ಫಾಸ್ಟ್ ಫುಡ್ ಪ್ರಿಯರಿಗಂತೂ ಈ ಪಿಜ್ಜಾ ಅಂದ್ರೆ ತುಂಬಾನೇ ಇಷ್ಟ. ಅನೇಕರು ಹೊರಗಡೆ ಊಟಕ್ಕೆಂದು ಹೋದಾಗ ಹೆಚ್ಚಾಗಿ ಪಿಜ್ಜಾ ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ಕೆಲವೊಬ್ಬರೂ ರೆಸ್ಟೋರೆಂಟ್ಗಳಲ್ಲಿ ಎಕ್ಸ್ಟ್ರಾ ಚೀಸ್ ಹಾಕಿಸಿಕೊಂಡು ಪಿಜ್ಜಾ ತಿನ್ನುತ್ತಾರೆ. ಸಾಮಾನ್ಯವಾಗಿ ಒಂದು ಬಗೆಯ ಚೀಸ್ ಹಾಕಿ ʼಚೀಸ್ ಪಿಜ್ಜಾʼವನ್ನು ತಯಾರಿಸುತ್ತಾರೆ ಅಲ್ವಾ, ಆದ್ರೆ ಇಲ್ಲೊಂದು ಫ್ರೆಂಚ್ ಮೂಲದ ಬಾಣಸಿಗರು ಒಂದಲ್ಲ, ಹತ್ತಲ್ಲ, ನೂರಲ್ಲ ಬರೋಬ್ಬರಿ 1001 ಬಗೆಯ ಚೀಸ್ಗಳಿಂದ ಒಂದು ಪಿಜ್ಜಾವನ್ನು ತಯಾರಿಸಿ ವಿಶ್ವದಾಖಲೆಯನ್ನು ಬರೆದಿದ್ದಾರೆ. ಈ ವಿಶಿಷ್ಟ ಪಿಜ್ಜಾವನ್ನು ಫ್ರೆಂಚ್ ಮೂಲದ ಬಾಣಸಿಗರಾದ ಬೆನೈಟ್ ಬ್ರೂಯೆಲ್ ಮತ್ತು ಫ್ಯಾಬಿಯನ್ ಮೊಂಟೆಲಾನಿಕೊ ಎಂಬವರು ತಯಾರಿಸಿದ್ದಾರೆ. ಇವರ ಈ ವಿಶಿಷ್ಟ ಪ್ರಯತ್ನಕ್ಕೆ ಚೀಸ್ ಮೇಕರ್ ಸೋಫಿ ಹ್ಯಾಟ್ ರಿಚರ್ಡ್ ಲೂನಾ ಮತ್ತು ಯೂಟ್ಯೂಬರ್ ಫ್ಲೋರಿಯನ್ ಒನೈರ್ ಸಹಾಯ ಮಾಡಿದ್ದಾರೆ.
ಅಲ್ಲಾ ಇಷ್ಟು ಬಗೆಯ ಚೀಸ್ಗಳನ್ನು ಬಳಸಿದ್ರೆ, ಪಿಜ್ಜಾವನ್ನು ಬೇಯಿಸುವಾಗ ಅದು ಮೆಲ್ಟ್ ಆಗಲ್ವಾ, ಹಾಗಿರುವಾಗ ಈ ಪಿಜ್ಜಾವನ್ನು ಹೇಗೆ ತಯಾರಿಸಿದ್ರು ಅಂತ ನೀವು ಯೋಚ್ನೆ ಮಾಡ್ತಿದ್ದೀರಾ? ಅದೇಗೆಂದರೆ ಮೊದಲಿಗೆ ಪಿಜ್ಜಾ ಹಿಟ್ಟನ್ನು ತಯಾರಿಸಿಕೊಂಡು, ಆ ಪಿಜ್ಜಾ ಬೇಸ್ ಅನ್ನು ಮೊದಲೇ ಬೇಯಿಸಿಕೊಂಡು, ನಂತರ ಎಲ್ಲಾ ಬಗೆಯ ಚೀಸ್ಗಳನ್ನು ಎರಡು ಗ್ರಾಂ ಗಳಷ್ಟು ಕತ್ತರಿಸಿಕೊಂಡು, ಗಟ್ಟಿಯಾಗಿರುವ ಚೀಸ್ಗಳನ್ನು ಮೊದಲು ಪಿಜ್ಜಾ ಬೇಸ್ ಮೇಲೆ ಇಟ್ಟು, ಮೇಲಿನ ಲೇಯರ್ ಅಲ್ಲಿ ಮೃದುವಾದ ಚೀಸ್ ಇಟ್ಟು, 20 ಸೆಕೆಂಡುಗಳ ಕಾಲ ಬೇಯಿಸಿ ಚೀಸ್ ಪಿಜ್ಜಾವನ್ನು ತಯಾರಿಸಿದ್ದಾರೆ.
ಈ ಕುರಿತ ವಿಡಿಯೋವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ನಾಲ್ಕು ಜನರ ತಂಡ ಸೇರಿ 1001 ಬಗೆಯ ಚೀಸ್ ಅನ್ನು ಬಳಸಿಕೊಂಡು ರುಚಿಕರ ಪಿಜ್ಜಾ ತಯಾರಿಸುವುದನ್ನು ಕಾಣಬಹುದು.
ಇದನ್ನೂ ಓದಿ: ಸಾವಿನ ದವಡೆಯಿಂದ ಪಾರಾದ ಪೆಂಗ್ವಿನ್, ಇದು ಆತ್ಮವಿಶ್ವಾಸದ ಶಕ್ತಿ
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಅಧೀಕೃತ ವೆಬ್ಸೈಟ್ ಪ್ರಕಾರ ಈ ಪಿಜ್ಜಾಕ್ಕೆ ಬಳಸಲಾದ 940 ಚೀಸ್ಗಳು ಫ್ರೆಂಚ್ ದೇಶದ್ದಾದರೆ, ಉಳಿದ 61 ಬಗೆಯ ಚೀಸ್ಗಳು ಇತರ ದೇಶಗಳದ್ದಾಗಿದೆ. ಬೆನೈಟ್ ಬ್ರೂಯೆಲ್ ಅನುಭವಿ ಬಾಣಸಿಗರಾಗಿದ್ದು, ಅವರು ಈ ವಿಶೇಷ ದಾಖಲೆಯನ್ನು ನಿರ್ಮಿಸಲು ತೊಡಗಿರುವುದು ಇದೇ ಮೊದಲೇನಲ್ಲ, ಈ ಮೊದಲು 2020 ರಲ್ಲಿ ಅವರು 254 ವಿಧದ ಚೀಸ್ ಗಳಿಂದ ಪಿಜ್ಜಾವನ್ನು ತಯಾರಿಸಿ ದಾಖಲೆಯನ್ನು ಮಾಡಿದ್ದರು. ಇದೀಗ 1001 ಬಗೆಯ ಚೀಸ್ಗಳನ್ನು ಬಳಸಿ ಪಿಜ್ಜಾ ತಯಾರಿಸುವ ಮೂಲಕ ವಿಶ್ವ ದಾಖಲೆಯನ್ನು ದಾಖಲೆ ನಿರ್ಮಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: