ಸಾಮಾನ್ಯವಾಗಿ ಪಕ್ಷಿಗಳು ಮೇಲಕ್ಕೆ, ತುಂಬಾ ಎತ್ತರದಲ್ಲಿ ಅತ್ಯಂತ ಸುರಕ್ಷಿತವಾದ, ಪ್ರಶಸ್ತವಾದ ಜಾಗದಲ್ಲಿ ಗೂಡು ಕಟ್ಟಿ, ತನ್ನ ಮಕ್ಕಳಿಗೆ ಅಲ್ಲಿ ಜನ್ಮ ನೀಡಿ, ಪೊಟರೆಯಂತಹ ಜಾಗದಲ್ಲಿ ಪೊರೆಯುತ್ತವೆ. ಅಪ್ಪಿತಪ್ಪಿಯೂ ರಾಂಗ್ ಸೆಲೆಕ್ಷನ್ ಮಾಡುವುದಿಲ್ಲ. ಏಕೆಂದರೆ ಹಾವು-ಗಿಡಗ, ಇನ್ನೊಂದು ಮತ್ತೊಂದು ಎಂದು ತನ್ನ ಸಂತಾನವನ್ನು ಎಲ್ಲಿ ಗಬುಕ್ ಅಂತಾ ಲಪಟಾಯಿಸಿಬಿಡುತ್ತವೋ ಎಂಬ ಆತಂಕ-ಧಾವಂತ ಆ ಮಾತೃ ಹೃದಯದ್ದು!
ಈ ಪಕ್ಷಿಗಳ ಸಂತಾನಾಭಿವೃದ್ಧಿ ಬಗ್ಗೆ ಈಗ ಯಾಕೆ ಹೇಳಬೇಕಾಯ್ತು ಅಂದ್ರೆ ನಿನ್ನೆ ಸೋಮವಾರ ಟಿವಿ9 ಕನ್ನಡದಲ್ಲಿ ಪ್ರಕಟವಾಗಿದ್ದ ‘ಹೃದಯ ಕಲಕುವ ವಿಡಿಯೋ! ತಾಯಿಯ ಸಮಾಧಿಗೆ ಕಿಂಡಿ ಮಾಡಿ, ಅಮ್ಮ ಅಲ್ಲಿದ್ದಾಳಾ ಎಂದು ಇಣುಕಿ ನೋಡಿದ ಕಂದಮ್ಮ ಏನು ಮಾಡಿದ ನೋಡಿ’ ಎಂಬ ಲೇಖನ ಓದಿ ಅಸಂಖ್ಯಾತ ಮಂದಿ ಮೂಕರಾಗಿದ್ದಾರೆ. ಆ ಮಗುವಿನ ಮೂಕ ರೋಧನೆಗೆ ಮಾತೇ ಹೊರಳದೆ ಕಣ್ಣೀರು ಹಾಕಿದ್ದಾರೆ.
ಆ ಆಕ್ರಂದನದ ಸಮ್ಮುಖದಲ್ಲಿ… ಇಲ್ಲಿರುವ ವಿಡಿಯೋ ನೋಡಿದಾಗ ತನ್ನ ಕಂದಮ್ಮಗಳನ್ನು ಒಂದೊಂದಾಗಿ ಕಳೆದುಕೊಂಡ ತಾಯಿಯ ರೋದನೆ ಹೇಗಿತ್ತು ಎಂಬುದು ಒಂದಾದರೆ, ಅದರಲ್ಲಿ ತಾಯಿಯ ಸೋಲು, ಅಸಹಾಯಕತೆ ದೃಗ್ಗೋಚರ ವಾಗುತ್ತದೆ. ಇದರಲ್ಲಿ ತಾಯಿ ಪಕ್ಷಿಯದ್ದು ತಪ್ಪು ಇದೆ ಅನಿಸುತ್ತದೆ.
1. ಮೊದಲನೆಯದಾಗಿ ಟೊಮೊಟೋ ಗಿಡಗಳ ಸಾಲು, ಗೂಡು ಕಟ್ಟಲು ಸುರಕ್ಷಿತವಾ? ಅಷ್ಟೊಂದು ಕೆಳ ಹಂತದಲ್ಲಿ ಭೂಮಿಗೆ ಅಂಟಿಕೊಂಡಂತೆ ಗೂಡು ಕಟ್ಟಿದ್ದು ದೂರಾಲೋಚನೆಯ ಕೊರತೆಯಲ್ಲವೇ?
ಯಾಕೆ ಅಂದರೆ ಮನುಷ್ಯ ಅತ್ಯಾಧುನಿಕವಾಗಿಯೋ ಅಥವಾ ಅತ್ಯಂತ ಹಳೆಯದ್ದಾಗಿಯೋ ಅತ್ಯದ್ಭುತ ಎಂಬಂತಹ ನಿರ್ಮಾಣಗಳನ್ನು ಮಾಡಿದ್ದಾನೆ. ಯಾವುದೇ ಸಿವಿಲ್ ಎಂಜಿನಿಯರಿಂಗ್ ಗಂಧಗಾಳಿಯಿಲ್ಲದೆ ಕಟ್ಟಿದ ಅಂದಿನ ನಿರ್ಮಾಣಗಳು ಇಂದಿಗೂ ಇವೆ… ಮುಂದೆಯೂ ಅವು ಶತಮಾನಗಳ ಕಾಲ ಬಾಳುತ್ತವೆ. ಅಂದಿನ ಮನುಷ್ಯನ ಜಾಣ್ಮೆ, ಏಕಾಗ್ರತೆಗೆ ಹಿಡಿದ ಸಾಣೆ, ಕನ್ನಡಿ ಆ ಅದ್ಭುತ ನಿರ್ಮಾಣಗಳು. ಅಂತಹುದರಲ್ಲಿ… ಯಾವುದೇ ಮನುಷ್ಯ ಸಹಜವಾಗಿ ಶಾಲಾ ಕಾಲೇಜಿಗೆ ಹೋಗದೆ ಈ ಮುಗ್ಧ, ಮೂಕ ಪ್ರಾಣಿಗಳು ಕಟ್ಟುವ ಗೂಡುಗಳು, ಹೆಣೆಯುವ ಬಲೆಗಳನ್ನು ಪರಿಶೀಲಿಸಿದಾಗ ಖಂಡಿತಾ ಪ್ರಕಾಂಡ ಪಂಡಿತ ಮಾನವರ ಕೈಯಲ್ಲಿ ಈ ಮೂಕ ಪ್ರಾಣಿಗಳು ನಿರ್ಮಿಸುವ ಗೂಡು/ ಬಲೆಗಳಿಗೆ ಸಾಟಿಯೇ ಇಲ್ಲ. ಅಷ್ಟೊಂದು ಕರಾರುವಕ್ಕಾಗಿ ಸಿವಿಲ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಥರ್ಮೋಡೈನಾಮಿಕ್ಸ್, ಫಿಸಿಕ್ಸ್, ಕೆಮಿಸ್ಟ್ರಿ ಜ್ಞಾನ ಹಿತಮಿತವಾಗಿ ಆ ಗೂಡು/ ಬಲೆಗಳಲ್ಲಿ ಸಮ್ಮಿಳನವಾಗಿರುತ್ತದೆ.
ಜಸ್ಟ್ ನೀವು ಒಂದೊಂದಾಗಿ ಜ್ಞಾಪಿಸಿಕೊಳ್ಳುತ್ತಾ ಹೋಗಿ… ಪಕ್ಷಿಗಳು ಕಟ್ಟುವ ಗೂಡು, ಜೇನುಗೂಡು, ಆ ಜೇಡರ ಬಲೆ … ಇವೆಲ್ಲಾ ಯಾವ ಎಂಜಿನಿಯರಿಂಗ್ಗೆ ಕಮ್ಮಿ ಇದೆ. ಯಾವ ಸುರಕ್ಷತೆಗೆ ಕಮ್ಮಿ ಇದೆ. ಸದಾ ಆಕಾಶದಲ್ಲೇ ಇರಬಯಸುವ ಹದ್ದು, ಮರದ ತುತ್ತತುದಿಯಲ್ಲಿ ಸುರಕ್ಷಿತವಾದ ಗೂಡು ಕಟ್ಟುತ್ತದೆ. ಜೇಡ, ಪಕ್ಷಿ ಯಾವ ಐಐಟಿಗೆ ಹೋಗಿ ಕಲಿತುಬಂದಿವೆ? ಜೇನುಗೂಡು ಯಾವ ಜಾಮಿಟ್ರಿಗೆ ಕಡಿಮೆ ಇದೆ? ಹಾಗೆಂದೇ ಈ ವಿಡಿಯೋವನ್ನು ಮತ್ತೊಮ್ಮೆ ಮಗದೊಮ್ಮೆ ಸೂಕ್ಷ್ಮವಾಗಿ ನೋಡಿದಾಗ ತಾಯಿ ಪಕ್ಷಿಯ ಯಡವಟ್ಟು, ಸೋಲು ಢಾಳಾಗಿ ಕಂಡುಬರುತ್ತದೆ.
ಮೂರು ಮಕ್ಕಳಿಗೆ ಜನ್ಮ ನೀಡಿದ ಆ ತಾಯಿ ಪಕ್ಷಿ, ಸ್ವತಃ ತಾನೇ ಕೈಯಾರೆ ಹಾವಿನ ಬಾಯಿಗೆ ಕೊಟ್ಟಂತೆ ಆಗಿಲ್ಲವೇ? ತುಸು ಎತ್ತರದ ಗಿಡ, ಮರದಲ್ಲಿ ಗೂಡು ಕಟ್ಟಿದ್ದರೆ ಖಂಡಿತಾ ಈ ಸರ್ಪದ ಬಾಯಿಗೆ ಆಹಾರವಾಗುತ್ತಿರಲಿಲ್ಲ ಅನಿಸುವುದಿಲ್ಲವೇ?
ಮತ್ತೆ ಈ ವಿಡಿಯೋಗೆ ಬರುವುದಾದರೆ ಇಲ್ಲಿ ಹೇಳುವುದಕ್ಕೆ ಏನೂ ಇಲ್ಲ… ತಾಯಿ ಪಕ್ಷಿಯ ಮೂಕ ರೋಧನೆ ಕಣ್ಣಾರೆ ಕಂಡು ಹೃದಯ ಆರ್ದಗೊಳ್ಳುವುದಷ್ಟೇ ಕೆಲಸವಾದೀತು. ತಾಯಿಯದ್ದು ಒಂದು ರೀತಿಯ ರೋದನೆಯಾದರೆ, ಅದನ್ನು ಕಂಡ ನಮ್ಮಗಳ ರೋದನೆ ಮತ್ತೊಂದು ಮಜಲಿನದ್ದಾಗುತ್ತದೆ ಅಷ್ಟೆ.