ಅಲ್ಲಾ..ಹೇಳಬೇಡ,’ಜೈ ಶ್ರೀ ರಾಮ್’ ಹೇಳಬೇಕು ಎಂದು 3 ಮಕ್ಕಳಿಗೆ ಚಪ್ಪಲಿಯಲ್ಲಿ ಹೊಡೆದ ಯುವಕ
ಮಧ್ಯಪ್ರದೇಶದ ರತ್ಲಂನಲ್ಲಿ ಮೂವರು ಮಕ್ಕಳ ಮೇಲೆ ಒಬ್ಬ ಯುವಕ ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವಕ "ಜೈ ಶ್ರೀ ರಾಮ್" ಎಂದು ಕೂಗುವಂತೆ ಒತ್ತಾಯಿಸಿದ್ದು, ಮಕ್ಕಳು ಅದನ್ನು ನಿರಾಕರಿಸಿದಾಗ ಅವರಿಗೆ ಚಪ್ಪಲಿಯಿಂದ ಹೊಡೆದಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲು ತಂಡ ರಚಿಸಿದ್ದಾರೆ.
ಮಧ್ಯಪ್ರದೇಶ: ಯುವಕನೊಬ್ಬ ಮೂರು ಮಕ್ಕಳಿಗೆ ಚಪ್ಪಲಿಯಿಂದ ಹೊಡೆದು ‘ಜೈ ಶ್ರೀ ರಾಮ್’ ಎಂದು ಜಪಿಸುವಂತೆ ಒತ್ತಾಯಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ . ಮಕ್ಕಳು ಮುಸ್ಲಿಂ ಸಮುದಾಯದವರೆಂದು ತಿಳಿದುಬಂದಿದ್ದು, ಅವರಲ್ಲಿ ಒಬ್ಬ ಬಾಲಕ ‘ಅಲ್ಲಾಹ’ ಎಂದು ಕೂಗಿದ ತಕ್ಷಣ ಯುವಕ ಅವರಿಗೆ ಚಪ್ಪಲಿಯಲ್ಲಿ ಮನಬಂದಂತೆ ಹೊಡೆಯಲು ಪ್ರಾರಂಭಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಮನಕ್ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಅಮೃತಸಾಗರ್ ತಲಾಬ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಅಮ್ಯೂಸ್‌ಮೆಂಟ್ ಪಾರ್ಕ್ ಬಳಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಪೊಲೀಸರು ವೈರಲ್ ಆದ ವಿಡಿಯೋವನ್ನು ಪರಿಗಣನೆಗೆ ತೆಗೆದುಕೊಂಡಿದ್ದು ಪ್ರಕರಣದ ತನಿಖೆಗಾಗಿ ಸೈಬರ್ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಿದ್ದಾರೆ. ಆರೋಪಿಗಳ ವಿರುದ್ಧ ಹಲ್ಲೆ, ನಿಂದನೆ, ಕೊಲೆ ಬೆದರಿಕೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಪ್ರಯತ್ನ ಕೂಡ ನಡೆಯುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:09 pm, Fri, 6 December 24