Vikas Divyakirti: ನಾಯಿ ಮುಟ್ಟಿದ ಗಡಿಗೆಗೆ ಸೀತೆಯ ಹೋಲಿಕೆ; ಟ್ರೋಲ್ ಮಹಾಪೂರಕ್ಕೆ ವಿಕಾಸ್ ದಿವ್ಯಕೀರ್ತಿ ಕೊಟ್ಟ ಉತ್ತರ ಇದು
‘ಮಹಾಕಾವ್ಯದಲ್ಲಿರುವ ಮಾತನ್ನು ನಾನು ತರಗತಿಯಲ್ಲಿ ಪ್ರಸ್ತಾಪಿಸಿದ್ದೇನೆಯೇ ವಿನಃ, ಅದು ನನ್ನ ಮಾತು ಅಥವಾ ಅಭಿಪ್ರಾಯ ಎಂದು ಹೇಳಿಲ್ಲ’ ಎಂದು ಹೇಳಿದ್ದಾರೆ.
ಬೆಂಗಳೂರು: ‘ತರಗತಿಯಲ್ಲಿ ಮಕ್ಕಳಿಗೆ ಪಾಠ ಮಾಡುವುದನ್ನು ವಿಡಿಯೊ ಮಾಡಿಕೊಂಡು, ಅದನ್ನು ತಮಗೆ ಬೇಕಾದಂತೆ ತಿರುಚಿ ವೈರಲ್ ಮಾಡುವವರ ಎದುರು ನಾನೊಬ್ಬ ಹಿಂದೂ ಎಂದಾಗಲಿ, ನನಗೆ ದೈವಭಕ್ತಿಯಿದೆ ಎಂದಾಗಲಿ ಸಾಬೀತುಪಡಿಸಬೇಕಾದ ಯಾವುದೇ ತುರ್ತು ನನಗಿಲ್ಲ. ನಾನು ಆಡಿರುವ ಪ್ರತಿ ಪದಕ್ಕೂ ನನ್ನ ಬಳಿ ಪುರಾವೆಗಳಿವೆ. ರಾಮಾಯಣದ ವಿಸ್ತೃತ ಅಧ್ಯಯನದ ನಂತರವೇ ನಾನು ಸೀತಾ ಪರಿತ್ಯಾಗ ಮತ್ತು ಶಂಭೂಕ ವಧೆಯ ಬಗ್ಗೆ ತರಗತಿಯಲ್ಲಿ ಪಾಠ ಮಾಡಿದ್ದೆ. ಪರೀಕ್ಷೆಯಲ್ಲಿ ಪ್ರಶ್ನೆ ಕೊಡುವ ವಿಷಯದ ಬಗ್ಗೆ ಮೇಷ್ಟ್ರು ಮಾಡುವ ಪಾಠವನ್ನು ಅವರ ಸ್ವಂತ ಅಭಿಪ್ರಾಯ ಎಂದು ಬಿಂಬಿಸಿ ಟ್ರೋಲ್ ಮಾಡುವುದು ಎಷ್ಟರಮಟ್ಟಿಗೆ ಸರಿ’ ಎಂದು ದೃಷ್ಟಿ ಐಎಎಸ್ ಕೋಚಿಂಗ್ ಸೆಂಟರ್ನ ಮಾಲೀಕ ಮತ್ತು ನಿರ್ದೇಶಕ ಡಾ ವಿಕಾಸ್ ದಿವ್ಯಕೀರ್ತಿ ಖಾರವಾಗಿ ಪ್ರಶ್ನಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಟ್ರೋಲ್ ಕುರಿತು ಯುಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಸೀತಾ ಪರಿತ್ಯಾಗವನ್ನು ನಿರೂಪಿಸುವ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಸೀತೆ ಮತ್ತು ಶ್ರೀರಾಮದ ಸಂವಾದವನ್ನು ಪ್ರಸ್ತಾಪಿಸಿದ್ದಾರೆ. ಆ ಸಂದರ್ಭದಲ್ಲಿ ಸೀತೆಯನ್ನು ಉದ್ದೇಶಿಸಿ ಮಾತನಾಡುವ ಶ್ರೀರಾಮ, ‘ನಾನು ನಿನಗಾಗಿ ರಾವಣನೊಂದಿಗೆ ಹೋರಾಡಲಿಲ್ಲ. ನಾನು ಹೋರಾಡಿದ್ದು ನನ್ನ ಆತ್ಮಗೌರವಕ್ಕಾಗಿ. ನಾಯಿ ಮುಟ್ಟಿದ ತುಪ್ಪದ ಗಡಿಗೆ ಹೇಗೆ ಬಳಕೆಗೆ ಯೋಗ್ಯವಲ್ಲವೋ, ನನ್ನ ಪಾಲಿಗೆ ನೀನು ಹಾಗೆ’ ಎನ್ನುತ್ತಾನೆ. ಮಹಾಕಾವ್ಯದಲ್ಲಿರುವ ಮಾತನ್ನು ನಾನು ತರಗತಿಯಲ್ಲಿ ಪ್ರಸ್ತಾಪಿಸಿದ್ದೇನೆಯೇ ವಿನಃ, ಅದು ನನ್ನ ಮಾತು ಅಥವಾ ಅಭಿಪ್ರಾಯ ಎಂದು ಹೇಳಿಲ್ಲ’ ಎಂದು ಹೇಳಿದ್ದಾರೆ.
‘ನನ್ನ ಹೇಳಿಕೆ ತಪ್ಪು, ಮೂಲ ರಾಮಾಯಣದಲ್ಲಿ ಅಥವಾ ರಾಮಚರಿತ ಮಾನಸ, ಉತ್ತರ ರಾಮಚರಿತೆಯಲ್ಲಿ ನಾನು ಹೇಳುತ್ತಿರುವ ರೀತಿಯಲ್ಲಿ ಇಲ್ಲ ಎಂದು ವಾದಿಸುವವರು ತಮ್ಮ ಬಳಿ ಇರುವ ಪುರಾವೆಗಳನ್ನು ಮುಂದಿಡಲಿ. ಬನ್ನಿ ಚರ್ಚಿಸೋಣ, ನಾನು ಸಿದ್ಧನಿದ್ದೇನೆ’ ಎಂದು ಅವರು ಸವಾಲು ಹಾಕಿದ್ದಾರೆ.
ಶಂಭೂಕ ವಧೆ ಪ್ರಕರಣದ ಬಗ್ಗೆ ತಮ್ಮ ಪಾಠದ ಬಗ್ಗೆ ಎದ್ದಿರುವ ವಿವಾದ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಶೂದ್ರ ಶಂಭೂಕನು ತಪಸ್ಸು ಮಾಡುತ್ತಿದ್ದ. ಶೂದ್ರನೊಬ್ಬ ತಪಸ್ಸು ಮಾಡುವುದರಿಂದ ಧರ್ಮಕ್ಕೆ ಹಾನಿಯುಂಟಾಗುತ್ತದೆ ಎಂದು ರಾಮ ಅವನ್ನು ಕೊಂದ ಎಂಬುದು ಮೂಲ ರಾಮಾಯಣದ ಹಲವು ಆವೃತ್ತಿಗಳಲ್ಲಿ ಇದೆ. ಆದರೆ ತುಲಸಿದಾಸರು ಸೀತಾ ಪರಿತ್ಯಾಗ ಮತ್ತು ಶಂಭೂಕ ವಧೆಯನ್ನು ತಮ್ಮ ಕೃತಿಯಲ್ಲಿ ಪ್ರಸ್ತಾಪಿಸಲೇ ಇಲ್ಲ. ಭವಭೂತಿಯು ಉತ್ತರ ರಾಮಚರಿತೆಯಲ್ಲಿ ಶಂಭೂಕ ವಧೆಯನ್ನು ಬೇರೆಯದ್ದೇ ಆದ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾನೆ. ಕಾವ್ಯವನ್ನು ಕಾವ್ಯವಾಗಿ ನೋಡಬೇಕು. ನಾನು ಮಾಡಿರುವ ಪಾಠದಲ್ಲಿ ಈ ಎಲ್ಲ ಅಂಶಗಳೂ ಸಂಪೂರ್ಣವಾಗಿವೆ. ಆದರೆ ಒಟ್ಟು ಪಾಠದ ಕೆಲವೇ ತುಣುಕುಗಳನ್ನು ವೈರಲ್ ಮಾಡಿ ಅವಮಾನ ಮಾಡಲಾಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಭಾರತ ಒಂದು ಪ್ರಜಾಪ್ರಭುತ್ವದ ಆಡಳಿತ ಇರುವ ದೇಶ. ಎಲ್ಲರಿಗೂ ಅವರವರ ನಂಬಿಕೆಗಳನ್ನು ಇರಿಸಿಕೊಳ್ಳುವ ಹಕ್ಕು ಇದೆ. ನನ್ನ ಮಾತು ಅಥವಾ ಕೃತಿಯಿಂದ ಯಾರಿಗಾದರೂ ನೋವಾಗಿದ್ದರೆ ಅಂಥವರು ನನ್ನ ವಿರುದ್ಧ ಪೊಲೀಸರಿಗೆ ದೂರು ಕೊಡಬಹುದು. ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬಹುದು. ಈ ನೆಲದ ಕಾನೂನು ಗೌರವಿಸುವ ವ್ಯಕ್ತಿಯಾಗಿ ನಾನು ವಿಚಾರಣೆ ಎದುರಿಸುತ್ತಿದ್ದೆ’ ಎಂದು ಅವರು ತಿಳಿಸಿದ್ದಾರೆ.
ಏನಿದು ವಿವಾದ
ಐಎಎಸ್ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗಾಗಿ ನಡೆಸಿದ ತರಗತಿಯಲ್ಲಿ ರಾಮಾಯಣದ ಬಗ್ಗೆ ಪಾಠ ಮಾಡುವಾಗ ವಿಕಾಸ್ ದಿವ್ಯಕೀರ್ತಿ ಅವರು, ಸೀತಾ ಪರಿತ್ಯಾಗ ಹಾಗೂ ಶಂಭೂಕ ವಧೆ ಕುರಿತು ಪ್ರಸ್ತಾಪಿಸಿರುವ ಕೆಲ ಅಂಶಗಳನ್ನು ಆಧರಿಸಿದ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ‘ದೃಷ್ಟಿ ಐಎಎಸ್ ಕೋಚಿಂಗ್ ಕೇಂದ್ರವನ್ನು ನಿರ್ಬಂಧಿಸಬೇಕು, ವಿಕಾಸ್ ಕೀರ್ತಿ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಸಾಧ್ವಿ ಪ್ರಾಚಿ ದೇಸಾಯಿ ಸೇರಿದಂತೆ ಹಲವರು ಆಗ್ರಹಿಸಿದ್ದರು.
‘ಹಿಂದಿ ಫಿಲಂಗಳಲ್ಲಿ ಹೀರೋ ಮತ್ತು ಹೀರೋಯಿನ್ ಕೊನೆಯವರೆಗೂ ಕಷ್ಟನಷ್ಟಗಳನ್ನು ಅನುಭವಿಸಿ, ಇನ್ನೇನು ಒಂದಾಗಬೇಕು ಎನ್ನುವ ಸಂದರ್ಭ ಬಂದಾಗ ಉತ್ಸಾಹದಿಂದ ಓಡಿ ಬರುತ್ತಾರೆ. ರಾವಣನನ್ನು ರಾಮ ಸೋಲಿಸಿದ ವಿಷಯ ತಿಳಿದ ಸೀತಾ ಖುಷಿಯಾಗಿದ್ದಳು. ಹಲವು ದಿನಗಳ ನಂತರ ಮನೆಗೆ ಹೋಗಬಹುದು ಎಂದುಕೊಂಡು ರಾಮನ ಬಳಿಗ ಬರುತ್ತಿದ್ದಳು. ಆದರೆ ಅವಳನ್ನು ರಾಮ ತಡೆದು ನಿಲ್ಲಿಸಿದ. ಈ ಸಂದರ್ಭದಲ್ಲಿ ರಾಮ ಆಡಿದ ಮಾತನ್ನು ಹೇಳಲು ನನಗೆ ಬಾಯಿ ಬರುತ್ತಿಲ್ಲ. ಆದರೆ ನಾನು ಹೇಳಲೇಬೇಕಾಗಿದೆ. ಸೀತೆಯನ್ನು ರಾಮ ನಾಯಿ ಮುಟ್ಟಿದ ತುಪ್ಪದ ಗಡಿಗೆಗೆ ಹೋಲಿಸಿದ’ ಎಂದು ವಿಕಾಸ್ ದಿವ್ಯಕೀರ್ತಿ ಸೀತಾ ಪರಿತ್ಯಾಗದ ಸಂದರ್ಭ ವಿವರಿಸಿದ್ದರು.
ಈ ವಿಡಿಯೊ ತುಣುಕನ್ನು #BanDrishtiIAS ಹ್ಯಾಷ್ಟ್ಯಾಗ್ನೊಂದಿಗೆ ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಯಿತು. ವೆರಿಫೈಡ್ ಅಕೌಂಟ್ ಹೊಂದಿರುವ ಹಲವು ಪ್ರತಿಷ್ಠಿತರು ಈ ವಿಡಿಯೊ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ #ISupportDrishtiIAS ಎಂಬ ಮತ್ತೊಂದು ಹ್ಯಾಷ್ಟ್ಯಾಗ್ ಸಹ ವೈರಲ್ ಆಗುತ್ತಿದೆ. ‘ನಾನು ಟ್ವಿಟರ್ ಅಥವಾ ಬೇರೆ ಸಾಮಾಜಿಕ ಮಾಧ್ಯಮಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಗ್ರಂಥಗಳ ಅಧ್ಯಯನವೇ ನನ್ನ ಆಸಕ್ತಿ ಎನ್ನುವ ವಿಕಾಸ್ ದಿವ್ಯಕೀರ್ತಿಗೆ ಬೆಂಬಲವಾಗಿ ನಿಂತ ಹಲವರು ಮೂಲ ಸಂಸ್ಕೃತ ಶ್ಲೋಕಗಳನ್ನು ಟ್ವೀಟ್ ಮಾಡುವ ಮೂಲಕ ವಿಕಾಸ್ ಅವರ ಹೇಳಿಕೆಯನ್ನು ಸಮರ್ಥಿಸಿದ್ದರು. ನಂತರ ಇದು ದೊಡ್ಡ ವಿವಾದವಾಗಿ ಬೆಳೆಯಿತು.
Published On - 12:45 pm, Mon, 21 November 22