ಕೊರೊನಾ ಲಸಿಕೆ ಪಡೆಯಲು ಹೋದಾಗ ಸೂಜಿಗೆ ಹೆದರಿ ನೆಲಕ್ಕುರುಳಿದ ವ್ಯಕ್ತಿ: ವಿಡಿಯೋ ವೈರಲ್

ಆಗಿದ್ದಾಗಲಿ ಎಂದು ತೋಳು ನೀಡಿ ನಿಂತುಕೊಂಡೇ ಲಸಿಕೆ ಸ್ವೀಕರಿಸಲು ಸಜ್ಜಾದ ಮಗ್ಯೂಲಾ ಕೊನೆಗೆ ಸೂಜಿ ಚುಚ್ಚಬೇಕೆಂಬ ಸಂದರ್ಭದಲ್ಲಿ ಏನೂ ಅರಿವಿಲ್ಲದಂತಾಗಿ ಧೊಪ್ಪನೆ ನೆಲಕ್ಕೆ ಬಿದ್ದಿದ್ದಾರೆ. ಪ್ರಜ್ಞಾಹೀನರಾದಂತೆ ಕಂಡುಬಂದ ಅವರನ್ನು ನೋಡಿ ಅಲ್ಲಿದ್ದವರೆಲ್ಲಾ ಗಾಬರಿಗೊಂಡಿದ್ದಾರೆ.

ಕೊರೊನಾ ಲಸಿಕೆ ಪಡೆಯಲು ಹೋದಾಗ ಸೂಜಿಗೆ ಹೆದರಿ ನೆಲಕ್ಕುರುಳಿದ ವ್ಯಕ್ತಿ: ವಿಡಿಯೋ ವೈರಲ್
ಲಸಿಕೆ ಪಡೆಯುವಾಗ ಪ್ರಜ್ಞಾಹೀನನಾದ ವ್ಯಕ್ತಿ


ಕೊರೊನಾ ಎರಡನೇ ಅಲೆ ಆರಂಭವಾದ ನಂತರ ಲಸಿಕೆಗೆ ಮೊದಲಿಗಿಂತಲೂ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಮೂರನೇ ಅಲೆ ತಡೆಗಟ್ಟಲು ಲಸಿಕೆಯೊಂದೇ ಸದ್ಯಕ್ಕಿರುವ ಪರಿಣಾಮಕಾರಿ ಅಸ್ತ್ರ ಎನ್ನುವುದು ತಜ್ಞರ ಅಭಿಮತವಾಗಿದ್ದು, ಸಾವಿನಿಂದ ಪಾರಾಗಬೇಕೆಂದರೆ ಜನರು ಮುಂದೆ ಬಂದು ಲಸಿಕೆ ಸ್ವೀಕರಿಸಬೇಕು ಎಂದು ಉತ್ತೇಜಿಸುತ್ತಿದ್ದಾರೆ. ಆದರೆ, ಇಲ್ಲೊಂದು ವಿಲಕ್ಷಣ ಘಟನೆ ನಡೆದಿದ್ದು, ಲಸಿಕೆ ತೆಗೆದುಕೊಳ್ಳಲೆಂದು ಬಂದ ವ್ಯಕ್ತಿ ಬೇರೆ ಯಾವ ಸಮಸ್ಯೆ ಇಲ್ಲದಿದ್ದರೂ ಬರೀ ಸೂಜಿಯೊಂದನ್ನು ನೋಡಿಯೇ ಭಯದಿಂದ ನೆಲಕ್ಕುರುಳಿದ್ದಾರೆ. ನೋಡಲು ಕಟ್ಟುಮಸ್ತಾದ ದೇಹವಿದ್ದರೂ ಸೂಜಿಗೆ ಭಯಗೊಂಡ ವ್ಯಕ್ತಿ ನಡುಗುತ್ತಲೇ ಧೊಪ್ಪನೆ ನೆಲಕ್ಕೆ ಬಿದ್ದಿದ್ದು, ಅರೆಕ್ಷಣ ಅಲ್ಲಿದ್ದವರೆಲ್ಲಾ ಗಾಬರಿಗೊಂಡಿದ್ದಾರೆ. ಅದೃಷ್ಟವಶಾತ್, ವ್ಯಕ್ತಿಯ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ.

ಕೊರೊನಾ ಲಸಿಕೆ ಸ್ವೀಕರಿಸಲು ಹೋಗುವವರೆಲ್ಲಾ ಆ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸಲು ಫೋಟೋ, ವಿಡಿಯೋ ತೆಗೆಸಿಕೊಳ್ಳುವುದರಿಂದ ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಅಂದಹಾಗೆ ಸದರಿ ಘಟನೆಯು ಬ್ರೆಜಿಲ್​ನಲ್ಲಿ ನಡೆದಿದ್ದು, ಸೂಜಿಗೆ ಹೆದರಿ ನೆಲಕ್ಕೆ ಬಿದ್ದ ವ್ಯಕ್ತಿಯ ಹೆಸರು ಮಗ್ಯೂಲಾ ಜ್ಯೂನಿಯರ್ ಎಂದು ತಿಳಿದುಬಂದಿದೆ.

ಲಸಿಕೆಗಾಗಿ ಕಾಯುತ್ತಾ ನಿಂತಿದ್ದ ಮಗ್ಯೂಲಾ ತನ್ನ ಸರತಿ ಬರುವಷ್ಟರಲ್ಲಾಗಲೇ ದಿಗಿಲುಗೊಂಡು ನಡುಗುತ್ತಿದ್ದರು. ಅಲ್ಲಿದ್ದ ದಾದಿಯರು, ವೈದ್ಯರು ಇನ್ನೇನು ಲಸಿಕೆ ನೀಡಬೇಕು ಎನ್ನುವಷ್ಟರಲ್ಲಿ ಇವರ ಚಡಪಡಿಕೆ ಮತ್ತೂ ಜೋರಾಗಿದೆ. ಒಮ್ಮೆ ಆ ತೋಳಿಗೆ, ಇನ್ನೊಮ್ಮೆ ಈ ತೋಳಿಗೆ ಎಂದು ಕಣ್ಣು ಮುಚ್ಚಿಕೊಂಡು ಒದ್ದಾಡಿದ ಮಗ್ಯೂಲಾಗೆ ಸೂಜಿ ಕಂಡರೆ ಅದೆಷ್ಟು ಭಯ ಇದ್ದಿರಬಹುದೆಂದು ವಿಡಿಯೋ ನೋಡಿದರೆ ಅರ್ಥವಾಗುತ್ತದೆ.

ಕೊನೆಗೆ ಆಗಿದ್ದಾಗಲಿ ಎಂದು ತೋಳು ನೀಡಿ ನಿಂತುಕೊಂಡೇ ಲಸಿಕೆ ಸ್ವೀಕರಿಸಲು ಸಜ್ಜಾದ ಮಗ್ಯೂಲಾ ಕೊನೆಗೆ ಸೂಜಿ ಚುಚ್ಚಬೇಕೆಂಬ ಸಂದರ್ಭದಲ್ಲಿ ಏನೂ ಅರಿವಿಲ್ಲದಂತಾಗಿ ಧೊಪ್ಪನೆ ನೆಲಕ್ಕೆ ಬಿದ್ದಿದ್ದಾರೆ. ಪ್ರಜ್ಞಾಹೀನರಾದಂತೆ ಕಂಡುಬಂದ ಅವರನ್ನು ನೋಡಿ ಅಲ್ಲಿದ್ದವರಿಗೆಲ್ಲಾ ಕೆಲಕ್ಷಣ ಆತಂಕವಾಯಿತಾದರೂ ಕೊನೆಗೆ ನಿಧಾನಕ್ಕೆ ಕೈ ಕಾಲು ಅಲುಗಾಡಿಸಿದಾಗ ಪ್ರಜ್ಞೆ ಬಂದಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದ್ದು, ಅಂತಹ ಸಧೃಡ ವ್ಯಕ್ತಿ ಯಕಶ್ಚಿತ್ ಸೂಜಿಗೆ ಹೆದರಿದ್ದಕ್ಕೆ ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಅಲ್ಲದೇ ಇನ್ನು ಕೆಲವರು ನಿಂತುಕೊಂಡು ಲಸಿಕೆ ಪಡೆಯುವುದು ಎಷ್ಟು ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಕ್ಷಣಗಳನ್ನು ವ್ಯಕ್ತಿಯ ಸಂಗಾತಿ ತನ್ನ ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:
Viral Video:‘ನಾನು ಇಂಜೆಕ್ಷನ್​ ತೆಗೆದುಕೊಳ್ಳೋದಿಲ್ಲ..’- ಲಸಿಕೆ ಕೊಡಲು ಬಂದವರನ್ನು ನೋಡಿ ಭಯದಿಂದ ದೊಡ್ಡ ಡ್ರಮ್​​ನ ಹಿಂದೆ ಅಡಗಿ ಕುಳಿತ ಅಜ್ಜಿ.. 

ಲಸಿಕೆ ಪಡೆದ ಆ ಯುವಕನ ರೀತಿಯೇ ವೈರಲ್​ ಆಯ್ತು ಪ್ರಶಾಂತ್​ ನೀಲ್ ಫೋಟೋ​; ಆದರೆ ಕಾರಣ ಬೇರೆ