ಮದುವೆಯೆಂದರೇ ಗೌಜು- ಸಂಭ್ರಮ. ಅದರಲ್ಲೂ ಉತ್ತರ ಭಾರತದಲ್ಲಿ ಮದುವೆಯ ಶಾಸ್ತ್ರ ಸಂಪ್ರದಾಯಗಳು ಬಹಳ ಅದ್ದೂರಿಯಿಂದ ನಡೆಯುತ್ತವೆ. ಮದುವೆಯಲ್ಲಿ ಮದುಮಗ ಕುದುರೆಯ ಮೇಲೇರಿ ಬರುವುದೂ ಇಂತಹ ಸಂಪ್ರದಾಯಗಳಲ್ಲೊಂದು. ಮದುವೆಯ ಸಂಭ್ರಮ ಮತ್ತಷ್ಟು ಕಳೆಗಟ್ಟಲು ಪಟಾಕಿ- ಸುಡುಮದ್ದುಗಳನ್ನೂ ಕೆಲವರು ಸಿಡಿಸುತ್ತಾರೆ. ಕೆಲವೊಮ್ಮೆ ಅದು ಎಂತಹ ಫಜೀತಿಯನ್ನು ತಂದೊಡ್ಡುತ್ತದೆ ಎಂಬುದಕ್ಕೆ ದೃಷ್ಟಾಂತವಾಗಿ ವೈರಲ್ ಆದ ವಿಡಿಯೊವೊಂದು ಇಲ್ಲಿದೆ.
ರಾಜಸ್ತಾನದ ಅಜ್ಮೇರ್ ಸಮೀಪದ ರಾಮ್ಪುರ ಗ್ರಾಮದಲ್ಲಿ ಮದುವೆಯೊಂದು ನಡೆಯುತ್ತಿತ್ತು. ಕುದುರೆ ಏರಿ ಬಂದ ಮದುಮಗ, ಸಭಾಂಗಣಕ್ಕೆ ಪ್ರವೇಶಿಸುವ ಮೊದಲು ಶಾಸ್ತ್ರ ಪ್ರಕಾರದಂತೆ ಹೊರಗೆ ನಿಂತಿದ್ದಾನೆ. ವಿಧಿ ವಿಧಾನಗಳು ನಡೆಯುತ್ತಿರುವಾಗ ಮದುಮಗ ಬಂದ ಖುಷಿಗೆ ಯಾರೋ ಪಟಾಕಿ ಹೊಡೆದಿದ್ದಾರೆ. ಅದರಿಂದ ವಿಚಲಿತವಾದ ಕುದುರೆ ಗಾಬರಿ ಬಿದ್ದಿದೆ. ಮೊದಲಿಗೆ ಅಲ್ಲೇ ಕೊಸರಾಡಿದ ಅದು, ನಂತರ ಮದುಮಗನೊಂದಿಗೆ ಓಟ ಕಿತ್ತಿದೆ. ಕುದುರೆಯನ್ನು ಕರೆತಂದಿದ್ದ ಅದರ ಮಾಲೀಕನೂ ಕುದುರೆಯ ಹಿಂದೆ ಓಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಇದನ್ನು ನೋಡಿರುವ ಸಾಹಿತ್ಯ ಪ್ರೇಮಿಗಳಿಗೆ ತಕ್ಷಣ ಒಂದು ಘಟನೆ ನೆನಪಾಗಿರಬಹುದು. ಜಯಂತ್ ಕಾಯ್ಕಿಣಿ ಅವರ ಒಂದು ಕತೆ ‘ದಗಡು ಪರಬನ ಅಶ್ವಮೇಧ’ದಲ್ಲೂ ಇಂಥದ್ದೇ ಪ್ರಸಂಗ ಬರುತ್ತದೆ. ಮದುಮಗ ಕುದುರೆಯಲ್ಲಿರುವಾಗ ಅಚಾನಕ್ಕಾಗಿ ಉಂಟಾದ ಶಬ್ದಕ್ಕೆ ಅದು ಹೆದರಿ ಮದುಮಗನನ್ನು ಹೊತ್ತು ಪರಾರಿಯಾಗುತ್ತದೆ. ಅಲ್ಲಿಂದ ಕತೆ ಬೇರೆ ಬೇರೆ ಹರಹು ಪಡೆದುಕೊಳ್ಳುತ್ತದೆ. ಆದರೆ, ಕತೆಯ ತುಣುಕೊಂದು ನಿಜ ಜೀವನದಲ್ಲಿ ನಡೆದಿರುವಂತೆ ಈ ವಿಡಿಯೊ ಸೆರೆಯಾಗಿದೆ.
ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೊ ಇಲ್ಲಿದೆ:
ಇದನ್ನೂ ಓದಿ:
ಎಮ್ಮೆಯ ಸಂದರ್ಶನ ಮಾಡಿದ ಪಾಕಿಸ್ತಾನದ ವರದಿಗಾರ! ಪ್ರಶ್ನೆಗೆ ಎಮ್ಮೆಯ ಉತ್ತರ ಏನಿತ್ತು? ವಿಡಿಯೋ ವೈರಲ್
(Horse ran with groom: the video goes viral)