ಈ ಪುಟ್ಟ ಹಕ್ಕಿ ದೈತ್ಯ ಪಕ್ಷಿಗಳಿಗೂ ಸಾಧ್ಯವಾಗದ ದಾಖಲೆಯೊಂದನ್ನು ನಿರ್ಮಿಸಿದೆ. ಸದರಿ ಹಕ್ಕಿಯನ್ನು ಇಂಗ್ಲಿಷ್ ನಲ್ಲಿ ಬಾರ್-ಟೇಲ್ಡ್ ಗಾಡ್ವಿಟ್ ಅನ್ನುತ್ತಾರೆ ಮತ್ತು ಕನ್ನಡದಲ್ಲಿ ಕೊಂಚಹಕ್ಕಿ. ಹಿನ್ನೀರಗೊರವ ಅಂತಲೂ ಹೇಳೋದುಂಟು ಅಥವಾ ಆ ಪ್ರಜಾತಿಗೆ ಸೇರಿದ ಹಕ್ಕಿ ಅಂತ ಹೇಳಬಹುದು. ಆದರೆ ಇದು ವಿಶ್ವದಾದ್ಯಂತ ಗುರುತಿಸಿಕೊಳ್ಳುತ್ತಿರೋದು 234684 ಸ್ಯಾಟೆಲೈಟ್ ಟ್ಯಾಗಿಂಗ್ ನಂಬರ್ ನಿಂದ. ಓಕೆ ಇದು ನಿರ್ಮಿಸಿರುವ ವಿಶ್ವದಾಖಲೆ ಏನು ಗೊತ್ತಾ? ಉತ್ತರ ಅಮೆರಿಕಾದಲ್ಲಿರುವ ಅಲಾಸ್ಕಾದಿಂದ ಅಸ್ಟ್ರೇಲಿಯಾದ ಟಾಸ್ಮೇನಿಯ ವರೆಗೆ ಎಲ್ಲೂ ನಿಲ್ಲದೆ, ದಣಿವಾರಿಸಿಕೊಳ್ಳದೆ, ನೀರಾಹಾರ ಸೇವಿಸದೆ ಅಂದರೆ ತಡೆರಹಿತವಾಗಿ ಹಾರಿದೆ!
ಅಂದಹಾಗೆ ತನ್ನ ವಿಶ್ವವಿಕ್ರಮ ಫ್ಲೈಟ್ ನಲ್ಲಿ ಪುಟಾಣಿ ಗಾಡ್ವಿಟ್ ಕ್ರಮಿಸಿದ್ದು 13,560 ಕಿಮೀ! ಹೌದು, ನೀವು ಓದಿದ್ದು ಅಕ್ಷರಶಃ ಸತ್ಯ-13,560 ಕಿಮೀ!! ಮತ್ತೂ ವಿಸ್ಮಯಕಾರಿ ಸಂಗತಿಯೆಂದರೆ ಅಷ್ಟು ದೂರವನ್ನು ಕ್ರಮಿಸಲು ಅದು ತೆಗೆದುಕೊಂಡ ಸಮಯ ಕೇವಲ 11 ದಿನಗಳು ಮಾತ್ರ!!!
ಇದು ಕೇವಲ 5-ತಿಂಗಳು ಪ್ರಾಯದ ಮರಿಹಕ್ಕಿ ಮಾರಾಯ್ರೇ! 5ಜಿ ಸ್ಯಾಟೆಲೈಟ್ ಟ್ಯಾಗ್ ನಿಂದಾಗಿ ವಿಜ್ಞಾನಿಗಳು ಗಾಡ್ವಿಟ್ ಹಾರಾಟದ ಪ್ರತಿ ನಿಮಿಷವನನ್ನು ಮಾನಿಟರ್ ಮಾಡಿದ್ದಾರೆ. ಲಿಮೊಸ ಲಪ್ಪೊನಿಕ ಅಂತ ಅದಕ್ಕೆ ಹಕ್ಕಿಗೆ ಹೆಸರಿಟ್ಟಿರುವ ವಿಜ್ಞಾನಿಗಳು ಅಲಾಸ್ಕಾದಲ್ಲಿ ಅದಕ್ಕೆ ಟ್ಯಾಗ್ ಮಾಡಿದ್ದಾರೆ. ಅಲಾಸ್ಕಾದಿಂದ ಹಾರಲಾರಂಭಿಸಿದ ಪುಟಾಣಿ ಜೀವಿ ಲ್ಯಾಂಡ್ ಆಗಿದ್ದು ಅನ್ಸಾನ್ಸ್ ಕೊಲ್ಲಿಯ ಈಶಾನ್ಯ ಭಾಗಕ್ಕಿರುವ ಟಾಸ್ಮೇನಿಯದಲ್ಲಿ.
ಹಿಂದಿನ ವಿಶ್ವದಾಖಲೆ ಇದೇ ಪ್ರಜಾತಿಯ 4ಬಿ ಬಿ ಆರ್ ಡಬ್ಲ್ಯೂ ಗಂಡುಹಕ್ಕಿಯ ಹೆಸರಲ್ಲಿತ್ತು. ಅದು ತಡೆರಹಿತವಾಗಿ 13,000 ಕಿಮೀ ದೂರ ಕ್ರಮಿಸಿತ್ತು. ಅದಕ್ಕೂ ಮೊದಲಿನ ವಿಕ್ರಮ 12,000 ಕಿಮೀ ದೂರ ಕ್ರಮಿಸಿದ್ದಾಗಿತ್ತು.
ನ್ಯೂಜಿಲೆಂಡ್ ನಲ್ಲಿರುವ ಪುಕುರೊಕೊರೊ ಮಿರಾಂಡ ಶೋ ಬರ್ಡ್ ಕೇಂದ್ರ ಫೇಸ್ ಬುಕ್ ಪೇಜ್ ನಲ್ಲಿ ಉಲ್ಲೇಖಿಸಿರುವ ಹಾಗೆ ‘4ಬಿ ಬಿ ಆರ್ ಡಬ್ಲ್ಯೂ ಗಂಡು ಹಕ್ಕಿಯ ದಾಖಲೆಯನ್ನು ಲಿಮೊಸ ಲಪ್ಪೊನಿಕ ಧೂಳೀಪಟ ಮಾಡಿದೆ.’
Wonderful news on ultramarathon flying Bar-tailed Godwits. Satellite tracked bird has flown NONSTOP from Alaska to Tasmania for the first time! What a trip! Thanks @miranda_trust, Max Planck Institute and others for this work drawing our world together. Nature is wild! 1/2 pic.twitter.com/NnT0QtLCUx
— Andrew Darby (@looksouth) October 24, 2022
ಮ್ಯಾಕ್ಸ್ ಪ್ಲ್ಯಾಂಕ್ ಇನ್ ಸ್ಟಿಟ್ಯೂಟ್ ಫಾರ್ ಒರಿಂಥಾಜಿಯ ಹಕ್ಕಿ ಹಾರಾಟ ಪ್ರಾಜೆಕ್ಟ್ ಪ್ರಕಾರ ಗಾಡ್ವಿಟ್ ವಲಸೆ ಹಕ್ಕಿಯು ಹವಾಯಿಯ ಪಶ್ಚಿಮ ಭಾಗದಿಂದ ಹಾರುತ್ತಾ ಸಾಗಿ ಸಾಗರಗಳ ಮೇಲಿಂದ ಪಯಣವನ್ನು ಮುಂದುವರೆಸಿ ಅಕ್ಟೋಬರ್ 19 ರಂದು ಪೆಸಿಫಿಕ್ ಸಾಗರ ನಡುಗಡ್ಡೆಯಾಗಿರುವ ಕೈರಾಬಟಿ ಮೇಲಿಂದ ಹಾರಿದೆ.
ಎರಡು ದಿನಗಳ ನಂತರ ಲಿಮೊಸ ಲಪ್ಪೊನಿಕ ಭೂಪ್ರದೇಶವನ್ನು ಕಂಡಿರುವ ಸಾಧ್ಯತೆಯಿದೆ, ವನೌಟು ಮೇಲಿಂದ ಹಾರಿರುವ ಅದು ದಕ್ಷಿಣ ಕಡೆ ಹಾರಾಟ ಮುಂದುವರೆಸಿ ಅಲ್ಲಿಂದ ಸುಮಾರು 620 ಕಿಮೀ ದೂರವಿರುವ ಸಿಡ್ನಿ ನಗರದ ಪೂರ್ವ ಭಾಗದ ಕಡೆ ಮುಂದುವರೆದು ಆಸ್ಟ್ರೇಲಿಯದ ಪೂರ್ವ ಕರಾವಳಿ ಮತ್ತ ನ್ಯೂಜಿಲೆಂಡ್ ಮಧ್ಯಭಾಗದಿಂದ ಹಾದು ಹೋಗಿದೆ.
ಅಕ್ಟೋಬರ್ 23 ರಂದು, ಗಾಡ್ವಿಟ್ ಮತ್ತು ಅದರೊಂದಿಗೆ ಹಾರಿರಬಹುದಾದ ಯಾವುದೇ ಪಕ್ಷಿ ಶಾರ್ಪ್ ಬಲ ತಿರುವನ್ನು ತೆಗೆದುಕೊಂಡು ಪಶ್ಚಿಮಕ್ಕೆ ಸಾಗಿ ಅಕ್ಟೋಬರ್ 25 ರಂದು ಟ್ಯಾಸ್ಮೆನಿಯಾವನ್ನು ತಲುಪಿವೆ.
ಬರ್ಡ್‌ಲೈಫ್ ಆಸ್ಟ್ರೇಲಿಯಾದ ಸೀನ್ ಡೂಲಿ, ‘ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಕಿರಿ ವಯಸ್ಸಿನ ಹಕ್ಕಿಗಳು ವಯಸ್ಕ ಹಕ್ಕಿಗಳಿಂದ ಬೇರ್ಪಟ್ಟು ಪ್ರತ್ಯೇಕವಾಗಿ ವಲಸೆ ಹೋಗುತ್ತವೆ. ವಯಸ್ಕ ಹಕ್ಕಿಗಳು ಆರ್ಕ್ಟಿಕ್ನಿಂದ ಕೆಲವು ಸಲ ಆರು ವಾರಗಳಷ್ಟು ಮುಂಚೆಯೇ ಹೊರಡುತ್ತವೆ,’ ಎಂದು ಹೇಳಿದ್ದಾರೆ.
ಚಿಕ್ಕ ವಯಸ್ಸಿನ ಹಕ್ಕಿಗಳು ದಕ್ಷಿಣದ ದೀರ್ಘ ವಲಸೆಗೆ ಹೊರಡುವ ಮೊದಲು ಕೊಬ್ಬು ಕರಗಿಸುವುದರಲ್ಲಿ ಕಳೆಯುತ್ತವೆ, ‘ಈ ಹಕ್ಕಿ ಹಿಂಡಿನಲ್ಲಿ ಇದ್ದಿರಬಹುದು. ಎಲ್ಲೇ ಇರಲಿ ಅದು ನಡೆಸಿದ ದಾಖಲೆಯ ತಡೆರಹಿತ ಹಾರಾಟ ಮಾತ್ರ ನಂಬಲಸದಳವಾಗಿದೆ,’ ಎಂದು ಡೂಲಿ ಹೇಳಿದ್ದಾರೆ.
ಕೊಬ್ಬಿನ ಶೇಖರಣೆಗಾಗಿ ದೇಹದಲ್ಲಿ ಹೆಚ್ಚಿನ ಸ್ಥಳ ಸೃಷ್ಟಿಸಿಕೊಳ್ಳಲು ಪಕ್ಷಿಗಳು ತಮ್ಮ ಒಳಾಂಗಳನ್ನು ಕುಗ್ಗಿಸಿಕೊಳ್ಳಲು ಸಮರ್ಥವಾಗಿವೆ ಎಂದು ಡೂಲಿ ಹೇಳಿದ್ದಾರೆ.
ಪುಕುರೊಕೊರೊ ಮಿರಾಂಡ ಶೋ ಬರ್ಡ್ ಕೇಂದ್ರ ಹಿಂದೆ 4ಬಿ ಬಿ ಆರ್ ಡಬ್ಲ್ಯೂ ಗಂಡು ಹಕ್ಕಿ ದಾಖಲೆ ನಿರ್ಮಿಸಿದಾಗ ಅದರ ಸ್ಮರಣಾರ್ಥವಾಗಿ ಟೀ ಟವೆಲ್ ಗಳನ್ನು ಉತ್ಪಾದಿಸಿತ್ತಂತೆ. ಈಗ ಗಾಡ್ವಿಟ್ ಹೊಸ ವಿಕ್ರಮ ಸ್ಥಾಪಿಸಿರುವುದರಿಂದ ಟವೆಲ್ ಗಳ ಹೊಸ ಸೆಟ್ ತಯಾರಿಸಬೇಕಿದೆ ಎಂದು ಹೇಳಿದೆ.
Published On - 8:04 pm, Thu, 3 November 22