Viral: ಕುಡಿದು ವಾಹನ ಚಲಾಯಿಸುವವರನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿಯಲು ಪೊಲೀಸರ ವಿಶೇಷ ತಂತ್ರ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 18, 2024 | 6:20 PM

ಸಾಮಾನ್ಯವಾಗಿ ಟ್ರಾಫಿಕ್‌ ಪೊಲೀಸರು ವಾಹನ ತಪಾಸಣೆಯ ಸಮಯದಲ್ಲಿ ಬ್ರೀತ್‌ ಅನಲೈಸರ್‌ ಮೂಲಕ ವಾಹನ ಚಾಲಕರು ಮದ್ಯ ಸೇವನೆ ಮಾಡಿದ್ದಾರೆಯೇ ಎಂಬುದನ್ನು ಪರೀಕ್ಷಿಸುತ್ತಾರೆ. ಆದ್ರೆ ಮಧ್ಯಪ್ರದೇಶದ ಪೊಲೀಸರು ಇದಕ್ಕೆ ವಿನೂತನ ಮಾರ್ಗ ಕಂಡುಕೊಂಡಿದ್ದು, ಸುಣ್ಣದ ಗೆರೆಯಲ್ಲಿ ವಾಹನ ಚಾಲಕರನ್ನು ನಡೆದಾಡಿಸುವ ಮೂಲಕ ಅವರು ಮದ್ಯ ಸೇವಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯುತ್ತಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ದೇಶಾದ್ಯಂತ ನಡೆಯುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕುಡಿದು ವಾಹನ ಚಲಾಯಿಸುವಂತಿಲ್ಲ ಎಂಬ ಕಾನೂನನ್ನು ತರಲಾಗಿದೆ. ಹೀಗಿದ್ದರೂ ಅದೆಷ್ಟೋ ಜನರು ಕಂಠ ಪೂರ್ತಿ ಕುಡಿದು ಬೇಕಾಬಿಟ್ಟಿ ವಾಹನಗಳನ್ನು ಚಲಾವಣೆ ಮಾಡುತ್ತಿದ್ದಾರೆ. ಇಂತಹ ಹುಚ್ಚಾಟಗಳಿಗೆ ಕಡಿವಾಣ ಹಾಕಲೆಂದು ಎಲ್ಲೆಡೆ ಟ್ರಾಫಿಕ್‌ ಪೊಲೀಸರು ವಾಹನ ಸವಾರರು ಮದ್ಯ ಸೇವಿಸಿದ್ದಾರೆಯೋ ಎಂದು ಬ್ರೀತ್‌ ಅನಲೈಸರ್‌ ಮೂಲಕ ಪರೀಕ್ಷಿಸಿ ಕುಡಿದು ವಾಹನ ಚಲಾಯಿಸುವವರಿಗೆ ದಂಡ ಹಾಕುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಆದ್ರೆ ಮಧ್ಯಪ್ರದೇಶದ ಪೊಲೀಸರು ಡ್ರಂಕ್‌ ಆಂಡ್‌ ಡ್ರೈವ್‌ ಮಾಡುವವರನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿಯಲು ವಿನೂತನ ತಂತ್ರವನ್ನು ಕಂಡು ಕೊಂಡಿದ್ದು, ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಪೊಲೀಸರು ಕುಡಿದು ವಾಹನ ಚಲಾಯಿಸುವವರನ್ನು ಹಿಡಿಯಲು ಈ ಒಂದು ವಿಶಿಷ್ಟ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ವಾಹನ ತಪಾಸಣೆ ವೇಳೆ ಪೊಲೀಸರು ವಾಹನ ಚಾಲಕರನ್ನು ರಸ್ತೆಯ ಮೇಲೆ ಹಾಕಿರುವ ಚಾಕ್‌ ಲೈನ್‌ ಅಥವಾ ಸುಣ್ಣದ ಗೆರೆಯಲ್ಲಿ ನಡೆಸುವ ಮೂಲಕ ಈ ಟೆಸ್ಟ್‌ ಮಾಡುತ್ತಿದ್ದಾರೆ. ಒಂದು ವೇಳೆ ಗೆರೆಯ ಮೇಲೆ ನಡೆಯುವಾಗ ಯಾರಾದರೂ ಎಡವಿದರೆ ಖಂಡಿತವಾಗಿ ಇದು ಕುಡಿತದ ಪ್ರಭಾವ ಎಂದು ಗೊತ್ತಾಗುತ್ತದೆ. ಅಂತಹ ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ಪರೀಕ್ಷೆ ನಡೆಸಿ ಕುಡಿದ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರತ್ಲಾಮ್‌ನ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌.ಪಿ) ಅಮಿತ್‌ ಕುಮಾರ್‌ ಹೇಳಿದ್ದಾರೆ.

ರತ್ಲಾಮ್‌ ಪೊಲೀಸರು ಬ್ರೀತ್‌ ಅನಲೈಸರ್‌ಗಳ ಬದಲು ಡ್ರಂಕ್‌ ಆಂಡ್‌ ಡ್ರೈವ್‌ ಟೆಸ್ಟ್‌ ಮಾಡಲು ಈ ವಿಶೇಷ ಮಾರ್ಗವನ್ನು ಕಂಡುಕೊಂಡಿದ್ದಾರೆ. ಕುಡಿದು ವಾಹನ ಚಲಾಯಿಸುವುದರಿಂದ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಯಲು ಈ ಹೊಸ ವಿಧಾನವನ್ನು ಆವಿಷ್ಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಿಂದ ರಸ್ತೆ ಅಪಘಾತ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಈ ಕಾರಣಕ್ಕಾಗಿ ರತ್ಲಾಮ್‌ನ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌.ಪಿ) ಅಮಿತ್‌ ಕುಮಾರ್‌ ಅವರ ನಿರ್ದೇಶನದಂತೆ ಪೊಲೀಸರು ವಾಹನ ತಪಾಸಣೆ ವೇಳೆ ಮದ್ಯಪಾನ ಮಾಡಿದ ಶಂಕಿತ ಚಾಲಕರನ್ನು ರಸ್ತೆಯಲ್ಲಿ ಹಾಕಿರುವಂತಹ ಚಾಕ್‌ಲೈನ್‌ನಲ್ಲಿ ನಡೆಯುವಂತೆ ಹೇಳಿ ಈ ಟೆಸ್ಟ್‌ ಮಾಡಿಸುತ್ತಿದ್ದಾರೆ.

ಒಬ್ಬ ವ್ಯಕ್ತಿ ಈ ಸರಳ ರೇಖೆಯಲ್ಲಿ ನೇರವಾಗಿ ನಡೆಯಲು ಸಾಧ್ಯವಾದರೆ, ಅವನು ವಾಹನವನ್ನು ಸಹ ಸರಿಯಾಗಿ ಓಡಿಸಬಹುದು ಒಂದು ವೇಳೆ ಸರಿಯಾಗಿ ನಡೆಯಲು ಸಾಧ್ಯವಾಗದಿದ್ದರೆ, ಅವನು ತುಂಬಾ ಕುಡಿದಿದ್ದಾನೆ ಮತ್ತು ವಾಹನವು ಸರಿಯಾಗಿ ಓಡಿಸುವ ಸ್ಥಿತಿಯಲ್ಲಿಲ್ಲ ಎಂದು ಅರ್ಥ. ಅಂತಹವರನ್ನು ತಡೆದು ಪೋಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಹೀಗೆ ಬಟ್ಟೆ ತೊಡುವುದು ಸುರಕ್ಷಿತವೇ; ಅರೆಬರೆ ಬಟ್ಟೆ ತೊಟ್ಟು ಗಂಡಸರ ಬಳಿ ಅಭಿಪ್ರಾಯ ಕೇಳಿದ ಯುವತಿ

ಈ ವಿನೂತನ ಶೈಲಿಯ ತಪಾಸಣೆಯನ್ನು ಕಂಡು ಜನರು ಫುಲ್‌ ಶಾಕ್‌ ಆಗಿದ್ದಾರೆ. ಆದರೂ ಪೊಲೀಸರ ಈ ಹೊಸ ಉಪಕ್ರಮವನ್ನು ಸ್ಥಳೀಯ ಜನರು ಸ್ವಾಗತಿಸಿದ್ದು, ಪೊಲೀಸರು ಜನರ ಮೆಚ್ಚುಗೆಗೂ ಪಾತ್ರವಾಗಿದ್ದಾರೆ. ಈ ಹೊಸ ಡ್ರಂಕ್‌ ಆಂಡ್‌ ಡ್ರೈವ್‌ ತಪಾಸಣೆ ವಿಧಾನ ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ ವೈರಲ್ ಆಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ