಎಕ್ಸ್ ಇತ್ಯಾದಿ ಸಂಸ್ಥೆಗಳ ಮುಖ್ಯಸ್ಥರಾಗಿರುವ ಇಲಾನ್ ಮಸ್ಕ್ ಅವರ ಲೈಂಗಿಕ ತಿಕ್ಕುಲತನ ಜಗಜ್ಜಾಹೀರಾಗಿದೆ. ಸ್ಪೇಸ್ಎಕ್ಸ್ನಲ್ಲಿ ಹಿಂದೆಯೂ ಅವರು ಮಹಿಳಾ ಉದ್ಯೋಗಿಗಳ ವಿರುದ್ಧ ಕೊಳಕಾಗಿ ವರ್ತಿಸಿದ್ದರು. ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದ ಹುಡುಗಿ ಜತೆ ಮಸ್ಕ್ಗೆ ಲೈಂಗಿಕ ಸಂಬಂಧ ಇತ್ತು. ಒಬ್ಬ ಉದ್ಯೋಗಿಗಂತೂ ತನ್ನ ಮಕ್ಕಳಿಗೆ ತಾಯಿಯಾಗುತ್ತೀಯಾ ಎಂದು ಕೇಳಿದ್ದರಂತೆ. ಹಾಗಂತ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ರೈಲಿನಲ್ಲಿ ಮಲಗಿಕೊಂಡು ಪ್ರೇಮಿಗಳಿಬ್ಬರ ರೊಮಾನ್ಸ್, ಮುಜುಗರಕ್ಕೊಳಗಾದ ಸಹ ಪ್ರಯಾಣಿಕರು
ಸ್ಪೇಸ್ ಎಕ್ಸ್ನಲ್ಲಿ ಲೈಂಗಿಕ ಕಿರುಕುಳ ಮತ್ತು ಲಿಂಗ ಭೇದ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತ್ಯೇಕ ಕಾನೂನು ಮೊಕದ್ದಮೆ ಕೂಡ ದಾಖಲಾಗಿದೆ. ನಾಗರಿಕ ಹಕ್ಕು ಸಂಸ್ಥೆಯೊಂದು ಸ್ಪೇಸ್ಎಕ್ಸ್ ವಿರುದ್ಧ ತನಿಖೆ ಕೂಡ ನಡೆಸುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ