Kerala Rain: ಕೇರಳ ಪ್ರವಾಹದ ಎಫೆಕ್ಟ್; ಅಡುಗೆ ಪಾತ್ರೆಯಲ್ಲಿ ಕುಳಿತು ಮಂಟಪ ತಲುಪಿದ ವಧು-ವರರು

| Updated By: ಸುಷ್ಮಾ ಚಕ್ರೆ

Updated on: Oct 18, 2021 | 2:36 PM

Viral Video: ಆರೋಗ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ವಧು-ವರರು ಮದುವೆ ಮಂಟಪಕ್ಕೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದರು. ಕೊನೆಗೆ ದೊಡ್ಡ ಗಾತ್ರದ ಅಲ್ಯುಮಿನಿಯಂ ಅಡುಗೆ ಪಾತ್ರೆಯಲ್ಲಿ ಅವರಿಬ್ಬರನ್ನು ಕೂರಿಸಿಕೊಂಡು ನೀರಿನಲ್ಲಿ ತಳ್ಳಿಕೊಂಡು ಮದುವೆ ಮಂಟಪಕ್ಕೆ ಕರೆದೊಯ್ಯಲಾಯಿತು.

Kerala Rain: ಕೇರಳ ಪ್ರವಾಹದ ಎಫೆಕ್ಟ್; ಅಡುಗೆ ಪಾತ್ರೆಯಲ್ಲಿ ಕುಳಿತು ಮಂಟಪ ತಲುಪಿದ ವಧು-ವರರು
ಮಳೆಯಿಂದ ಅಡುಗೆ ಪಾತ್ರೆಯಲ್ಲಿ ಮದುವೆ ಮಂಟಪಕ್ಕೆ ಬಂದ ವಧು- ವರರು
Follow us on

ಅಲಪ್ಪುಳ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕೇರಳದಲ್ಲಿ ಭೂಕುಸಿತ ಉಂಟಾಗಿದೆ. ಕೇರಳದ ಪ್ರವಾಹದ ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ ಸುರಿಯುತ್ತಿರುವ (Kerala Rain) ಮಳೆಯಿಂದ ಮನೆಗಳೇ ನೀರಿನಲ್ಲಿ ಕೊಚ್ಚಿ ಹೋಗಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿವೆ. ಇದರ ನಡುವೆ ಎಲ್ಲೆಡೆ ನಿಂತಿರುವ ಪ್ರವಾಹದ ನೀರಿನಿಂದ ಆರೋಗ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ವಧು-ವರರು ಮದುವೆ ಮಂಟಪಕ್ಕೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದರು. ಕೊನೆಗೆ ದೊಡ್ಡ ಗಾತ್ರದ ಅಲ್ಯುಮಿನಿಯಂ ಅಡುಗೆ ಪಾತ್ರೆಯಲ್ಲಿ ಅವರಿಬ್ಬರನ್ನು ಕೂರಿಸಿಕೊಂಡು ನೀರಿನಲ್ಲಿ ತಳ್ಳಿಕೊಂಡು ಮದುವೆ ಮಂಟಪಕ್ಕೆ ಕರೆದೊಯ್ಯಲಾಯಿತು.

ಈ ವಿಡಿಯೋ ಭಾರೀ ವೈರಲ್ ಆಗಿದೆ. ಹತ್ತಿರದ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಕೇರಳದ ತಲವಾಡಿಯಲ್ಲಿರುವ ಸಭಾಂಗಣವೊಂದರಲ್ಲಿ ಅವರಿಬ್ಬರ ಮದುವೆ ನಡೆಯಬೇಕಿತ್ತು. ಆದರೆ, 3 ದಿನಗಳ ಮಳೆಯಿಂದ ಪ್ರವಾಹ ಉಂಟಾಗಿ ಅಚಾನಕ್ಕಾಗಿ ತೊಂದರೆ ಎದುರಾಗಿತ್ತು. ಮದುವೆ ಮಂಟಪಕ್ಕೆ ನೀರಿನಲ್ಲಿ ನಡೆದುಕೊಂಡು ಹೋಗುವುದು ಅಸಾಧ್ಯವಾದ ಕಾರಣ ಮದುಮಕ್ಕಳಾಗಿ ತಯಾರಾಗಿದ್ದ ವಧು-ವರರನ್ನು ಅಡುಗೆ ಮಾಡಲು ದೊಡ್ಡ ತಪ್ಪಲೆಯಲ್ಲಿ ಕೂರಿಸಿಕೊಂಡು ಅವರ ಸಂಬಂಧಿಕರು ಪ್ರವಾಹದ ನೀರಿನಲ್ಲಿ ಅವರನ್ನು ಕರೆದೊಯ್ದಿದ್ದಾರೆ.

ಆಕಾಶ್ ಮತ್ತು ಐಶ್ವರ್ಯ ದಂಪತಿಗಳು ಆರೋಗ್ಯ ಕಾರ್ಯಕರ್ತರಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಅದಕ್ಕೂ ಮಳೆರಾಯ ಅಡ್ಡಿ ಮಾಡಿದ್ದ. ವಧುವರರು ಚೆಂಗನ್ನೂರಿನ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ.

ಕೇರಳದಲ್ಲಿ ಮಳೆಯಾಗುತ್ತಿರುವುದರಿಂದ 35 ಜನರು ಸಾವನ್ನಪ್ಪಿದ್ದಾರೆ. ಕೊಟ್ಟಾಯಂ ಮತ್ತು ಇಡುಕ್ಕಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸುರಿದ ಅಕಾಲಿಕ ಮಳೆಗೆ ಮೇಘ ಸ್ಫೋಟವೂ ಕಾರಣ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಪಥನಾಂತಿಟ್ಟ, ಅಲಪ್ಪುಳ, ಎರ್ನಾಕುಲಂ, ಇಡುಕ್ಕಿ‌, ಮಲಪ್ಪುರಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ತಂಡಗಳನ್ನು ನಿಯೋಜಿಸಲಾಗಿದೆ. ಇಡುಕ್ಕಿ, ಕೊಲ್ಲಂ, ಕೊಟಯಂ, ಕಣ್ಣೂರ್‌ ಮತ್ತು ಪಾಲಕ್ಕಾಡ್ ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ಐದು ತಂಡಗಳನ್ನು ನಿಯೋಜಿಸುವಂತೆ ಸೂಚಿಸಲಾಗಿದೆ.

ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ ಕೇರಳದ ಕೊಟ್ಟಾಯಂ ಜಿಲ್ಲೆಯ ಮುಂಡಕಾಯಂನಲ್ಲಿರುವ ಮನೆಯೊಂದು ಕೊಚ್ಚಿ ಹೋಗಿದೆ. ನೋಡ ನೋಡುತ್ತಿದ್ದಂತೆಯೇ ಕುಸಿದುಬಿದ್ದಿರುವ ಮನೆಯ ವಿಡಿಯೋ ಭಾರೀ ವೈರಲ್ ಆಗಿದೆ. 14 ಸೆಕೆಂಡುಗಳ ಕ್ಲಿಪ್‌ನಲ್ಲಿ 2 ಅಂತಸ್ತಿನ ಮನೆ ನಿಧಾನವಾಗಿ ಕುಸಿದುಬಿದ್ದಿರುವುದನ್ನು ನೋಡಬಹುದು. ಕುಸಿದು ಬಿದ್ದ ಮನೆ ಇದ್ದಕ್ಕಿದ್ದಂತೆಯೇ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದೆ.

ಇದನ್ನೂ ಓದಿ: Kerala floods ಕೇರಳದಲ್ಲಿ ಪ್ರವಾಹ ಸಂಕಷ್ಟದಲ್ಲಿರುವ ಜನರಿಗೆ ಎಲ್ಲ ರೀತಿಯ ಸಹಾಯ ಮಾಡಲು ಕೇಂದ್ರ ಸಿದ್ಧ: ಅಮಿತ್ ಶಾ ಭರವಸೆ

Video: ಕೇರಳ ಮಳೆಯ ಭೀಕರತೆ; ನೋಡನೋಡುತ್ತಿದ್ದಂತೆ ನದಿಗೆ ಕುಸಿದುಬಿತ್ತು ಇಡೀ ಮನೆ

Published On - 2:27 pm, Mon, 18 October 21