Fact Check: ಕಾಂಗ್ರೆಸ್ ಸರ್ಕಾರ ಇರುವ ಕರ್ನಾಟಕದಲ್ಲಿ ತನ್ನ ಪತ್ನಿಯನ್ನು ಜೀವಂತ ಸಮಾಧಿ ಮಾಡಲು ಮುಂದಾದ ಮುಸ್ಲಿಂ ವೃದ್ದ?
ವೃದ್ಧನೊಬ್ಬ ತನ್ನ ಹೆಂಡತಿಯನ್ನು ಬಲವಂತವಾಗಿ ನೆಲದಲ್ಲಿ ಹೂತು ಹಾಕುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಎರಡನೇ ಹೆಂಡತಿಯನ್ನು ಮದುವೆಯಾಗುವ ದುರಾಸೆಯಲ್ಲಿ ಮುಸ್ಲಿಂ ಪುರುಷನೊಬ್ಬ ತನ್ನ ಮೊದಲ ಹೆಂಡತಿಯನ್ನು ಜೀವಂತವಾಗಿ ಸಮಾಧಿ ಮಾಡುತ್ತಿರುವ ಘಟನೆ ಕರ್ನಾಟಕದಲ್ಲಿ ನಡೆದಿದೆ ಎಂದು ಜನರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಬೆಂಗಳೂರು (ಆ. 19): ಒಬ್ಬ ವ್ಯಕ್ತಿ ವೃದ್ಧ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಒಂದು ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಡುತ್ತಿದೆ. ಈ ಘಟನೆ ಕಾಂಗ್ರೆಸ್ (Congress) ಸರ್ಕಾರ ಇರುವ ಕರ್ನಾಟಕದ್ದು ಎಂದು ಕೂಡ ಹೇಳಲಾಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಒಬ್ಬ ವೃದ್ಧ ಮಹಿಳೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಇದಲ್ಲದೆ, ಆ ಮಹಿಳೆಯ ಮೇಲೆ ಮಣ್ಣು ಎರಚುತ್ತಾ, ಕಪಾಳಮೋಕ್ಷ ಮಾಡುತ್ತಿರುವುದನ್ನು ಸಹ ಕಾಣಬಹುದು.
ಫೇಸ್ಬುಕ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು, ‘‘ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ನಡೆದ ಘಟನೆ, 65 ವರ್ಷದ ಮುಲ್ಲಾ ತನ್ನ ಕಾಮತೃಷೆಯನ್ನು ಪೂರೈಸಿಕೊಳ್ಳಲು ತನ್ನ 42 ವರ್ಷದ ಮಧ್ಯವಯಸ್ಕ ಸಹೋದರಿಯನ್ನು ಮದುವೆಯಾದನು, ನಂತರ ತನ್ನ 62 ವರ್ಷದ ಮೊದಲ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನು ಹೊಡೆದು ಜೀವಂತವಾಗಿ ಹೂಳಲು ಪ್ರಯತ್ನಿಸಿದನು, ಆ ಮಹಿಳೆ ಅಳುತ್ತಾ ಕಿರುಚುತ್ತಿದ್ದಳು, ಎಲ್ಲರೂ ವೀಡಿಯೊಗಳನ್ನು ಮಾಡುವಲ್ಲಿ ನಿರತರಾಗಿದ್ದರು, ಯಾರೂ ಅವಳನ್ನು ಉಳಿಸಲು ಹೋಗಲಿಲ್ಲ, ಘಟನೆಯ ಲೈವ್ ವಿಡಿಯೋವನ್ನು ವೀಕ್ಷಿಸಿ’’ ಎಂದು ಬರೆದುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋ:
ಇದು ಬಾಂಗ್ಲಾದೇಶದ ವಿಡಿಯೋ:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದು ಕರ್ನಾಟಕ ಅಥವಾ ಭಾರತಕ್ಕೆ ಸಂಬಂಧ ಪಟ್ಟ ವಿಡಿಯೋವೇ ಅಲ್ಲ, ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆ ಆಗಿದೆ ಎಂಬುದು ಕಂಡುಬಂದಿದೆ. ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವಿಡಿಯೋದ ಪ್ರಮುಖ ಚೌಕಟ್ಟುಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಅದು ಡೈಲಿ ಜುಗಾಂಟರ್ ಎಂಬ ಬಾಂಗ್ಲಾದೇಶದ ಯೂಟ್ಯೂಬ್ ಚಾನೆಲ್‌ನಲ್ಲಿ ಕಂಡುಬಂದಿದೆ. ಇಲ್ಲಿ ಅದನ್ನು ಆಗಸ್ಟ್ 10, 2025 ರಂದು ಅಪ್‌ಲೋಡ್ ಮಾಡಲಾಗಿದೆ. ವಿಡಿಯೋದೊಂದಿಗೆ ನೀಡಲಾದ ಮಾಹಿತಿಯು ಅದು ಬಾಂಗ್ಲಾದೇಶದ ಶೆರ್ಪುರದಿಂದ ಬಂದಿದೆ ಎಂದು ಹೇಳುತ್ತದೆ.
ಈ ಮಾಹಿತಿಯೊಂದಿಗೆ ಹುಡುಕಿದಾಗ, ಈ ಘಟನೆಯ ಕುರಿತು ಹಲವು ಸುದ್ದಿ ವರದಿಗಳು ನಮಗೆ ಸಿಕ್ಕವು. ಬಿಡಿ ಪ್ರತಿದೀನ್ ವರದಿಯ ಪ್ರಕಾರ, ಈ ಪ್ರಕರಣ ಶೇರ್ಪುರದ ಶ್ರೀಬಾರ್ಡಿ ಉಪಜಿಲ್ಲಾದಿಂದ ಬಂದಿದೆ. ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿಯ ಹೆಸರು ಖಲೀಲುರ್ ರೆಹಮಾನ್, ಅವರು ತಮ್ಮ ಪತ್ನಿ ಖುರ್ಷಿದಾ ಬೇಗಂ ಅವರನ್ನು ಜೀವಂತವಾಗಿ ಹೂಳಲು ಪ್ರಯತ್ನಿಸಿದರು. ಸುದ್ದಿಯ ಪ್ರಕಾರ, ರೆಹಮಾನ್ ತಮ್ಮ ಅನಾರೋಗ್ಯ ಪೀಡಿತ ಪತ್ನಿಯನ್ನು ಬಹಳ ಸಮಯದಿಂದ ನೋಡಿಕೊಳ್ಳುತ್ತಿದ್ದರು. ಅವರ ಪತ್ನಿ ಹಲವು ವರ್ಷಗಳಿಂದ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ. ಆರ್ಥಿಕ ತೊಂದರೆಗಳು ಮತ್ತು ಪತ್ನಿಯ ಅನಾರೋಗ್ಯದಿಂದಾಗಿ ಅವರು ಮಾನಸಿಕವಾಗಿ ತುಂಬಾ ನೊಂದಿದ್ದರು.
Fact Check: ಇವು ಧರ್ಮಸ್ಥಳದಲ್ಲಿ ಸಿಕ್ಕ ಅಸ್ತಿಪಂಜರಗಳೇ?: ವೈರಲ್ ಫೋಟೋದ ಸತ್ಯ ಇಲ್ಲಿದೆ ನೋಡಿ
ಸ್ಥಳೀಯ ಜನರು ಹೇಳುವಂತೆ ರೆಹಮಾನ್ ತಮ್ಮ ಪತ್ನಿಯನ್ನು ಹಲವು ವರ್ಷಗಳಿಂದ ನೋಡಿಕೊಳ್ಳುತ್ತಿದ್ದರು. ಮಾನಸಿಕ ಸಮತೋಲನ ಕಳೆದುಕೊಂಡ ನಂತರ ಅವರು ಈ ಕೃತ್ಯ ಮಾಡಿದ್ದಾರೆ. ಸುತ್ತಮುತ್ತಲಿನ ಜನರ ಪ್ರಕಾರ, ಅವರ ಮೊಮ್ಮಗ ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಣೆಗಳನ್ನು ಗಳಿಸಲು ವಿಡಿಯೋವನ್ನು ರೆಕಾರ್ಡ್ ಮಾಡಿ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋ ವೈರಲ್ ಆದ ನಂತರ, ಆಡಳಿತವು ಅವರಿಗೆ ವೀಲ್‌ಚೇರ್ ಮತ್ತು ಇತರ ಆರ್ಥಿಕ ಸಹಾಯವನ್ನು ಒದಗಿಸಿದೆ.
ಹೀಗಾಗಿ ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ವೈರಲ್ ಆಗಿರುವ ವಿಡಿಯೋಕ್ಕೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಂಡುಹಿಡಿದಿದೆ. ಈ ವಿಡಿಯೋ ಬಾಂಗ್ಲಾದೇಶದ್ದಾಗಿದ್ದು, ಕೆಲವು ದಿನಗಳ ಹಿಂದೆ ವೃದ್ಧನೊಬ್ಬ ತನ್ನ ಅಂಗವಿಕಲ ಹೆಂಡತಿಯನ್ನು ಜೀವಂತವಾಗಿ ಹೂಳಲು ಯತ್ನಿಸಿದ್ದನೆಂದು ಆರೋಪಿಸಲಾಗಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








