ಯುನೈಟೆಡ್ ಕಿಂಗ್ಡಮ್ನ 97 ವರ್ಷದ ವೃದ್ಧೆಯೊಬ್ಬರು ಪ್ರತೀ ದಿನ ತನ್ನ ಮನೆಯ ಅಂಗಳದಲ್ಲಿ ಪಾರಿವಾಳಗಳಿಗೆ ಆಹಾರ ನೀಡುತ್ತಿರುವುದನ್ನು ಕಂಡು ಸ್ಥಳೀಯರು ನಗರಸಭೆಗೆ ದೂರು ನೀಡಿದ್ದಾರೆ. ಪರಿಣಾಮ ಪಾರಿವಾಳಗಳಿಗೆ ಆಹಾರ ನೀಡದಂತೆ ನೋಟಿಸ್ ಬಂದಿದೆ. 2.5 ಲಕ್ಷ ರೂ. ದಂಡ, ಅಷ್ಟೇ ಅಲ್ಲದೆ, ಮುಂದೆ ಹೀಗೆ ಮುಂದುವರಿದರೆ ಸ್ವಂತ ಮನೆಯಿಂದ ಹೊರಹಾಕಲಾಗುವುದು ಎಂದು ಎಚ್ಚರಿಕೆ ಕೂಡ ನೀಡಲಾಗಿದೆ.
ಮಿರರ್ ವರದಿಯ ಪ್ರಕಾರ, ಸಂಗೀತ ಶಿಕ್ಷಕರಾಗಿರುವ ಅನ್ನೆ ಸಿಗೋ(97) ಅವರಿಗೆ ಪಕ್ಷಿಗಳೆಂದರೆ ತುಂಬಾ ಇಷ್ಟ. ಅವರು ತಮ್ಮ ಮನೆಯಲ್ಲಿ ಕೆಲವು ಪಕ್ಷಿಗಳನ್ನು ಸಹ ಸಾಕಿದ್ದಾರೆ. ಆದರೆ ಕಳೆದ ಹಲವು ತಿಂಗಳುಗಳಿಂದ ಇವರ ಅಂಗಳಕ್ಕೆ ಗುಬ್ಬಚ್ಚಿ, ಪಾರಿವಾಳ ಬರಲಾರಂಭಿಸಿದ್ದವು. ಅನ್ನಿ ಅವುಗಳಿಗೆ ಕೂಡ ಆಹಾರ ನೀಡುತ್ತಿದ್ದರು. ಇದರಿಂದಾಗಿ ಅನೇಕ ಪಕ್ಷಿಗಳು ಪ್ರತೀ ದಿನ ಮನೆಗೆ ಬರಲಾರಂಭಿಸಿದವು. ಇದರಿಂದಾಗಿ ನಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶ ಕೊಳಕಾಗಿದೆ ಎಂದು ಸ್ಥಳೀಯರು ಅನ್ನೆ ಮೇಲೆ ನಗರಸಭೆಯಲ್ಲಿ ದೂರು ನೀಡಿದ್ದಾರೆ.
ಆಹಾರ ಧಾನ್ಯ ವಿತರಣೆಯಿಂದ ಸಾಕಷ್ಟು ಪಾರಿವಾಳ, ಬೆಳ್ಳಕ್ಕಿಗಳು ಬರುತ್ತಿದ್ದು, ಇಡೀ ಪ್ರದೇಶ ವಾಸನೆಯಿಂದ ಕೂಡಿದೆ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ದೂರಿದ್ದಾರೆ. ಪ್ರಾರಂಭದಲ್ಲಿ ನಗರಸಭೆ ಈ ವೃದ್ಧೆಗೆ 10 ಸಾವಿರ ರೂಪಾಯಿ ದಂಡ ವಿಧಿಸಿತ್ತು, ಆದರೆ ಈ ನೋಟಿಸನ್ನು ನಿರ್ಲಕ್ಷ್ಯಿಸಿದ್ದರಿಂದ ಇತ್ತೀಚಿಗಷ್ಟೇ 2,500 ಪೌಂಡ್‌ಗಳಿಗೆ ಅಂದರೆ 2.5 ಲಕ್ಷ ರೂ.ದಂಡ ವಿಧಿಸಿದೆ. ಇದಲ್ಲದೆ ಮುಂದೆ ಹೀಗೆ ಮುಂದುವರಿದರೆ ಸ್ವಂತ ಮನೆಯಿಂದ ಹೊರಹಾಕಲಾಗುವುದು ಎಂದು ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.
ಇಂಗ್ಲೆಂಡ್, ಥೈಲ್ಯಾಂಡ್, ಕೊಲಂಬಿಯಾ, ಕೆನಡಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದು ಅಪರಾಧವಾಗಿದೆ. ಹೆಚ್ಚು ಪಾರಿವಾಳಗಳು ಬರುವುದರಿಂದ ಪ್ರದೇಶಗಳಲ್ಲಿ ಕೊಳಕು ಉಂಟಾಗುತ್ತದೆ. ಇದರಿಂದಾಗಿ ಸೋಂಕು ಹರಡುವ ಅಪಾಯವಿದೆ. ಇದು ಸ್ವಚ್ಛತೆಯ ಮೇಲೂ ಪರಿಣಾಮ ಬೀರುತ್ತದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:57 am, Tue, 2 April 24