ಚೀನಾದ ಹೆನನ್ ಪ್ರಾಂತ್ಯದಲ್ಲಿ ನಿಲ್ಲದ ಮಳೆ, ಡ್ರೋನ್ ಸೆರೆಹಿಡಿದ ದೃಶ್ಯಗಳು ದಿಗಿಲು ಹುಟ್ಟಿಸುತ್ತವೆ, ರಕ್ಷಣಾ ಕಾರ್ಯ ಜಾರಿ

ಕಾರುಗಳ ವಿಷಯ ಹಾಗಿರಲಿ, ಜೆಂಗ್​ಝಾ ನಗರದಲ್ಲಿ ಟ್ರಕ್​ಗಳು ಸಹ ನೀರಿನಲ್ಲಿ ಮುಳುಗಿರುವದನ್ನು ನೋಡಬಹುದು.ಈ ಪ್ರಾಂತ್ಯದ ಜನ ಹಿಂದೆ ಯಾವತ್ತೂ ಈ ಪ್ರಮಾಣದ ಮಳೆ ನೋಡಿರಲಿಲ್ಲ ಎಂದು ಹೇಳುತ್ತಿದ್ದಾರೆ.

ಚೀನಾದ ಹೆನನ್ ಪ್ರಾಂತ್ಯದಲ್ಲಿ ಒಂದು ವಾರಕ್ಕೂ ಹೆಚ್ಚು ಸಮಯದಿಂದ ಎಡೆಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಇಡೀ ಪ್ರದೇಶವನ್ನು ಜಲಾವೃತಗೊಳಿಸಿದೆ. ಸುಮಾರು ಒಂದು ಕೋಟಿಗಿಂತ ಹೆಚ್ಚು ಜನಸಂಖ್ಯೆಯುಳ್ಳ ಜೆಂಗ್​ಝಾ ನಗರ ಆಕ್ಷರಶಃ ಒಂದು ದ್ವೀಪದಂತೆ ಗೋಚರಿಸುತ್ತಿದೆ. ಸ್ಥಳೀಯ ಆಡಳಿತವು ಮಳೆಯಿಂದಾಗಿರುವ ಅನಾಹುತದ ಬಗ್ಗೆ ಒಂದು ಚಿತ್ರಣ ಪಡೆಯಲು ಡ್ರೋನ್ ನೆರವನಿಂದ ಜೆಂಗ್​ಝಾ ನಗರ ಮತ್ತು ಹೆನನ್ ಪ್ರಾಂತ್ಯದ ಇತರ ಸ್ಥಳಗಳನ್ನು ಸೆರೆಹಿಡಿದಿದೆ. ಈ ವಿಡಿಯೋ ನೋಡಿದರೆ ಅಲ್ಲಿನ ಪರಿಸ್ಥಿತಿ ಹೇಗಿದೆ ಅನ್ನೋದು ಅರಿವಿಗೆ ಬರುತ್ತದೆ.

ಕಾರುಗಳ ವಿಷಯ ಹಾಗಿರಲಿ, ಜೆಂಗ್​ಝಾ ನಗರದಲ್ಲಿ ಟ್ರಕ್​ಗಳು ಸಹ ನೀರಿನಲ್ಲಿ ಮುಳುಗಿರುವದನ್ನು ನೋಡಬಹುದು.ಈ ಪ್ರಾಂತ್ಯದ ಜನ ಹಿಂದೆ ಯಾವತ್ತೂ ಈ ಪ್ರಮಾಣದ ಮಳೆ ನೋಡಿರಲಿಲ್ಲ ಎಂದು ಹೇಳುತ್ತಿದ್ದಾರೆ. ಅನೇಕ ಭಾಗಗಳಲ್ಲಿ ಜನ ನೀರಿನಲ್ಲಿ ಸಿಕ್ಕಿಕೊಂಡಿದ್ದಾರೆ ಮತ್ತು ಅವರನ್ನು ಸುರಕ್ಷಿತ ಪ್ರದೇಶಕ್ಕೆ ಕರೆತರುವ ಕೆಲಸವನ್ನು ರಕ್ಷಣಾ ಪಡೆಗಳು ಮಾಡುತ್ತಿವೆ. ಮಳೆ ಮತ್ತು ಪ್ರವಾಹದಂಥ ಪರಿಸ್ಥಿತಿಯಿಂದಾಗಿ 25 ಜನ ಮೃತ ಪಟ್ಟಿದ್ದಾರೆಂದು ಅಲ್ಲಿನ ಅಧಿಕೃತ ಮೂಲಗಳು ತಿಳಿಸಿವೆ.

ಅಪಾಯದಲ್ಲಿ ಸಿಲುಕಿರುವ ಜನರ ಸಹಾಯಕ್ಕೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಸುಮಾರು 6,000 ಯೋಧರನ್ನು ರವಾನಿಸಿದೆ. ಮೂಲಗಳ ಪ್ರಕಾರ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಆದರೆ ಗಾಬರಿ ಹುಟ್ಟಿಸುವ ವಿಷಯವೆಂದರೆ ಇನ್ನೂ ಕೆಲ ದಿನಗಳ ಕಾಲ ಭಾರಿ ಮಳೆ ಸುರಿಯಲಿದೆಯೆಂದು ಜೆಂಗ್​ಝಾ ನಗರದ ಹವಾಮಾನ ಇಲಾಖೆಯ ಕಚೇರಿ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಇದನ್ನೂ ಓದಿ: ಚೀನಾದ ಹೆನನ್ ಪ್ರಾಂತ್ಯದಲ್ಲಿ ದಶಕಗಳಲ್ಲೇ ಕಂಡರಿಯದ ಮಳೆ, ಜೆಂಗ್​ಝಾ ನಗರ ಜಲಾವೃತ, ಕನಿಷ್ಟ16 ಸಾವು

Click on your DTH Provider to Add TV9 Kannada