
ಬೆಂಗಳೂರು (ಸೆ. 06): ಕೆಲವು ದಿನಗಳ ಹಿಂದೆ ಬಿಹಾರದಲ್ಲಿ ಡಾಗ್ ಬಾಬು ಎಂಬ ನಾಯಿಗೆ ವಸತಿ ಪ್ರಮಾಣಪತ್ರ ನೀಡಲಾಗುತ್ತಿದೆ ಎಂಬ ಸುದ್ದಿ ಹಬ್ಬಿತ್ತು. ಇದೀಗ ಟಾಮಿ ಜೈಸ್ವಾಲ್ ಎಂಬ ನಾಯಿಯ ಆಧಾರ್ ಕಾರ್ಡ್ (Aadhaar Card) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಗ್ವಾಲಿಯರ್‌ನದ್ದು ಎನ್ನಲಾಗಿದೆ. ಈ ಆಧಾರ್ ಕಾರ್ಡ್‌ನಲ್ಲಿ ಗ್ವಾಲಿಯರ್‌ನ ದಾಬ್ರಾ ಪುರಸಭೆಯ ಪ್ರದೇಶದ ಸಿಮಾರಿಯಾ ತಾಲ್ ಅವರ ವಿಳಾಸದೊಂದಿಗೆ ನಾಯಿಯ ಚಿತ್ರವಿದೆ. ಅಲ್ಲದೆ, ಟಾಮಿ ಜೈಸ್ವಾಲ್ ಅವರನ್ನು ಬೆಳೆಸಿದ ವ್ಯಕ್ತಿಯ ಹೆಸರನ್ನು ಕೈಲಾಶ್ ಜೈಸ್ವಾಲ್ ಎಂದು ಉಲ್ಲೇಖಿಸಲಾಗಿದೆ.
ಈ ವೈರಲ್ ಆದ ಆಧಾರ್ ಕಾರ್ಡ್ ಅನೇಕ ಜನರನ್ನು ಅಚ್ಚರಿಗೊಳಿಸಿದೆ. ಕೆಲವರು ಇದನ್ನು AI ಯ ಪವಾಡ ಎಂದು ಕರೆಯುತ್ತಿದ್ದರೆ, ಇನ್ನು ಕೆಲವರು ಆಧಾರ್‌ನಂತಹ ಪ್ರಮುಖ ದಾಖಲೆಯನ್ನು ಫೋಟೋ ಶಾಪ್ ಮಾಡುವ ಮೂಲಕ ಹೇಗೆ ಮಾಡಬಹುದು ಎಂಬ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈ ವಿಷಯವನ್ನು ತನಿಖೆ ಮಾಡಿದಾಗ, ಇದರಲ್ಲಿ ಬರೆಯಲಾದ ವಿಳಾಸ ನಿಜವೇ ಅಥವಾ ಅಲ್ಲವೇ, ಅದರಲ್ಲಿ ಉಲ್ಲೇಖಿಸಲಾದ ಕೈಲಾಶ್ ಜೈಸ್ವಾಲ್ ಯಾರು ಇತ್ಯಾದಿ ಹಲವು ಪ್ರಮುಖ ವಿಷಯಗಳು ಬಹಿರಂಗವಾಗಿವೆ.
ಮೊದಲಿಗೆ ನಾವು ಆಧಾರ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ವೈರಲ್ ಆಗಿರುವ ಆಧಾರ್ ಕಾರ್ಡ್‌ನಲ್ಲಿ ನೀಡಲಾದ ‘070001051580’ ಎಂಬ ಯುಐಡಿ ಸಂಖ್ಯೆಯನ್ನು ನಾವು ಪರಿಶೀಲಿಸಿದಾಗ, ‘ದಯವಿಟ್ಟು ಮಾನ್ಯವಾದ ಆಧಾರ್ ಸಂಖ್ಯೆಯನ್ನು ನಮೂದಿಸಿ’ ಎಂಬ ಸಂದೇಶವನ್ನು ನಾವು ನೋಡಿದ್ದೇವೆ. ಅಂದರೆ, ಈ ಆಧಾರ್ ಸಂಖ್ಯೆ ತಪ್ಪಾಗಿದೆ ಎಂಬುದು ಸ್ಪಷ್ಟವಾಗಿದೆ.
ಹೀಗೆ ಹುಡುಕುವಾಗ ಆಜ್ ತಕ್ ಈ ಬಗ್ಗೆ ಸುದ್ದಿ ಪ್ರಕಟಿಸಿರುವುದು ಕಂಡುಬಂತು. ‘7000105158′ ಫೋನ್ ಸಂಖ್ಯೆಯ ಎರಡೂ ಬದಿಗಳಲ್ಲಿ ಸೊನ್ನೆಗಳನ್ನು ಸೇರಿಸುವ ಮೂಲಕ ಈ ನಕಲಿ ಆಧಾರ್ ಸಂಖ್ಯೆಯನ್ನು ರಚಿಸಲಾಗಿದೆ ಎಂದು ಇದರಲ್ಲಿ ಹೇಳಲಾಗಿದೆ. ಅಲ್ಲದೆ ಈ ಮೊಬೈಲ್ ನಂಬರ್ ಅನ್ನು ಟ್ರೂಕಾಲರ್ ಅಪ್ಲಿಕೇಶನ್‌ನಲ್ಲಿ ಹುಡುಕಿದಾಗ ಈ ಸಂಖ್ಯೆ ಮಧ್ಯಪ್ರದೇಶದ ಪವನ್ ಜೈಸ್ವಾಲ್ ಅವರಿಗೆ ಸೇರಿದೆ ಎಂಬುದು ತಿಳಿಯಿತು.
ಆಜ್ ತಕ್ ಈ ಸಂಖ್ಯೆಗೆ ಕರೆ ಮಾಡಿ ಮಾತನಾಡಿದೆ. ಮಮತಾ ಜೈಸ್ವಾಲ್ ಎಂಬ ಮಹಿಳೆ ಫೋನ್ ಸ್ವೀಕರಿಸಿದ್ದು, ಇದು ಅವರ ಪುತ್ರ ಪವನ್ ಜೈಸ್ವಾಲ್ ಅವರದ್ದು. ಅವರು ಐದು ತಿಂಗಳ ಹಿಂದೆ ಹಠಾತ್ ಆರೋಗ್ಯ ಕ್ಷೀಣಿಸಿ ನಿಧನರಾದರು. ಮಮತಾ ತಮ್ಮ ಗಂಡನ ಹೆಸರು ಕೈಲಾಶ್ ಜೈಸ್ವಾಲ್ ಎಂದು ಹೇಳಿದರು. ವೈರಲ್ ಆಗಿರುವ ಆಧಾರ್ ಕಾರ್ಡ್‌ನ ಹಿಂಭಾಗದಲ್ಲಿ ಕೈಲಾಶ್ ಜೈಸ್ವಾಲ್ ಎಂಬ ಹೆಸರನ್ನು ಬರೆಯಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ.
ಮಮತಾ ಹೇಳಿರುವ ಪ್ರಕಾರ, “ಅದರಲ್ಲಿ ಬರೆದಿರುವ ವಿಳಾಸ ನಮ್ಮದು. ಫೋಟೋ ಇರುವ ನಾಯಿಯನ್ನು ನಮ್ಮ ಮನೆಯಲ್ಲಿ 10-12 ವರ್ಷಗಳಿಂದ ಸಾಕಲಾಗುತ್ತಿತ್ತು, ಆದರೆ ಅದು 2 ವರ್ಷಗಳ ಹಿಂದೆ ಸತ್ತುಹೋಯಿತು. ಈ ವಿವಾದದಿಂದಾಗಿ ನಾವು ಸಾಕಷ್ಟು ತೊಂದರೆ ಎದುರಿಸುತ್ತಿರುವ ಕಾರಣ ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಯೋಚಿಸುತ್ತಿದ್ದೇವೆ. ನಮ್ಮ ಆಧಾರ್ ಕಾರ್ಡ್ ಅನ್ನು ನಾವೇ ಮಾಡಿಕೊಳ್ಳುವಷ್ಟು ಶಿಕ್ಷಣ ಪಡೆದಿಲ್ಲ. ನಾಯಿಯ ಆಧಾರ್ ಕಾರ್ಡ್ ಅನ್ನು ಎಲ್ಲಿಂದ ಮತ್ತು ಹೇಗೆ ನಾವು ಮಾಡುವುದು” ಎಂದು ಅವರು ಹೇಳಿದರು.
ಈ ವಿಷಯದ ಬಗ್ಗೆ ಗ್ವಾಲಿಯರ್ ಕಲೆಕ್ಟರ್ ಏನು ಹೇಳಿದ್ದಾರೆ?
ಗ್ವಾಲಿಯರ್ ಕಲೆಕ್ಟರ್ ರುಚಿಕಾ ಚೌಹಾಣ್ ಈ ಆಧಾರ್ ಕಾರ್ಡ್ ನಕಲಿ ಎಂದು ಹೇಳಿದ್ದಾರೆ. ಇದನ್ನು ಯಾರು ಮಾಡಿದ್ದಾರೆ ಮತ್ತು ಯಾರು ವೈರಲ್ ಮಾಡಿದ್ದಾರೆ, ಅವರ ಉದ್ದೇಶವೇನು ಎಂಬುದು ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಹೀಗಾಗಿ ನಾಯಿಯ ಹೆಸರಲ್ಲಿ ಯಾವುದೇ ಆಧಾರ್ ಕಾರ್ಡ್ ಇಲ್ಲ.. ಇದು ನಕಲಿ ಆಗಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:28 pm, Sat, 6 September 25