ನೀವು ಚಿಕ್ಕವರಿದ್ದಾಗ ಈ ಪ್ರಶ್ನೆಯನ್ನು ಯಾರಾದರೊಬ್ಬರು ಕೇಳಿರುತ್ತಾರೆ ಅಥವಾ ನೀವು ಚಿಕ್ಕಮಕ್ಕಳಿಗೆ ಇದನ್ನು ಕೇಳಿರುತ್ತೀರಿ: ಕಾಡಿನ ರಾಜ ಯಾರು? Who is the king of forest? ಉತ್ತರ ಎಲ್ಲರಿಗೂ ಗೊತ್ತು, ಸಿಂಹ ಅಂತ. ಗಂಡು ಸಿಂಹವೊಂದು ಕಾಡಿನಲ್ಲಿ ನಡೆದು ಹೋಗುವ ದೃಶ ನಯನ ಮನೋಹರ ಮತ್ತು ಭವ್ಯ ಮಾರಾಯ್ರೇ. ಅದರ ಗಂಭೀರ ನಡಿಗೆ, ಕುತ್ತಿಗೆ ಸುತ್ತ ಪೊಗದಸ್ತಾದ ಕೂದಲು, ಕಣ್ಣುಗಳಲ್ಲಿ ಡೆವಿಲ್ ಮೇ ಕೇರ್ ಧೋರಣೆ, ನಿಜ ಅರ್ಥದಲ್ಲಿ ಅದು ಕಾಡಿನ ರಾಜ. ಆದರೆ ಈ ವಿಡಿಯೋನಲ್ಲಿ ಕಾಡಿನ ರಾಜನ ಸ್ಥಿತಿ ಏನಾಗಿದೆ ನೋಡಿ. ಕಾಡಿನ ರಾಜ ಕಾಡೆಮ್ಮೆಗಳ ಹಿಂಡಿನಿಂದ ತನ್ನ ಪ್ರಾಣವುಳಿಸಿಕೊಳ್ಳಲು ಮರ ಹತ್ತುತ್ತಿದ್ದಾನೆ!! ಮರದ ಹತ್ತಿರದಲ್ಲೇ ಕಾಡೆಮ್ಮೆಗಳು ಆಶ್ಚರ್ಯಚಕಿತವಾಗಿ ಸಿಂಹವನ್ನು ನೋಡುತ್ತಿವೆ. ಅಥವಾ ಅವನು ಕೆಳಗಿಳಿಯುವುದನ್ನೇ ಕಾಯುತ್ತಿವೆಯೇ?
ಚಿರತೆ ಮರ ಹತ್ತುವ ಇಲ್ಲವೇ ಹತ್ತಿ ಕುಳಿತಿರುವ ಹಲವಾರು ವಿಡಿಯೋಗಳು, ಫೋಟೊಗಳು ನಮಗೆ ಸಿಗುತ್ತದೆ. ಹುಲಿಗಳು ಸಹ ಆಗಾಗ ಮರ ಹತ್ತುತ್ತವೆ. ಆದರೆ ಸಿಂಹ ಮರ ಹತ್ತುವ ದೃಶ್ಯ ಬಹಳ ಅಪರೂಪ ಮಾರಾಯ್ರೇ. ಕಾಡಿನಲ್ಲಿ ಸಿಂಹವೊಂದು ನಡೆದು ಬರುತ್ತಿದ್ದರೆ ಜಿರಾಫೆ, ಕಾಡೆಮ್ಮೆ, ಆನೆ, ಮೊದಲಾದ ದೊಡ್ಡ ಗಾತ್ರದ ಪ್ರಾಣಿಗಳು ಮತ್ತು ಅದರದ್ದೇ ಜಾತಿಯ ಹುಲಿ, ಚಿರತೆಗಳು ಸಹ ಪಕ್ಕಕ್ಕೆ ಸರಿದು ದಾರಿ ಬಿಡುತ್ತವೆ. ಬೇರೆ ಹಿಂಸ್ರಪಶುಗಳು ಒಂದು ನಿರ್ದಿಷ್ಟ ಪ್ರದೇಶದಲ್ಲಿ ತಾವು ನಿರ್ಮಿಸಿಕೊಂಡಿರುವ ಒಂದು ಸೀಮಿತ ಸಾಮ್ರಾಜ್ಯಕ್ಕೆ ಮಾತ್ರ ಹೀರೋಗಳು. ಆದರೆ ಸಿಂಹ ಮಾತ್ರ ತಾನು ನಿರ್ಮಿಸಿಕೊಳ್ಳುವ ಪ್ರದೇಶವಲ್ಲದೆ ಪೂರ್ತಿ ಕಾಡಿಗೆ ರಾಜ.
ನಮ್ಮ ಕಾಡಿನ ರಾಜನಿಗೆ ಈ ಸ್ಥಿತಿ ಬರಬಾರದಿತ್ತು ಮಾರಾಯ್ರೇ. ಪೂರ್ತಿ ಮರ ಹತ್ತಲು ಸಹ ಅವನಿಗೆ ಸಾಧ್ಯವಾಗುತ್ತಿಲ್ಲ. ಕೆಳಗಿಳಿದರೆ ಅಪಾಯ. ಕಾಡೆಮ್ಮೆಗಳ ಗುಂಪು ತಿವಿದು, ಇರಿದು ಮತ್ತು ತುಳಿದು ಕೊಂದು ಬಿಡುತ್ತವೆ. ಭಾರಿ ದೇಹ ಹೊತ್ತು ಮೇಲೆ ಹತ್ತಲು ಸಹ ಅಗುತ್ತಿಲ್ಲ. ತ್ರಿಶಂಕು ಸ್ಥಿತಿ ಅಂದರೆ ಇದೇ ಇರಬೇಕು.
ಅಂದಹಾಗೆ ಈ ವಿಡಿಯೋ ವೈರಲ್ ಆಗಿದ್ದು ಜನ ಬಹಳ ಮೋಜುದಾಯಕ ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಹಾಯುದ್ಧಗಳು ಆರಂಭವಾದ ದಿನಾಂಕಗಳ ನಡುವಿನ ವಿಚಿತ್ರ ಹೋಲಿಕೆ: ವೈರಲ್ ಆಯ್ತು ಹೊಸ ಗಣಿತ ಸೂತ್ರ
Published On - 9:04 pm, Fri, 11 March 22