Viral Video : ಅಮ್ಮಂದಿರಿಗೆ ಹೆರಿಗೆ ರಜೆ ಸಿಗುತ್ತದೆ. ಈಗೀಗ ಅಪ್ಪಂದಿರಿಗೂ ಹೆರಿಗೆ ರಜೆ ಲಭ್ಯ. ಆದರೆ ಅಂಕಿತ್ ಜೋಶಿ ಎನ್ನುವವರು ತಮ್ಮ ಮಗಳು ಹುಟ್ಟುವ ಮೊದಲೇ ಹೆಚ್ಚು ಸಂಬಳದ ಕೆಲಸವನ್ನು ತೊರೆದರು. ಮಗಳೊಂದಿಗೆ ಪೂರ್ತಿ ಸಮಯ ಕಳೆಯಬೇಕು, ಬದುಕಿನಲ್ಲಿ ಇಂಥ ಘಳಿಗೆಗಳು ಒಮ್ಮೆ ಮಾತ್ರ ಬರುವುದು ಎಂಬ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರಕ್ಕೆ ಬಂದರು. ಈ ಕುರಿತು ಹ್ಯೂಮನ್ ಬಾಂಬೇ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಇವರ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಅಂಕಿತ್ ಖರಗ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಪದವೀಧರರು. ಹೆರಿಗೆ ಸಮಯದಲ್ಲಿ ಮಗುವಿನೊಂದಿಗೆ ಕಳೆಯಲು ಕಂಪೆನಿ ಇವರಿಗೆ ರಜೆ ಕೊಟ್ಟಿದ್ದರೂ ಇವರಿಗೆ ಸಮಾಧಾನವಿರಲಿಲ್ಲ. ಕಂಪೆನಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಕೆಲಸದ ವಿಷಯವಾಗಿ ಊರೂರುಗಳಿಗೆ ಓಡಾಡುವ ಅನಿವಾರ್ಯತೆ ಇತ್ತು. ಇದು ಹೀಗೇ ಮುಂದುವರಿದಲ್ಲಿ ಮಗಳೊಂದಿಗೆ ಕಳೆಯಬೇಕಾದ ಅಮೂಲ್ಯ ಸಮಯ ಕೈಜಾರಿಹೋವುದೆನ್ನಿಸಿ ಈ ನಿರ್ಧಾರ ಕೈಗೊಂಡರು.
‘ನನ್ನ ಮಗಳು ಹುಟ್ಟುವ ಮೊದಲೇ ನಾನು ಈ ನಿರ್ಧಾರಕ್ಕೆ ಬಂದಿದ್ದೆ. ಇದು ಕಷ್ಟವೆಂದು ಗೊತ್ತಿದ್ದೂ ಈ ನಿರ್ಧಾರ ತೆಗೆದುಕೊಂಡೆ. ಮಗಳು ಎದ್ಧಾಗಿನಿಂದ ಮಲಗುವವರೆಗೂ ನನ್ನ ತೋಳೊಳಗೇ ಇರಬೇಕು ಎಂದು ಬಯಸಿದೆ. ರಾತ್ರಿ ಅವಳಿಗಾಗಿ ಲಾಲಿ ಹಾಡುತ್ತೇನೆ. ನಾನು ಹಾಡುವಾಗ ಆಕೆ ನನ್ನನ್ನೇ ಚಿತ್ತೈಸಿ ನೋಡುವುದು ನನ್ನ ಹೃದಯವನ್ನು ಬೆಚ್ಚಗಾಗಿಸುತ್ತದೆ. ಈಗ ಒಂದು ತಿಂಗಳು ಅವಳಿಗೆ. ಹಾಗೆ ನೋಡಿದರೆ ನನಗೆ ನಿದ್ದೆ ಮಾಡಲಾಗುತ್ತಿಲ್ಲ, ಆಯಾಸವೂ ಇದೆ. ಆದರೆ ಮಗಳ ಮುಂದೆ ಇದೆಲ್ಲವೂ ಮರೆತುಹೋಗುತ್ತದೆ. ಸ್ವಲ್ಪ ದಿನ ಕಳೆದು ಹೊಸ ಕೆಲಸಕ್ಕೆ ಅರ್ಜಿ ಹಾಕುತ್ತೇನೆ ’ ಎಂದಿದ್ದಾರೆ.
ಬದುಕಿನಲ್ಲಿ ಎಲ್ಲವನ್ನೂ ಅನುಭವಿಸಬೇಕು. ಒಂದನ್ನು ಹಿಂದೆ ಸರಿಸಿ ಇನ್ನೊಂದನ್ನು ಅನುಭವಿಸುವ ಆದ್ಯತೆ ಬೆಳೆಸಿಕೊಳ್ಳಬೇಕು. ಎಲ್ಲವೂ ಏಕತ್ರ ಸಂಭವಿಸುವುದಿಲ್ಲವಲ್ಲ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ