ಜಿಮೇಲ್ ಅಕೌಂಟ್ನ ಪಾಸ್ವರ್ಡ್ ರೀಸೆಟ್ ಮಾಡೋದು ಹೇಗೆಂದು ಗೂಗಲ್ ಸಿಇಒ ಸುಂದರ್ ಪಿಚೈಗೆ ಟ್ವೀಟ್
ಜಿಮೇಲ್ ಪಾಸ್ವರ್ಡ್ ರೀಸೆಟ್ ಮಾಡೋದು ಹೇಗೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನೇ ಪ್ರಶ್ನಿಸಿ ಟ್ವಿಟರ್ ಬಳಕೆದಾರರು ಮಾಡಿರುವ ಟ್ವೀಟ್ ಈಗ ಬಹಳ ಸುದ್ದಿಯಲ್ಲಿದೆ.
ಜಿಮೇಲ್ ಅಕೌಂಟ್ನ ಪಾಸ್ವರ್ಡ್ ಮರೆತುಬಿಡೋದು ಅಥವಾ ಕಳೆದುಕೊಳ್ಳೋದು ಬಹಳ ಮುಜುಗರ ತರುವಂಥದ್ದು. ಆದರೆ ಈಗ ಏನೆಂದರೆ, ಯೂಟ್ಯೂಬ್ ಅನ್ನೋ ಮಹಾನ್ ಮಾರ್ಗದರ್ಶಕ ಕಣ್ಣೆದುರು ಇರುವಾಗ ಎಲ್ಲಕ್ಕೂ ಪರಿಹಾರ ಛಕಾಛಕ್ ಸಿಗುತ್ತದೆ. ಈಗ ಹೇಳಿದ ಸಣ್ಣ- ಪುಟ್ಟ ಸಮಸ್ಯೆಗಳೆಲ್ಲ ಸಮಸ್ಯೆಗಳೇ ಅಲ್ಲವೇನೋ ಎಂಬಷ್ಟು ಸಲೀಸಾಗಿ ನಿವಾರಣೆ ಆಗುತ್ತದೆ. ಒಂದು ವೇಳೆ, ಯೂಟ್ಯೂಬ್ನಲ್ಲೂ ಪರಿಹಾರ ಸಿಗದಿದ್ದರೆ ಕಸ್ಟಮರ್ ಸರ್ವೀಸ್ ಬಳಿ ಕೇಳ್ತೀವಲ್ಲವಾ? ಜಿಮೇಲ್ ಅಕೌಂಟ್ನಲ್ಲಿ ಸಮಸ್ಯೆ ಆಯಿತು ಅಂತ ನೀವು ಎಂದಾದರೂ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಟ್ವೀಟ್ ಮಾಡುವ ಬಗ್ಗೆ ಆಲೋಚನೆ ಮಾಡಿದ್ದೀರಾ? ಇದ್ಯಾಕೋ ಅತಿಯಾಯಿತು ಅಂತನಿಸ್ತಿದೆಯಾ? ಹಾಗಿದ್ದರೆ ಟ್ವಿಟರ್ ಬಳಕೆದಾರ @Madhan67966174 ಟ್ಚೀಟ್ ನೋಡಲೇಬೇಕು.
ಈ ಟ್ವಿಟರ್ ಬಳಕೆದಾರ ಈಚೆಗೆ ಮೈಕ್ರೋ-ಬ್ಲಾಗಿಂಗ್ ಸೈಟ್ ಮೂಲಕ ಸುಂದರ್ ಪಿಚೈ ಅವರನ್ನು ಮನವಿ ಮಾಡಿದ್ದಾರೆ. ನನ್ನ ಪಾಸ್ವರ್ಡ್ ರೀಸೆಟ್ ಮಾಡುವುದಕ್ಕೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. “ಹಲೋ ಸರ್. ಹೇಗಿದ್ದೀರಿ? ಜಿಮೇಲ್ ಐಡಿ ಪಾಸ್ವರ್ಡ್ ಬಗ್ಗೆ ನನಗೆ ಒಂದು ಸಹಾಯ ಆಗಬೇಕಿದೆ. ಪಾಸ್ವರ್ಡ್ ರೀಸೆಟ್ ಮಾಡುವುದು ಹೇಗೆ ಅಂತ ಮರೆತುಬಿಟ್ಟಿದ್ದೀನಿ. ದಯವಿಟ್ಟು ನನಗೆ ಸಹಾಯ ಮಾಡಿ,” ಎಂದಿದ್ದಾರೆ.
ಅಂದಹಾಗೆ, ಈಚೆಗೆ ಸುಂದರ್ ಪಿಚೈ ಅವರು ಭಾರತದಲ್ಲಿನ ಕೋವಿಡ್-19 ಸನ್ನಿವೇಶಕ್ಕೆ ನೆರವಿನ ಹಸ್ತ ಚಾಚಲು ಮುಂದಾಗಿದ್ದಾರೆ. ಅವರು ಟ್ವೀಟ್ ಮಾಡಿ, ಗೂಗಲ್‌ನಿಂದ ಗಿವ್ ಇಂಡಿಯಾ ಮತ್ತು ಯುನಿಸೆಫ್ಗೆ ವೈದ್ಯಕೀಯ ಪೂರೈಕೆಗೆ, ತೀರಾ ಅಪಾಯದಲ್ಲಿ ಇರುವ ಸಮುದಾಯಕ್ಕೆ ಸಹಾಯ ಮಾಡುವ ಸಂಸ್ಥೆಗಳಿಗೆ ಮತ್ತು ಮುಖ್ಯ ಮಾಹಿತಿಯನ್ನು ಪ್ರಚಾರ ಮಾಡುವುದಕ್ಕೆ ಅನುದಾನ ಒದಗಿಸುವುದಕ್ಕೆ 135 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಆ ಸಂಬಂಧವಾಗಿ ಅವರು ಟ್ವೀಟ್ ಮಾಡಿದ್ದು, ಆ ಟ್ವೀಟ್ನಲ್ಲಿ ಮದನ್ ತಮ್ಮ ಜಿಮೇಲ್ ಪಾಸ್ವರ್ಡ್ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಇದನ್ನು ನೋಡಿದರೆ ಸುಂದರ್ ಪಿಚೈ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಬಗ್ಗೆ ಕುತೂಹಲ ಇದ್ದೇ ಇದೆ.
Hello sirHow are youI need one help in my gmail id password I forgeted how to reset the password please help me
— Madhan (@Madhan67966174) April 26, 2021
ಇದನ್ನೂ ಓದಿ: ಭಾರತದಲ್ಲಿ ಡಿಜಿಟಲ್ ಕ್ರಾಂತಿ: ಗೂಗಲ್‌ನಿಂದ 75,000 ಕೋಟಿ ರೂ. ಹೂಡಿಕೆ
(Twitter user Madhan asked Google CEO Sundar Pichai help to reset Gmail password)
Published On - 12:23 pm, Fri, 30 April 21