ಗಿನ್ನಿಸ್ ದಾಖಲೆ ಮಾಡಲು ಹಲವರು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಈ ಹಿಂದೆ ಪುಶ್ ಅಪ್ಸ್ಗಳನ್ನು ಮಾಡಿ ಇಬ್ಬರು ಯುವಕರು ಗಿನ್ನಿಸ್ ದಾಖಲೆ ನಿರ್ಮಿಸಿದ್ದರು. ಅಲ್ಲದೆ ವ್ಯಕ್ತಿಯೊಬ್ಬರು ಜಗತ್ತಿನ ಅತಿ ಎತ್ತರದ ಸೈಕಲ್ ನಿರ್ಮಿಸಿ ಗಿನ್ನಿಸ್ ಬುಕ್ನಲ್ಲಿ ಹೆಸರು ಪಡೆದಿದ್ದರು. ಇದೀಗ ವ್ಯಕ್ತಿಯೊಬ್ಬ ತನ್ನ ದೇಹದ ಮೇಲೆ 85 ಚಮಚಗಳನ್ನು ಅಂಟಿಸಿಕೊಳ್ಳುವುದರ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ಈ ಕುರಿತು ಗಿನ್ನಿಸ್ ವರ್ಲ್ಡ್ ಬುಕ್ ಅಧಿಕೃತ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಂಡಿದೆ. ಈ ವ್ಯಕ್ತಿಯನ್ನು ಇರಾನ್ (Iran) ದೇಶದವರು ಎಂದು ಗುರುತಿಸಲಾಗಿದೆ. ಇವರ ಹೆಸರು ಅಬೋಲ್ಫಜಲ್ ಸಾಬರ್ ಮೊಖ್ತಾರಿ (Abolfazl Saber Mokhtari) ಎಂದಾಗಿದೆ. 50 ವರ್ಷದ ಇವರು ದೇಹದ ಮೇಲೆ 85 ಚಮಚಗಳನ್ನು ಇರಿಸಿಕೊಂಡು ಗಿನ್ನಿಸ್ ವಿಶ್ವ ದಾಖಲೆ (Guinnies World Record) ಮಾಡಿದ್ದಾರೆ.
ಸದ್ಯ ಇದರ ವಿಡಿಯೋವನ್ನು ಗಿನ್ನಿಸ್ ವರ್ಲ್ಡ್ ಬುಕ್ ಇನ್ಸ್ಟಾಗ್ರಾಮ್ ಖಾತೆ ಹಂಚಿಕೊಂಡಾಗಿನಿಂದ ಸಖತ್ ವೈರಲ್ ಆಗಿದೆ. ವರದಿಯ ಪ್ರಕಾರ ಮೊಖ್ತಾರಿ ಚಿಕ್ಕಂದಿನಿಂದಲೂ ಈ ಅಭ್ಯಾಸವನ್ನು ರೂಢಿಸಿಕೊಂಡಿದ್ದು ಇದೀಗ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಈ ಕುರಿತು ಸ್ವತಃ ಅಬೋಲ್ಫಜಲ್ ಸಾಬರ್ ಮೊಖ್ತಾರಿ ಮಾತನಾಡಿ ನನಗೂ ನನ್ನ ದೇಹಕ್ಕೆ ಇರುವ ಶಕ್ತಿಯನ್ನು ಕಂಡು ಅಚ್ಚರಿಯಾಯಿತು. ಕೇವಲ ಸ್ಟೀಲ್ ವಸ್ತುಗಳನ್ನು ಮಾತ್ರವಲ್ಲ. ನನ್ನ ದೇಹದ ಮೇಲೆ ಪ್ಲಾಸ್ಟಿಕ್, ಕಲ್ಲು, ಮರದ ಮಸ್ತುಗಳು ಅಷ್ಟೇ ಅಲ್ಲದೆ ಹಣ್ನುಗಳನ್ನೂ ಕೂಡ ಅಂಟಿಸಿಕೊಳ್ಳಬಲ್ಲೆ. ನನ್ನ ದೇಹದ ಮೇಲೆ ಅಂಟಿಸಿಕೊಂಡ ವಸ್ತುಗಳ ಮೇಲೆ ಸಂಪೂರ್ಣ ನಿಗಾ ಇಡುತ್ತೇನೆ ಇದರಿಂದ ವಸ್ತುಗಳನ್ನು ಅಂಟಿಸಿಕೊಳ್ಳಲು ಸಾಧ್ಯ ಎಂದಿದ್ದಾರೆ.
ಗಿನ್ನಿಸ್ ದಾಖಲೆಯ ವರದಿಯ ಪ್ರಕಾರ ಈ ಹಿಂದೆ ಸ್ಪೇನ್ನ ವ್ಯಕ್ತಿಯೊಬ್ಬರು ಇದೇ ರೀತಿ ಚಮಚಗಳನ್ನು ಅಂಟಿಸಿಕೊಂಡ ಗಿನ್ನಿಸ್ ದಾಖಲೆ ನಿರ್ಮಿಸಿದ್ದರು. ಆತ 64 ಚಮಚಗಳನ್ನು ದೇಹದ ಮೇಲೆ ಅಂಟಿಸಿಕೊಂಡಿದ್ದ. ಇದೀಗ ಅಬೋಲ್ಫಜಲ್ ಸಾಬರ್ ಮೊಖ್ತಾರಿ 85 ಚಮಚಗಳನ್ನು ಅಂಟಿಸಿಕೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 45 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
ಇದನ್ನೂ ಓದಿ:
ರೈಲು ಸಂಚಾರಕ್ಕೆಂದು ಚಿಕಾಗೋದಲ್ಲಿ ಹಳಿಗೆ ಬೆಂಕಿ ಹಚ್ಚಿದ್ದೇಕೆ? ಇಲ್ಲಿದೆ ಅಸಲಿ ಸ್ಟೋರಿ