ರಾಜ್ಯದಲ್ಲಿ ನಾಮ ಫಲಕಗಳನ್ನು ಹಾಕುವಾಗ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು, ನಾಮಫಕಲಗಳಲ್ಲಿ ಕನ್ನಡ ಕಡ್ಡಾಯ ಬಳಕೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಬಹುದೊಡ್ಡ ಆಂದೋಲನ ಕಾರ್ಯಕ್ರಮ ನಡೆಯುತ್ತಿದೆ. ಈ ಒಂದು ಆಂದೋಲನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲವೂ ದೊರಕಿದ್ದೂ, ಮಾಲ್ ಆಫ್ ಏಷ್ಯಾ ಸೇರಿದಂತೆ ಬಹುತೇಕ ಬೆಂಗಳೂರಿನಲ್ಲಿರುವ ವಾಣಿಜ್ಯ ಮಳಿಗೆಗಳ ನಾಮ ಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆಧ್ಯತೆಯನ್ನು ನೀಡಲಾಗಿದೆ. ಇದೀಗ ಬಹುದೊಡ್ಡ ಮಟ್ಟದಲ್ಲಿ ಈ ಆಂದೋಲನವು ನಡೆಯುತ್ತಿದೆ. ಈ ನಡುವೆ ಮಹಿಳೆಯೊಬ್ಬರು ಈ ಆಂದೋಲನದ ವಿರುದ್ಧ ಅಪಸ್ವರವನ್ನು ಎತ್ತಿದ್ದು, ಹೀಗೆ ಒತ್ತಾಯ ಪೂರ್ವಕವಾಗಿ ನಾಮಫಕಲಗಳನ್ನೆಲ್ಲಾ ಹಾಕಿಸುವುದು ಸರಿಯಲ್ಲ, ಬೇರೆ ರಾಜ್ಯ ಮತ್ತು ದೇಶಗಳಿಂದ ಪ್ರವಾಸಿಗರು ಕರ್ನಾಟಕಕ್ಕೆ ಬರುತ್ತಾರೆ. ನಿಮ್ಮ ರಾಜ್ಯದ ಆರ್ಥಿಕತೆಯು ನಮ್ಮಂತ ಹೊರಗಿನ ಪ್ರವಾಸಿಗ ಮೇಲೆ ಅವಲಂಬಿತವಾಗಿದೆ ಎಂಬ ಸ್ಟೇಟ್ಮೆಂಟ್ ನೀಡಿದ್ದಾರೆ. ಈ ವಿಡಿಯೋವನ್ನು ಕನ್ನಡಿಗರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಮ್ಮ ಆರ್ಥಿಕತೆಯು ಇವರ ಮೇಲೆ ಅವಲಂಬಿತವಾಗಿದೆ ಎಂಬ ಉದ್ಧಟತನದ ಮಾತುಗಳನ್ನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಈ ವಿಡಿಯೋವನ್ನು ಅಭಿಷೇಕ್ (@gundigre) ಎಂಬವರು ತಮ್ಮ ಖಾತೆಯಲ್ಲಿ X ಹಂಚಿಕೊಂಡಿದ್ದು, “ಈ ಮಹಿಳೆ ಹೇಳುತ್ತಾಳೆ, ನೀವು ನಮ್ಮ ಕಾರಣದಿಂದ ಊಟ ಮಾಡುತ್ತಿದ್ದೀರಿ ಹಾಗೂ ನಿಮ್ಮ ಆರ್ಥಿಕತೆಯು ನಮ್ಮಂತಹ ಕನ್ನಡ ಗೊತ್ತಿಲ್ಲದ ಪ್ರವಾಸಿಗರ ಮೇಲೆ ಅವಲಂಬಿತವಾಗಿದೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಆ ಮಹಿಳೆ ರಿಪೋರ್ಟರ್ ಬಳಿ, ನಿಮ್ಮ ರಾಜ್ಯಕ್ಕೆ ಬಹು ಸಂಖ್ಯೆಯಲ್ಲಿ ಹೊರ ರಾಜ್ಯ, ಹೊರ ದೇಶಗಳಿಂದ ಪ್ರವಾಸಿಗರು ಬರುತ್ತಾರೆ. ನಿಮ್ಮ ಆರ್ಥಿಕತೆಯು ಕನ್ನಡ ಗೊತ್ತಿಲ್ಲದ ನಮ್ಮಂತವರ ಮೇಲೆ ಅವಲಂಬಿತವಾಗಿದೆ ಎಂದು ನಮ್ಮ ರಾಜ್ಯದ ಬಗ್ಗೆ ಕೇವಲವಾಗಿ ಮಾತನಾಡಿರುವುದನ್ನು ಕಾಣಬಹುದು.
ಇದನ್ನೂ ಓದಿ: ಚಿಂತೆಗಳನ್ನೆಲ್ಲಾ ಬದಿಗಿಟ್ಟು ಟ್ರಾಫಿಕ್ ಮಧ್ಯೆ ಹಾಡು ಕೇಳುತ್ತಾ ಎಂಜಾಯ್ ಮಾಡಿದ ಆಟೋ ಚಾಲಕ
ಡಿಸೆಂಬರ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 30 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಮಹಿಳೆಯ ಮಾತಿನ ವಿರುದ್ಧ ಕನ್ನಡಿಗರು ಫುಲ್ ಗರಂ ಆಗಿದ್ದಾರೆ. ಒಬ್ಬ ಬಳಕೆದಾರರು ʼಕನ್ನಡದಲ್ಲಿ ನಾಮ ಫಲಕ ಹಾಕಿದರೆ ಏನು ತೊಂದ್ರೆ? ವಿಡಿಯೋದಲ್ಲಿರುವಂತಹ ಆ ಪುಣ್ಯಾತಗಿತ್ತಿ ಮಹಿಳೆ ನಮ್ಮ ಬೆಂಗಳೂರಿನಲ್ಲಿಯೇ ಇದ್ದು ಜೀವನ ನಡೆಸುತ್ತಿರುವುದೆಂದು ಆಕೆಗೆ ನೆನಪಿರಲಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಉತ್ತರ ಭಾರತದವನು. ಆದ್ರೆ ಆ ಮಹಿಳೆ ಈ ರೀತಿ ಮಾತನಾಡಿದ್ದು ಯಾವುದೇ ಕಾರಣಕ್ಕೂ ಸರಿಯಲ್ಲ. ಅಲ್ಲಿದ್ದ ಮೇಲೆ ಅಲ್ಲಿನ ಪ್ರಾದೇಶಿಕ ಭಾಷೆಯನ್ನು ಸಹ ಕಲಿಯಬೇಕುʼ ಎಂದು ಕನ್ನಡಿಗರ ಪರವಾಗಿ ಮಾತನಾಡಿದ್ದಾರೆ. ಇನ್ನೂ ಅನೇಕರು ಈ ಮಹಿಳೆಯ ಉದ್ದಟತನದ ಮಾತಿಗೆ ಫುಲ್ ಗರಂ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: