ಗೂಗಲ್ ಸಿಇಓ ಸುಂದರ್ ಪಿಚೈ ಇಂದು ತಮ್ಮ 49ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 1972ನೇ ಇಸವಿಯ ಜೂನ್ 10ರಂದು ತಮಿಳುನಾಡಿನ ಮಧುರೈನಲ್ಲಿ ಜನಿಸಿದ ಸುಂದರ್ ಪಿಚೈ 2004ರಲ್ಲಿ ಗೂಗಲ್ ಸಂಸ್ಥೆಯ ಉದ್ಯೋಗಿಯಾಗಿ ಕೆಲಸ ಆರಂಭಿಸಿದರು. ಗೂಗಲ್ ಕ್ರೋಮ್, ಕ್ರೋಮ್ ಓಎಸ್, ಗೂಗಲ್ ಡ್ರೈವ್ ಸೇರಿದಂತೆ ಗೂಗಲ್ನ ಇನ್ನಿತರ ಉತ್ಪನ್ನಗಳ ಸಾಫ್ಟ್ವೇರ್ ವಿಭಾಗ ನಿರ್ವಹಣೆಯ ಮುಖ್ಯಸ್ಥನಾಗಿ ಕೆಲಸಕ್ಕೆ ಸೇರಿದ ಸುಂದರ್ ಪಿಚೈ, ಕೆಲಸಕ್ಕೆ ಸೇರಿದ 11 ವರ್ಷಗಳಲ್ಲಿ ಸಾಧಿಸಿದ್ದು ಅಪಾರ.
ಅವರ ಪ್ರತಿಭೆಯನ್ನು ಗುರುತಿಸಿ 2015ರಲ್ಲಿ ಗೂಗಲ್ ಸಂಸ್ಥೆ ಅವರಿಗೆ ಸಿಇಓ ಸ್ಥಾನಮಾನ ನೀಡಿತು. ಆ ಮೂಲಕ ಜಗತ್ತಿನ ದೈತ್ಯ ಕಂಪೆನಿಯೊಂದರ ಅತ್ಯುನ್ನತ ಸ್ಥಾನಕ್ಕೆ ಭಾರತದ ತಮಿಳುನಾಡಿನ ಹುಡುಗ ಸಾರಥ್ಯ ವಹಿಸುವಂತಾಯಿತು. ಇದು ಭಾರತದ ಪಾಲಿಗೆ ಸಂತಸ ಹಾಗೂ ಹೆಮ್ಮೆಯ ವಿಚಾರವೂ ಹೌದು. ಇಂತಹ ವಿಶೇಷ ಸಾಧಕನ 49ನೇ ವರ್ಷದ ಹುಟ್ಟುಹಬ್ಬದ ನೆಪದಲ್ಲಿ ಅವರ ಬಗ್ಗೆ ಅಷ್ಟಾಗಿ ಎಲ್ಲೂ ಪ್ರಸ್ತಾಪವಾಗದ 5 ಕುತೂಹಲಕಾರಿ ಸಂಗತಿಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದ್ದೇವೆ.
ಗೂಗಲ್ ಸಿಇಓ ಸುಂದರ್ ಪಿಚೈ ಅವರ ಪೂರ್ಣ ಹೆಸರು ಪಿಚೈ ಸುಂದರ್ರಾಜನ್. ಮಧುರೈನ ಮಧ್ಯಮ ಕುಟುಂಬದಲ್ಲಿ ಜನಿಸಿದ ಸುಂದರ್ ಪಿಚೈ ಅವರ ತಂದೆ ರಘುನಾಥ ಪಿಚೈ ಬ್ರಿಟೀಷ್ ಸಂಸ್ಥೆ ಜಿಇಸಿ ಎಂಬಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ತಾಯಿ ಲಕ್ಷ್ಮೀ ಸ್ಟೆನೋಗ್ರಾಫರ್ ಆಗಿದ್ದರು. ಇವತ್ತು ಇಡೀ ಜಗತ್ತನ್ನೇ ವ್ಯಾಪಿಸಿರುವ ಸಂಸ್ಥೆಯ ಸಿಇಓ ಆಗಿರುವ ಸುಂದರ್ ಪಿಚೈ ತಮ್ಮ ಬಾಲ್ಯವನ್ನು ಕಳೆದಿದ್ದು ಚೆನ್ನೈನ ಅಶೋಕ್ ನಗರದಲ್ಲಿನ ಎರಡು ರೂಮ್ಗಳ ಅಪಾರ್ಟ್ಮೆಂಟ್ ಒಂದರಲ್ಲಿ.
ಇವತ್ತು ದೈತ್ಯ ಸಂಸ್ಥೆಯ ಮುಖ್ಯಸ್ಥನಾಗಿರುವ ಪಿಚೈ ಅವರಿಗೆ ಒಂದು ಕಾಲದಲ್ಲಿ ರೆಫ್ರಿಜರೇಟರ್ ಕೊಳ್ಳಬೇಕೆಂದರೂ ಅದು ಸಾಧ್ಯವಾಗಿರಲಿಲ್ಲ. ಈ ವಿಚಾರವನ್ನು ಅವರು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದು, ನಾನು ಚಿಕ್ಕವನಿದ್ದಾಗೊಮ್ಮೆ ಬರಗಾಲ ಬಂದಿತ್ತು. ಆಗ ಬೇರೆಯವರೆಲ್ಲಾ ಮನೆಯ ಫ್ರಿಜ್ನಲ್ಲಿ ನೀರು ಸಂಗ್ರಹಿಸಿಟ್ಟುಕೊಂಡು ಕುಡಿಯುತ್ತಿದ್ದರು. ನಮ್ಮ ಬಳಿ ಆಗ ರೆಫ್ರಿಜರೇಟರ್ ಕೊಳ್ಳುವುದಕ್ಕೇ ಯೋಚಿಸುವ ಪರಿಸ್ಥಿತಿ. ಕೊನೆಗೆ ಏನೇನೋ ಮಾಡಿ ಒಂದು ರೆಫ್ರಿಜರೇಟರ್ ಕೊಂಡೆವು. ಅಂದಹಾಗೆ, ಇವತ್ತಿಗೂ ಪಕ್ಕದಲ್ಲಿ ಒಂದು ನೀರಿನ ಬಾಟಲ್ ಇಟ್ಟುಕೊಳ್ಳದೇ ಮಲಗುವುದು ನನ್ನಿಂದ ಸಾಧ್ಯವಿಲ್ಲ ಎಂದು ಪಿಚೈ ಹೇಳಿಕೊಂಡಿದ್ದಾರೆ.
ಸುಂದರ್ ಪಿಚೈ ಮದುವೆಯಾಗಿದ್ದು ಅವರ ಕಾಲೇಜು ಗೆಳತಿ ಅಂಜಲಿ ಎಂಬುವವರನ್ನು. ಐಐಟಿ ಖರಗ್ಪುರದಲ್ಲಿ ಪರಸ್ಪರ ಭೇಟಿಯಾದ ಅವರು ಸಹಪಾಠಿಗಳಾಗಿದ್ದರು. ನಂತರ ಅವರ ಗೆಳೆತನ ಗಾಢವಾಗುತ್ತಾ ಪ್ರೀತಿಗೆ ತಿರುಗಿ ವಿವಾಹವಾದರು.
ಸುಂದರ್ ಪಿಚೈ ಅವರಿಗೆ ಫುಟ್ಬಾಲ್ ಹಾಗೂ ಕ್ರಿಕೆಟ್ ಆಡುವುದೆಂದರೆ ಪಂಚಪ್ರಾಣವಂತೆ. ಈ ವಿಚಾರವನ್ನು ಸ್ವತಃ ಅವರೇ ಹೇಳಿಕೊಂಡಿದ್ದು, ನನಗೆ ಈ ಎರಡೂ ಆಟಗಳೆಂದರೆ ಹುಚ್ಚುಪ್ರೀತಿ. ಇವುಗಳೊಟ್ಟಿಗೆ ಓದುವ ಹುಚ್ಚೂ ಇತ್ತು. ಕೈಗೆ ಏನೇ ಸಿಕ್ಕರೂ ಹಿಡಿದುಕೊಂಡು ಓದುತ್ತಿದ್ದೆ. ಸ್ನೇಹಿತರು, ಕ್ರಿಕೆಟ್, ಪುಸ್ತಕ ಇವೇ ನನ್ನ ಪಾಲಿಗೆ ಆಗಿನ ಸಂಪೂರ್ಣ ಜೀವನ. ಆದರೆ, ಅದು ಯಾವತ್ತೂ ನನಗೆ ಬೇಸರ ಕೊಟ್ಟಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈಗ ಗೂಗಲ್ ಸಿಇಓ ಆಗಿರುವ ಸುಂದರ್ ಪಿಚೈಗೆ 2014ರಲ್ಲಿ ಮತ್ತೊಂದು ದೊಡ್ಡ ಅವಕಾಶ ಲಭಿಸಿತ್ತು. ಮೈಕ್ರೋಸಾಫ್ಟ್ ಸಂಸ್ಥೆಯ ಸಿಇಓ ಹುದ್ದೆಗೆ ಪಿಚೈ ಆಯ್ಕೆಯಾಗಿದ್ದರು. ನಂತರ ಅದು ಸತ್ಯ ನಾಡೆಲ್ಲಾ ಪಾಲಾಯಿತು.
ಇದನ್ನೂ ಓದಿ:
ಗೂಗಲ್ ಉದ್ಯೋಗಿಗಳಿಗೆ ಪತ್ರ ಬರೆದ ಸುಂದರ್ ಪಿಚೈ; ಆ ಇ-ಮೇಲ್ನಲ್ಲೇನಿದೆ?
ಜಿಮೇಲ್ ಅಕೌಂಟ್ನ ಪಾಸ್ವರ್ಡ್ ರೀಸೆಟ್ ಮಾಡೋದು ಹೇಗೆಂದು ಗೂಗಲ್ ಸಿಇಒ ಸುಂದರ್ ಪಿಚೈಗೆ ಟ್ವೀಟ್