30 ವರ್ಷ ದಾಟಿದ ಮಹಿಳಾವಾದಿಗೆ 25-28 ವರ್ಷದ, ಹೂಸು ಬಿಡದ, ತೇಗದ, ಅಡುಗೆ ಬಲ್ಲ ವರ ಬೇಕಾಗಿದ್ದಾನೆ: ವೈರಲ್​ ಆಯ್ತು ಜಾಹೀರಾತು

ಕಟ್ಟರ್ ಮಹಿಳಾವಾದಿಯಾದ 30 ವರ್ಷ ಮೇಲ್ಪಟ್ಟ, ಗಿಡ್ಡ ತಲೆಗೂದಲಿನ, ಬಂಡವಾಳಶಾಹಿಗಳ ವಿರುದ್ಧ ಹೋರಾಡುವ ಸಾಮಾಜಿಕ ಕಾರ್ಯಕರ್ತೆಗೆ ಸೂಕ್ತ ವರ ಬೇಕಾಗಿದೆ. ಆದರೆ, ವರನ ವಯಸ್ಸು ಕಡ್ಡಾಯವಾಗಿ 25ರಿಂದ 28ವರ್ಷದೊಳಗೆ ಇರಬೇಕಿದ್ದು, ಅತ್ಯುತ್ತಮ ಮನೆಯನ್ನು ಹೊಂದಿರಬೇಕು. ಆತನ ತಂದೆ-ತಾಯಿಗೆ ಅವನು ಒಬ್ಬನೇ ಮಗನಾಗಿರಬೇಕು. ಕನಿಷ್ಠ 20 ಎಕರೆ ಜಾಗ, ತೋಟದ ಮನೆ ಇರಬೇಕು.

30 ವರ್ಷ ದಾಟಿದ ಮಹಿಳಾವಾದಿಗೆ 25-28 ವರ್ಷದ, ಹೂಸು ಬಿಡದ, ತೇಗದ, ಅಡುಗೆ ಬಲ್ಲ ವರ ಬೇಕಾಗಿದ್ದಾನೆ: ವೈರಲ್​ ಆಯ್ತು ಜಾಹೀರಾತು
ವೈರಲ್​ ಆದ ಜಾಹೀರಾತು
Edited By:

Updated on: Jun 25, 2021 | 12:38 PM

ದೆಹಲಿ: ಭಾರತದಲ್ಲಿ ಮದುವೆ ಎನ್ನುವುದು ಇಂದಿಗೂ ಒಂದು ಬಗೆಯ ಸಂಕೀರ್ಣ ವ್ಯವಸ್ಥೆಯಾಗಿಯೇ ಉಳಿದಿದೆ. ಜಾತಿ, ಧರ್ಮ, ಕುಲ, ಗೋತ್ರ, ವಯಸ್ಸು, ಬಣ್ಣ, ಸೌಂದರ್ಯ, ಆಸ್ತಿ-ಅಂತಸ್ತು, ಸಿದ್ಧಾಂತ, ಊರು ಹೀಗೆ ಹುಡುಕುತ್ತಾ ಹೋದರೆ ಒಬ್ಬೊಬ್ಬರೂ ಹತ್ತಾರು ಕಾರಣಗಳನ್ನು ಕೊಡುತ್ತಾ ಈ ಎಲ್ಲಾ ಗುಣಗಳಿದ್ದವರೇ ಸೂಕ್ತ ಸಂಗಾತಿ ಎನ್ನುತ್ತಾರೆ. ಹೀಗಾಗಿ ಇಂತಹ ಗಡಿಗಳನ್ನು ದಾಟಿ ಮದುವೆಯಾಗುವುದು ಸಲೀಸಂತೂ ಅಲ್ಲವೇ ಅಲ್ಲ. ಆದರೆ, ಜೋಡಿ ಹುಡುಕುವುದಕ್ಕೆ ಕೊಂಚ ಸುಲಭವಾಗಲೆಂದೇ ಇತ್ತೀಚೆಗೆ ವಿವಾಹ ಸಂಬಂಧಿ ಜಾಲತಾಣಗಳು ದೊಡ್ಡ ಸಂಖ್ಯೆಯಲ್ಲಿ ತಲೆ ಎತ್ತುತ್ತಿವೆ. ಅಲ್ಲದೇ, ಕೆಲವರು ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ತಾವು ಅರಸುತ್ತಿರುವ ಸಂಗಾತಿಯಲ್ಲಿರಬೇಕಾದ ಗುಣ ಲಕ್ಷಣಗಳನ್ನೆಲ್ಲಾ ವಿವರಿಸಿ ಆಸಕ್ತಿ ಇದ್ದವರು ತಿಳಿಸಿ ಎಂದು ನೇರ ಬೇಡಿಕೆ ಇಟ್ಟುಬಿಡುತ್ತಾರೆ. ಬಹುಸೂಕ್ಷ್ಮವಾಗಿ ಗಮನಿಸಿದರೆ ಕೆಲ ಜಾಹೀರಾತುಗಳಲ್ಲಿನ ಬೇಡಿಕೆಗಳು ಚಿತ್ರ, ವಿಚಿತ್ರವಾಗಿಯೂ, ಇಂತಹವರಿಗೆ ಜೋಡಿ ಸಿಕ್ಕು ಮದುವೆಯಾಗುವುದು ಸಾಧ್ಯವಾ? ಎಂದು ಅನುಮಾನ ಹುಟ್ಟಿಸುವಂತೆಯೂ ಇರುತ್ತವೆ. ಇದೀಗ ಅಂಥದ್ದೇ ಒಂದು ವಿಚಿತ್ರ ವರಾನ್ವೇಷಣಾ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಂಗ್ಲ ಪತ್ರಿಕೆಯೊಂದರಲ್ಲಿ ನೀಡಲಾಗಿರುವ ವರ ಬೇಕಾಗಿದ್ದಾರೆ ಜಾಹೀರಾತಿನಲ್ಲಿ, 30ವರ್ಷ ದಾಟಿದ ಸುಶಿಕ್ಷಿತ ಮಹಿಳಾವಾದಿಯೊಬ್ಬರಿಗೆ ವರ ಬೇಕೆಂದು ಕೇಳಲಾಗಿದೆ. ಹಾಗಂತ ಅಷ್ಟೇ ಕೇಳಿದ್ದರೆ ಇದೊಂದು ಮಾಮೂಲಿ ಸುದ್ದಿಯಾಗಿಯೇ ಉಳಿಯುತ್ತಿತ್ತು. ಆದರೆ, ಅದರಲ್ಲಿನ ಬೇಡಿಕೆಗಳು ಎಷ್ಟು ವಿಚಿತ್ರವೆಂದರೆ ಆ ಬೇಡಿಕೆಗಳಿಗೆಲ್ಲಾ ತಕ್ಕನೆಂಬ ವರ ಅಸ್ತಿತ್ವದಲ್ಲಿರುವುದೇ ಕಷ್ಟ ಎನ್ನಿಸುವಂತಿದೆ. ಮೇಲಾಗಿ, ಇಂತಹ ಬೇಡಿಕೆಗಳಿಗೆಲ್ಲಾ ಒಗ್ಗಿಕೊಂಡು ಹೋಗುವುದಕ್ಕಿಂತ ಮದುವೆಯಾಗದೇ ಇರುವುದೂ ಸೂಕ್ತ ಎಂದು ಕೆಲವರು ಭಾವಿಸಿದರೂ ಅಚ್ಚರಿಯಿಲ್ಲ.

ಕಟ್ಟರ್ ಮಹಿಳಾವಾದಿಯಾದ 30 ವರ್ಷ ಮೇಲ್ಪಟ್ಟ, ಗಿಡ್ಡ ತಲೆಗೂದಲಿನ, ಬಂಡವಾಳಶಾಹಿಗಳ ವಿರುದ್ಧ ಹೋರಾಡುವ ಸಾಮಾಜಿಕ ಕಾರ್ಯಕರ್ತೆಗೆ ಸೂಕ್ತ ವರ ಬೇಕಾಗಿದೆ. ಆದರೆ, ವರನ ವಯಸ್ಸು ಕಡ್ಡಾಯವಾಗಿ 25ರಿಂದ 28ವರ್ಷದೊಳಗೆ ಇರಬೇಕಿದ್ದು, ಅತ್ಯುತ್ತಮ ಮನೆಯನ್ನು ಹೊಂದಿರಬೇಕು. ಆತನ ತಂದೆ-ತಾಯಿಗೆ ಅವನು ಒಬ್ಬನೇ ಮಗನಾಗಿರಬೇಕು. ಕನಿಷ್ಠ 20 ಎಕರೆ ಜಾಗ, ತೋಟದ ಮನೆ ಇರಬೇಕು. ಉದ್ಯಮಿಯಾಗಿದ್ದು, ಅಡುಗೆ ಮಾಡಲು ಬಲ್ಲವನಾಗಿರಬೇಕು ಎಂದು ತಿಳಿಸಲಾಗಿದೆ. ಬಹುಶಃ ಇದಿಷ್ಟೂ ಬೇಡಿಕೆಗಳಿಗೆ ಸೂಕ್ತನಾದವನು ಅಪ್ಪಿತಪ್ಪಿ ಸಿಕ್ಕರೂ ಸಿಗಬಹುದೇನು ಆದರೆ, ನಿಜವಾದ ಗಮ್ಮತ್ತು ಇರುವುದೇ ಮುಂದಿನ ಬೇಡಿಕೆಯಲ್ಲಿ.

ಹೂಸು ಬಿಡಬಾರದು, ತೇಗಬಾರದು
ಮೇಲ್ಕಾಣಿಸಿದ ಎಲ್ಲಾ ಗುಣಗಳನ್ನು ಹೊಂದಿದ್ದ ವ್ಯಕ್ತಿಯಾದರೂ ಆತ ಇವೆರಡು ಬೇಡಿಕೆಗಳನ್ನು ಪೂರೈಸಬಲ್ಲವನಾದರೆ ಮಾತ್ರ ಮದುವೆಗೆ ಅರ್ಹನಂತೆ. ಅಂದಹಾಗೆ, ಉಳಿದೆಲ್ಲಾ ಬೇಡಿಕೆಗಳಿಗಿಂತ ಕಠಿಣವೂ ಬಹುತೇಕ ಅಸಾಧ್ಯವೂ ಆದ ಈ ಬೇಡಿಕೆಯನ್ನು ನೋಡಿ ಯಾರೇ ಆದರೂ ಅರೆಕ್ಷಣ ದಂಗಾಗಬಹುದು. ತಿಂದು ಮುಗಿದ ಮೇಲೆ ತೇಗುವಂತೆಯೂ ಇಲ್ಲ, ವಾಯು ಸಮಸ್ಯೆ ಉಂಟಾದರೆ ಅಪಾನವಾಯು ಹೊರಸೂಸುವಂತೆಯೂ ಇಲ್ಲ ಎಂದರೆ ಆ ವ್ಯಕ್ತಿಯ ಪರಿಸ್ಥಿತಿ ಏನಾಗಬೇಡ? ಆದರೂ ಈ ಜಾಹೀರಾತು ನೀಡಿದವರು ಮಾತ್ರ ಅದನ್ನೆಲ್ಲಾ ಯೋಚಿಸದೇ ತಮ್ಮ ಬೇಡಿಕೆಯನ್ನು ಮಾತ್ರ ಸಲ್ಲಿಸಿಬಿಟ್ಟಿದ್ದಾರೆ. ಒಂದುವೇಳೆ ಇದಕ್ಕೂ ಅಸ್ತು ಎನ್ನುವವರು c u r b y o u r p a t r i a r c h y @gmail.com ಇಮೇಲ್​ ವಿಳಾಸಕ್ಕೆ ವಿವರ ಕಳುಹಿಸಿ ಎಂದೂ ತಿಳಿಸಿದ್ದಾರೆ.

ಈ ಜಾಹೀರಾತನ್ನು ನೋಡಿದ ಅನೇಕರು ಅಚ್ಚರಿಗೊಂಡು ಇದರ ಸತ್ಯಾಸತ್ಯತೆ ಬಗ್ಗೆ ಹುಡುಕಾಟವನ್ನೂ ನಡೆಸಿದ್ದಾರೆ. ಅಷ್ಟರಲ್ಲಾಗಲೇ ಬಾಲಿವುಡ್​ ಸೆಲೆಬ್ರಿಟಿಗಳಿಂದ ಹಿಡಿದು ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಅದನ್ನು ಹಂಚಿಕೊಂಡ ಕಾರಣ ಅದು ವೈರಲ್​ ಆಗಿಬಿಟ್ಟಿದೆ. ಆಗಿದ್ದಾಗಲಿ ಈ ಬೇಡಿಕೆಗಳನ್ನಿಟ್ಟ ವ್ಯಕ್ತಿ ಯಾರೆಂದು ಹುಡುಕಲೇಬೇಕು ಎಂದು ಪಣತೊಟ್ಟ ಬಿಬಿಸಿ ಸಂಸ್ಥೆ ಇದರ ಹಿಂದೆ ಬಿದ್ದಾಗ ಜಾಹೀರಾತಿನ ಅಸಲಿಯತ್ತು ಬಯಲಾಗಿದೆ. ಜಾಹೀರಾತಿನಲ್ಲಿ ವರ ಹುಡುಕುತ್ತಿರುವ ಕಟ್ಟರ್ ಮಹಿಳಾವಾದಿಯ ಹೆಸರು ಸಾಕ್ಷಿ ಎಂದೂ, ಆಕೆಯ ಸಹೋದರ ಶ್ರೀಜನ್ ಹಾಗೂ ಸ್ನೇಹಿತೆ ದಮಯಂತಿ ಸೇರಿ ಈ ತಮಾಷೆಯ ಜಾಹೀರಾತು ನೀಡಿದ್ದಾರೆಂದೂ ವಿಷಯ ಬೆಳಕಿಗೆ ಬಂದಿದೆ.

ಸಾಕ್ಷಿ 30 ವರ್ಷವನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಆಕೆಗೆ ಏನಾದರೂ ಉಡುಗೊರೆ ಕೊಡಬೇಕೆಂದು ಬಯಸಿದ ಸಹೋದರ ಹಾಗೂ ಸ್ನೇಹಿತೆ ಸೇರಿ ಈ ಕಿತಾಪತಿ ಮಾಡಿದ್ದಾರೆ. ಅಂದಹಾಗೆ ಅವರು ಇಲ್ಲಿ ಹೇಳಿರುವ ಹೆಸರು ಕೂಡಾ ನಕಲಿಯಾಗಿದ್ದು, ತಾವು ಯಾರೆಂದು ಬೇರೆಯವರಿಗೆ ಗೊತ್ತಾಗುವುದು ಬೇಡ. ಇದು ತಮಾಷೆಯ ಜಾಹೀರಾತು ಎಂದು ಹೇಳಿಕೊಂಡಿದ್ದಾರೆ. ಸಾಕ್ಷಿಗೆ 30 ವರ್ಷ ಆಗುತ್ತಿರುವಂತೆಯೇ ಸುತ್ತಮುತ್ತಲಿನವರೆಲ್ಲಾ ಮದುವೆಯಾಗುವಂತೆ ಒತ್ತಡ ಹೇರಲಾರಂಭಿಸಿದ ಕಾರಣ ಕಾಲೆಳೆಯಲಿಕ್ಕಾಗಿ ಹೀಗೆ ಮಾಡಿದ್ದಾರೆ.

ಲಾಕ್​ಡೌನ್​ ಇಲ್ಲದಿದ್ದರೆ ಜನ್ಮ ದಿನಾಚರಣೆ ಸಂಭ್ರಮಕ್ಕಾಗಿ ಖರ್ಚಾಗಬಹುದಿದ್ದ ಮೊತ್ತದಲ್ಲೇ 13,000 ರೂಪಾಯಿ ಕೊಟ್ಟು ಜಾಹೀರಾತು ಪ್ರಕಟಿಸಿದ ಇವರು ನಕಲಿ ಇಮೇಲ್​ ವಿಳಾಸವನ್ನೂ ಸೃಷ್ಟಿಸಿದ್ದಾರೆ. ವಿಪರ್ಯಾಸವೆಂದರೆ ಆ ಇಮೇಲ್​ ವಿಳಾಸಕ್ಕೆ ಈಗಾಗಲೇ ಅನೇಕ ಪ್ರತಿಕ್ರಿಯೆಗಳು ಬಂದಿದ್ದು ಒಂದಕ್ಕಿಂತ ಒಂದು ಭಿನ್ನವಾಗಿದೆಯಂತೆ. ಕೆಲವರು ಮಹಿಳಾವಾದಿಯಾಗಿ, ಬಂಡವಾಳಶಾಹಿಗಳನ್ನು ವಿರೋಧಿಸುವವಳಾಗಿ ತಂದೆ, ತಾಯಿಗೆ ಒಬ್ಬನೇ ಮಗನಾಗಿರಬೇಕು, ಮನೆ, ಜಮೀನು, ಉದ್ಯಮ ಇರಬೇಕು ಎಂದೆಲ್ಲಾ ಕೇಳಿರುವುದಕ್ಕೆ ಗರಂ ಆಗಿ ಬೈದಿದ್ದಾರಂತೆ.

ಇನ್ನು ಕೆಲವರು ಮಹಿಳಾವಾದಿಗಳ ಹಣೆಬರಹವೇ ಇಷ್ಟೆಂದು ಎಲ್ಲರಿಗೂ ಸಾಮೂಹಿಕವಾಗಿ ಬೈದಿದ್ದು, ತನಗಿಂತ ಕಡಿಮೆ ವಯಸ್ಸಿನ ವರ ಬೇಕೆಂದು ಕೇಳಿದ್ದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರಂತೆ. ಈ ಜಾಹೀರಾತನ್ನು ಸಾಕ್ಷಿಯ ಹುಟ್ಟುಹಬ್ಬದ ದಿನ ಉಡುಗೊರೆಯಾಗಿ ನೀಡಲಾಗಿದ್ದು, ಇದಕ್ಕೆ ಬಂದ ಪ್ರತಿಕ್ರಿಯೆಗಳು ಸಮಾಜದಲ್ಲಿ ಮದುವೆ ಬಗ್ಗೆ ಹೇಗೆಲ್ಲಾ ಯೋಚನೆಗಳಿವೆ. ಕೆಲವರ ಅಹಂಕಾರಕ್ಕೆ ಇದು ಹೇಗೆ ಪೆಟ್ಟು ಕೊಡುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ. ಅಂದಹಾಗೆ, ನಿತ್ಯ ಪ್ರಕಟವಾಗುವ ಎಲ್ಲಾ ವಿವಾಹ ಸಂಬಂಧಿ ಜಾಹೀರಾತುಗಳಿಗೆ ಜನ ಹೀಗೇ ಪ್ರತಿಕ್ರಿಯಿಸುತ್ತಾರಾ ಎಂಬ ಕುತೂಹಲವೂ ಇದೆ ಎಂದು ಸಾಕ್ಷಿಯ ಸಹೋದರ ಹಾಗೂ ಸ್ನೇಹಿತೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:
‘ಕೊವಿಶೀಲ್ಡ್ ಎರಡೂ ಡೋಸ್​ ಲಸಿಕೆ ಪಡೆದ ವರ ಬೇಕು..’: ಮ್ಯಾಟ್ರಿಮೋನಿಯಲ್ಲಿ ಯುವತಿಯ ಜಾಹೀರಾತು

Published On - 12:36 pm, Fri, 25 June 21