ಮಹಾರಾಷ್ಟ್ರದ ಮೀನುಗಾರನಿಗೆ ರಾತ್ರೋರಾತ್ರಿ ಅದೃಷ್ಟ ಖುಲಾಯಿಸಿದೆ. ಮೀನು ಹಿಡಿಯುತ್ತ ಜೀವನ ಸಾಗಿಸುತ್ತಿದ್ದ ಸಾಮಾನ್ಯ ಮೀನುಗಾರ ಚಂದ್ರಕಾಂತ್ ತಾರೆಗೆ ಸಮುದ್ರ ಸ್ವರ್ಣ ಎಂಬ ಖ್ಯಾತಿಗೆ ಹೆಸರಾಗಿರುವ ಘೋಲ್ ಮೀನುಗಳು ಸಿಕ್ಕಿವೆ. ಬೆಲೆಬಾಳುವ ಈ ಮೀನುಗಳ ಮಾರಾಟದಿಂದ ಚಂದ್ರಕಾಂತ್ ಕೋಟ್ಯಾಧೀಶನಾಗಿರುವ ಸುದ್ದಿ ವೈರಲ್ ಆಗಿದೆ.
ಚಂದ್ರಕಾಂತ್ ತಾರೆ ಪಾಲ್ಘರ್ ಜಿಲ್ಲೆಯ ಮುರ್ಬೆ ಗ್ರಾಮದ ಸಾಮಾನ್ಯ ಮೀನುಗಾರ. ಸಮುದ್ರಕ್ಕೆ ಬಲೆ ಬೀಸಿ ಮೀನು ಹಿಡಿಯುತ್ತ ತನ್ನ ಜೀವನವನ್ನು ಸಾಗಿಸುತ್ತಿದ್ದ. ಕೊವಿಡ್19 ನಿರ್ಬಂಧಗಳಿಂದಾಗಿ ಸಮುದ್ರಕ್ಕೆ ಇಳಿಯಲು ಸಾಧ್ಯವಾಗದೇ ಇರುವುದರಿಂದ ಇಷ್ಟು ದಿನದ ಬಳಿಕ ಆಗಸ್ಟ್ 28ರಂದು ಸಮುದ್ರಕ್ಕೆ ಮೀನು ಹಿಡಿಯಲು ತೆರಳಿದ್ದಾನೆ. ಬಲೆ ಬೀಸಿ ವಾಪಾಸ್ ಮನೆಗೆ ಹಿಂತಿರುಗಿದ್ದಾನೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ರಾಶಿಗಟ್ಟಲೇ ಘೋಲ್ ಮೀನುಗಳು ಬಲೆಯಲ್ಲಿ ಸಿಕ್ಕಿವೆ.
ಚಮದ್ರಕಾಂತ್ ಸಮುದ್ರದಿಂದ ಬಲೆ ತೆಗೆಯುವಾಗ ತುಂಬಾ ಭಾರವೆನಿಸಿತು. ನೀರಿನಿಂದ ಬಲೆಯನ್ನು ಹೊರತೆಗೆಯುತ್ತಿದ್ದಂತೆಯೇ ಸುಮಾರು 150 ಘೋಲ್ ಮೀನುಗಳ ಗುಂಪು ಬಲೆಯಲ್ಲಿ ಸಿಕ್ಕಿವೆ. ಇದನ್ನು ನೋಡಿದ ಚಂದ್ರಕಾಂತ್ ಒಮ್ಮೆಲೆ ಆಶ್ಚರ್ಯಗೊಂಡಿದ್ದಾನೆ.
ಘೋಲ್ ಮೀನು ಕೇವಲ ರುಚಿ ಮಾತ್ರವಲ್ಲ. ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ವಿದೇಶದಲ್ಲಿ ಇದಕ್ಕೆ ಭಯಂಕದ ದುಡ್ಡು. ಈ ಮೀನನ್ನು ಔಷಧಿಗೆ ಜತೆಗೆ ಬೆಲೆ ಬಾಳುವ ಉತ್ಪನ್ನ ತಯಾರಿಕೆಗಳಲ್ಲಿ ಬಳಸಲಾಗುತ್ತದೆ.
ಈ ಮೀನನ್ನು ಚಿನ್ನದ ಹೃದಯವಿರುವ ಮೀನು, ಸಮುದ್ರ ಸ್ವರ್ಣ ಎಂದೂ ಕರೆಯುವುದುಂಟು. ಘೋಲ್ ಮೀನುಗಳನ್ನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೋಡಿದ ಮೀನುಗಾರನಿಗೆ ಸಂತೋಷ ತಡೆಯಲಾಗಲಿಲ್ಲ. ಆ ದೃಶ್ಯಗಳನ್ನು ಅವರಲ್ಲಿದ್ದ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಮೀನುಗಳನ್ನು ಹಿಡಿದು ಹರಾಜು ಮಾಡಲಾಯಿತು. ಒಟ್ಟು 1.33 ಕೋಟಿ ರೂಪಾಯಿ ಲಭಿಸಿದೆ.
ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಈ ಘೋಲ್ ಮೀನಿಗೆ ಹೆಚ್ಚಿನ ಬೇಡಿಕೆ ಇದೆ. ಉತ್ತರ ಪ್ರದೇಶದ ಹಾಗೂ ಬಿಹಾರ್ ಮೂಲದ ಉದ್ಯಮಿಗಳು ಹರಾಜಿನಲ್ಲಿ ಈ ಮೀನುಗಳನ್ನು ಖರೀದಿಸಿದ್ದಾರೆ. ಚಂದ್ರಕಾಂತ್ ಹಿಡಿದ ಮೀನುಗಳು ಇದೀಗ ವಿದೇಶಕ್ಕೆ ರಫ್ತಾಗಲಿದೆ.
ಇದರಿಂದ ನನ್ನ ಅದೃಷ್ಟ ಬದಲಾಯಿತು. ಇಷ್ಟು ದಿನ ಸಮುದ್ರಕ್ಕೆ ಹೋಗಲು ನಿಷೇಧ ಹೇರಲಾಗಿತ್ತು. ಬಳಿಕ ಮೊದಲನೇ ಬಾರಿಗೆ ಆಗಸ್ಟ್ 28ರಂದು ಸಮುದ್ರಕ್ಕೆ ಮೀನು ಹಿಡಿಯಲು ತೆರಳಿದೆ. ಮೊದಲನೇ ದಿನವೇ ಇಷ್ಟು ದೊಡ್ಡ ಮೊತ್ತ ನನಗೆ ಲಭಿಸಿದೆ. ನನ್ನ ಸಮಸ್ಯೆಗಳೆಲ್ಲ ಈ ಹಣದಿಂದ ಬಗೆಹರಿಯಲಿದೆ ಎಂದು ಮೀನುಗಾರ ಚಂದ್ರಕಾಂತ್ ತಾರೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
ಉಡುಪಿಯಲ್ಲಿ ಐದು ದಿನ ಆರೆಂಜ್ ಅಲರ್ಟ್; ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಧಿಕಾರಿ ಸೂಚನೆ
ನದಿಯಾಗಿ ಬದಲಾಗುತ್ತಿದೆ ರೈತರ ನೂರಾರು ಎಕರೆ ಕೃಷಿ ಭೂಮಿ; ಇಂದು ಇದ್ದ ಜಮೀನು ನಾಳೆ ಇರುವುದೇ ಅನುಮಾನ
Published On - 8:37 am, Fri, 3 September 21