GWR: ಸೊಂಟದ ಸುತ್ತ ತಿರುಗಿಸುತ್ತ ಮಕ್ಕಳು ಮತ್ತು ದೊಡ್ಡವರು ಕೂಡ ಓಲಾಡುವ Hula Hoop ಅನ್ನು ನೀವೆಲ್ಲ ನೋಡುತ್ತಿರುತ್ತೀರಿ. ದೇಹದಂಡನೆಯ ಅಥವಾ ಕುಣಿಯುವ ಉತ್ಸಾಹವುಳ್ಳವರಾಗಿದ್ದಲ್ಲಿ ಆಡಿರುತ್ತೀರಿ ಕೂಡ. ಆದರೆ ಬೆಂಕಿಯುರಿಯ ಬಳೆಗಳು, ಅದೂ ಒಂದಲ್ಲ ಎರಡಲ್ಲ… ಎಂಟು ಬಳೆಗಳನ್ನು ಏಕಕಾಲದಲ್ಲಿ ಮೈಸುತ್ತ ತಿರುಗಿಸುತ್ತ ಆಟವಾಡುವುದನ್ನು ನೋಡಿದ್ದೀರಾ? ಅಂಥಾ ಒಂದು ಅಚ್ಚರಿಮೂಡಿಸುವ ಗಿನ್ನಿಸ್ ದಾಖಲೆ ಗಳಿಸಿರುವ ಪ್ರದರ್ಶನ ಇಲ್ಲಿದೆ. ಇದನ್ನು ಸಾಧಿಸಿದ ಮಹಿಳೆ ಬೆಂಕಿಯೊಂದಿಗಿನ ಸರಸಗಳಿಂದಲೇ ಜಗದ್ವಿಖ್ಯಾತರಾಗಿರುವ ಗ್ರೇಸ್ ಗುಡ್ (Grace Good) ಎಂಬ ಸರ್ಕಸ್ ಪಟು.
ಇದನ್ನೂ ಓದಿ : Viral: ‘ಜಗತ್ತಿನ ನನ್ನ ನೆಚ್ಚಿನ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯ’; ಮಲಾಲಾ ಯುಸೂಫ್
ತಮ್ಮ ಅಸಾಧಾರಣ ಬೆಂಕಿಯಾಟ, ಗಾಳಿಯಾಟ, ಬಳೆಯಾಟಗಳಿಂದ ಹಾಗೂ ದೇಹ ಸಮತೋಲನದ ಅದ್ಭುತ ಪ್ರದರ್ಶನಗಳಿಂದ ಅಪಾರ ಜನಮನ್ನಣೆ ಗಳಿಸಿ ನೆರೆದವರ ಮನಸೂರೆಗೊಳ್ಳುತ್ತಲೇ ಬಂದಿರುವ ಗ್ರೇಸ್ ಈಗ ಎರಡು ಅನನ್ಯ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಏಕಕಾಲದಲ್ಲಿ ಅತಿಹೆಚ್ಚು ಬೆಂಕಿಯಬಳೆಗಳ ತಿರುಗಿಸುವಿಕೆ ಹಾಗೂ ಉರುಳುತ್ತಿರುವ ಬೃಹತ್ ಗ್ಲೋಬ್ ಮೇಲೆ ಸಮತೋಲನ ಸಾಧಿಸುತ್ತಲೇ ಅತಿ ಹೆಚ್ಚು Hula Hoop ಬಳೆಗಳ ತಿರುಗಿಸುವಿಕೆಯ ಮೂಲಕ 30ರ ಗ್ರೇಸ್ ಗುಡ್ ಎರಡು ಹೊಸ ವಿಶ್ವದಾಖಲೆಗಳನ್ನು ಬರೆದಿದ್ದಾರೆ. ಮೊದಲ ದಾಖಲೆಯಲ್ಲಿ ಅವರು ತಮ್ಮ ಸುತ್ತ ಎಂಟು ಬೆಂಕಿಯ ಬಳೆಗಳನ್ನೂ ಎರಡನೆಯದಲ್ಲಿ ಗ್ಲೋಬ್ ಮೇಲೆ ಬ್ಯಾಲನ್ಸ್ ಮಾಡುತ್ತ 28 ಬಳೆಗಳನ್ನೂ ತಿರುಗಿಸಿದ್ದಾರೆ.
‘ನಾನು ಹುಲಾ ಹೂಪ್‌ನೊಂದಿಗೆ ನನ್ನ ಪಯಣವನ್ನು 18ನೇ ವಯಸ್ಸಿಗೆ ಶುರು ಮಾಡಿದೆ. ಅಲ್ಲಿಂದ ಮುಂದೆ ನನಗದರ ಹುಚ್ಚೇ ಹಿಡಿದು ನನ್ನ ಆಟಕ್ಕೆ ಹೆಚ್ಚು ಹೆಚ್ಚು ಬಳೆಗಳನ್ನು ಕೂಡಿಸುತ್ತ ಹೋದೆ. ಮುಂದೆ ಇದಕ್ಕೆ ಬೆಂಕಿಯಾಟ ಗಾಳಿಯಾಟಗಳೂ ಕೂಡಿದುವು. ಆನಂತರದ್ದು ಇತಿಹಾಸ!’ ಎಂದು ಗ್ರೇಸ್ ತಮ್ಮ ಸಾಹಸದಾಟವನ್ನು ಬಣ್ಣಿಸಿದ್ದಾರೆ.
ಇದನ್ನೂ ಓದಿ : Viral Video: ನೆರಳು ಬೆಳಕಿನಲ್ಲಿ ಅರಳಿದ ಅರಿಜೀತ್ ಸಿಂಗ್; 30 ಮಿಲಿಯನ್ ಜನರು ನೋಡಿದ ಈ ಕಲಾಕೃತಿ
‘ದೊಡ್ಡ ಕನಸುಗಳನ್ನು ಕಾಣುವುದನ್ನು ಎಂದಿಗೂ ಬಿಡಬೇಡಿ! ಎಂದು ತಮ್ಮ ಅಭಿಮಾನಿಗಳಿಗೆ instagram ಮೂಲಕ ಸಂದೇಶ ಕಳಿಸಿದ್ದಾರೆ. ಅಂತರಿಕ್ಷದ ತಾರಾಮಂಡಲಗಳನ್ನು ಹತ್ತಿರದಿಂದ ಕಾಣಲಾಗದಿದ್ದರೂ ಭುವಿಯ ಮೇಲಿನ ಗ್ರೇಸ್ ಎಂಬ ತಾರೆಯ ಮಂಡಲವನ್ನು ನೋಡಲು ಮರೆಯದಿರಿ.
ಈ ವಿಡಿಯೋ ನೋಡಿ ನಿಮಗೆ ಏನನ್ನಿಸಿತು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:37 pm, Sat, 16 September 23