ಕಿಮ್ ಜಾಂಗ್ ಉನ್ ತೂಕ ಕಳೆದುಕೊಂಡರೆ ಅಕ್ಕಪಕ್ಕದವರಿಗೆ ತಲೆಬಿಸಿ; 8 ಲಕ್ಷದ ವಾಚ್ ಬಿಚ್ಚಿಟ್ಟ ಗುಟ್ಟಿನ ಹಿಂದೆ ದೊಡ್ಡ ಲೆಕ್ಕಾಚಾರ
North Korea: ಕಿಮ್ ಆರೋಗ್ಯದ ಬಗ್ಗೆ ಕಿಮ್ನ ಸ್ವದೇಶಿಗರು ಎಷ್ಟು ತಲೆಕೆಡಿಸಿಕೊಂಡಿದ್ದಾರೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ತಲೆಬಿಸಿ ವಿದೇಶದ ಕೆಲ ನಾಯಕರಿಗೂ ಇದೆ. ಒಂದುವೇಳೆ ಆತ ಹಿಡಿತ ಕಳೆದುಕೊಂಡರೆ ದಕ್ಷಿಣ ಕೊರಿಯಾದಲ್ಲಿರುವ ನ್ಯೂಕ್ಲಿಯರ್ ಶಕ್ತಿ ಹಾಗೂ ಇನ್ನಿತರ ವ್ಯವಸ್ಥೆಗಳ ಮೇಲೆ ಬೇರೆಯವರು ಪ್ರಾಬಲ್ಯ ಸಾಧಿಸುವುದಕ್ಕೆ ನೋಡಬಹುದು ಎಂಬ ಆತಂಕವೂ ಇದೆ.
ಅನೇಕ ದಿನಗಳ ಅಜ್ಞಾತವಾಸದ ಬಳಿಕ ಮತ್ತೆ ಪ್ರತ್ಯಕ್ಷರಾಗಿರುವ ಕಿಮ್ ಜಾಂಗ್ ಉನ್ ದೈಹಿಕವಾಗಿ ಕೊಂಚ ಸೋತಂತೆ ಕಾಣುತ್ತಿದ್ದಾರೆ ಎಂಬ ಮಾತು ಈಗ ಉತ್ತರ ಕೊರಿಯಾದ ಗಡಿಯನ್ನೂ ದಾಟಿ ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲೆಡೆ ಸುದ್ದಿ ಮಾಡುತ್ತಿದೆ. ಕೆಲ ಮೂಲಗಳ ಪ್ರಕಾರ ಇತ್ತೀಚೆಗೆ ತನ್ನ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸುತ್ತಿರುವ ಕಿಮ್ ಜಾಂಗ್ ಉನ್ ತೂಕ ಇಳಿಸಿಕೊಂಡಿದ್ದಾರಂತೆ. ಅದಕ್ಕೆ ಅವರ ಕೈಯಲ್ಲಿರುವ ಸ್ವಿಸ್ನ ದುಬಾರಿ ವಾಚ್ ಕೂಡಾ ಸಾಕ್ಷಿಯಾಗಿದೆ ಎನ್ನುವುದು ತಾಜಾ ಸಮಾಚಾರ.
ಕಿಮ್ ಜಾಂಗ್ ಉನ್ ಕೈಯಲ್ಲಿ IWC Schaffhausen Portofino ಎಂಬ ವಾಚ್ ಸದಾ ಇರುತ್ತದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಫೋಟೋಗಳಲ್ಲಿ ಈ ವಾಚನ್ನು ಕೈಗೆ ಇನ್ನಷ್ಟು ಬಿಗಿದು ಕಟ್ಟಿರುವಂತೆ ಕಾಣುತ್ತಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದು, ಆಂಗ್ಲ ಮಾಧ್ಯಮವೊಂದು ಈ ಬಗ್ಗೆ ವರದಿಯನ್ನೂ ಮಾಡಿದೆ. ಸುಮಾರು 12 ಸಾವಿರ ಡಾಲರ್ (ಅಂದಾಜು 8.76ಲಕ್ಷ ರೂ.) ಬೆಲೆಬಾಳುವ ಈ ವಾಚ್ ಮೂಲಕ ಕಿಮ್ ತೆಳ್ಳಗಾಗಿದ್ದಾರೆ ಎಂಬ ಗುಟ್ಟು ಬಹಿರಂಗವಾಗುತ್ತಿದೆ.
ಕಿಮ್ ಜಾಂಗ್ ಉನ್ ಕುಟುಂಬಸ್ಥರಲ್ಲಿ ಹೃದಯ ಸಂಬಂಧಿ ಕಾಯಿಲೆ ಸಾಮಾನ್ಯವೆಂಬಂತೆ ಆಗಿರುವ ಕಾರಣ ಅವರ ಆರೋಗ್ಯ ಹಾಗೂ ದೈಹಿಕ ಬದಲಾವಣೆಗಳನ್ನು ಒಂದು ಗುಪ್ತಚರ ಸಂಸ್ಥೆ ನಿರಂತರವಾಗಿ ಗಮನಿಸುತ್ತಿದೆಯಂತೆ. ಆ ಮೂಲಕ ಕಿಮ್ನ ಆಡಳಿತ ಶೈಲಿ, ಹಿಡಿತದಲ್ಲಿ ಏನಾದರೂ ಬದಲಾವಣೆ ಕಂಡುಬರುತ್ತದಾ ಎಂಬ ಬಗ್ಗೆಯೂ ಕಣ್ಣಿಡಲಾಗಿದೆ.
ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಯೊಂದು ಕಳೆದ ನವೆಂಬರ್ನಲ್ಲಿ ಕಿಮ್ ಜಾಂಗ್ ಉನ್ ದೇಹದ ತೂಕದ ಬಗ್ಗೆ ಮಾಹಿತಿ ನೀಡಿತ್ತು. ಪ್ರಸ್ತುತ ಆತ 140 ಕೆಜಿ ತೂಕ ಹೊಂದಿದ್ದು, 2011ರಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವಾಗ ಇದ್ದಿದ್ದಕ್ಕಿಂತ 50 ಕೆಜಿ ಹೆಚ್ಚಿಸಿಕೊಂಡಿರುವುದಾಗಿ ತಿಳಿಸಿತ್ತು. ಅಂದಹಾಗೆ ಕಿಮ್ ಆರೋಗ್ಯದ ಬಗ್ಗೆ ಕಿಮ್ನ ಸ್ವದೇಶಿಗರು ಎಷ್ಟು ತಲೆಕೆಡಿಸಿಕೊಂಡಿದ್ದಾರೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ತಲೆಬಿಸಿ ವಿದೇಶದ ಕೆಲ ನಾಯಕರಿಗೂ ಇದೆ. ಒಂದುವೇಳೆ ಆತ ಹಿಡಿತ ಕಳೆದುಕೊಂಡರೆ ದಕ್ಷಿಣ ಕೊರಿಯಾದಲ್ಲಿರುವ ನ್ಯೂಕ್ಲಿಯರ್ ಶಕ್ತಿ ಹಾಗೂ ಇನ್ನಿತರ ವ್ಯವಸ್ಥೆಗಳ ಮೇಲೆ ಬೇರೆಯವರು ಪ್ರಾಬಲ್ಯ ಸಾಧಿಸುವುದಕ್ಕೆ ನೋಡಬಹುದು ಎಂಬ ಆತಂಕವೂ ಇದೆ.
ಅನೇಕ ಸಮಯದಿಂದ ಕಿಮ್ ಅಲ್ಲಿನ ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸುತ್ತಿದ್ದು, ಮೊನ್ನೆ ಕಾಣಿಸಿಕೊಂಡಾಗ ದೇಹದ ತೂಕ, ಆರೋಗ್ಯ, ಕೈ ಮೇಲಾಗಿರುವ ಗುರುತು ಹೀಗೆ ಒಂದರ ಬೆನ್ನ ಹಿಂದೆ ಮತ್ತೊಂದು ಎಂಬಂತೆ ಸಾಲುಸಾಲು ಅನುಮಾನಗಳು ಹುಟ್ಟಿಕೊಂಡಿವೆ. ಇದೀಗ ಕಿಮ್ ಜಾಂಗ್ ಉನ್ ತೂಕ ಕಳೆದುಕೊಂಡಿದ್ದಕ್ಕೂ, ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಆಗಿದೆ ಎಂಬ ವದಂತಿಗೂ ನಿಜವಾದ ಸಂಬಂಧ ಇದ್ದಿದ್ದೇ ಆದಲ್ಲಿ ಉತ್ತರ ಕೊರಿಯಾದ ಗಡಿಯಾಚೆಗೂ ಹೊಸ ಲೆಕ್ಕಾಚಾರಗಳು ಹುಟ್ಟಿಕೊಳ್ಳುವುದು ಸತ್ಯ.
Published On - 3:22 pm, Thu, 10 June 21