
ತಾಯಿಯ (mother) ಪ್ರೀತಿಯೇ ಹಾಗೆ, ಸದಾ ಮಕ್ಕಳ ಕಾಳಜಿ ವಹಿಸುವ, ತೊಂದರೆಯಾಗದಂತೆ ನೋಡಿಕೊಳ್ಳುತ್ತಾಳೆ. ತನ್ನ ಕರುಳ ಕುಡಿಯ ರಕ್ಷಣೆಗಾಗಿ ತಾಯಿಯಾದವಳು ಏನು ಬೇಕಾದರೂ ಮಾಡಲು ಸಿದ್ಧವಿರುವ ಜೀವವೇ ಈ ಅಮ್ಮ. ಈ ವಿಚಾರದಲ್ಲಿ ಪ್ರಾಣಿಗಳು ಕೂಡ ಹೊರತಾಗಿಲ್ಲ. ಮೂಕ ಪ್ರಾಣಿಗಳು ಕೂಡ ತನ್ನ ಕಂದಮ್ಮನ ಮೇಲೆ ವಿಶೇಷವಾದ ಪ್ರೀತಿಯನ್ನು ಇಟ್ಟಿರುತ್ತವೆ. ತನ್ನ ಕಂದಮ್ಮ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ ಎಂದರೆ ರಕ್ಷಣೆ ಧಾವಿಸುತ್ತವೆ. ಇದೀಗ ಅಂತಹದ್ದೇ ಹೃದಯ ಸ್ಪರ್ಶಿ ವಿಡಿಯೋ ಇದಾಗಿದೆ. ಮರಿಯಾನೆಯೊಂದು (baby elephant) ರಸ್ತೆ ಹತ್ತಲು ಹೆಣಗಾಡುತ್ತಿದ್ದು ಜಾರಿ ಬೀಳುತ್ತಿದೆ, ಇತ್ತ ತಾಯಿ ಆನೆ ರಕ್ಷಣೆಗೆ ಬಂದು ಬೀಳದಂತೆ ತಡೆದು ರಸ್ತೆಯನ್ನು ಹತ್ತಿಸಿದೆ. ಈ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.
ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಅವರು (X/@ParveenKaswan) ಹೆಸರಿನ ತಮ್ಮ ಎಕ್ಸ್ ಖಾತೆಯಲ್ಲಿ ತಾಯಾನೆ ಹಾಗೂ ಮರಿಯಾನೆ ಮುದ್ದಾದ ವಿಡಿಯೋ ಹಂಚಿಕೊಂಡಿದ್ದು ತಾಯಿ ಹಾಗೂ ಮರಿ ಕಂದಮ್ಮನ ಜೋಡಿ, ಯಾರು ಹಿಂದೆ ಬಿಡಬಾರದು ಎಂದು ಶೀರ್ಷಿಕೆಯನ್ನು ನೀಡಲಾಗಿದೆ.
That mother calf duo. Nobody should leave behind. pic.twitter.com/uX7Uo1FnLX
— Parveen Kaswan, IFS (@ParveenKaswan) October 16, 2025
ಈ ವಿಡಿಯೋದಲ್ಲಿ ಮರಿಯಾನೆಯೊಂದು ಕಡಿದಾದ ಇಳಿಜಾರಿನಲ್ಲಿ ಮುಖ್ಯ ರಸ್ತೆಗೆ ಹತ್ತಲು ಹೆಣಗಾಡುತ್ತಿರುವುದನ್ನು ನೋಡಬಹುದು. ಈ ವೇಳೆ ಮರಿ ಆನೆ ಭಯಭೀತಗೊಂಡು ಮೇಲಕ್ಕೆ ಹತ್ತಲು ಪ್ರಯತ್ನಿಸುವಾಗ ಪದೇ ಪದೇ ಜಾರಿ ಕೆಳಗೆ ಬೀಳುತ್ತದೆ. ಕೆಲವೇ ಸೆಕೆಂಡುಗಳಲ್ಲೇ ತಾಯಾನೆಯೂ ರಕ್ಷಣೆಗೆ ಧಾವಿಸುತ್ತದೆ. ತನ್ನ ಹಿಂಡಿನ ಮತ್ತೊಂದು ಆನೆಯೂ ಈ ತಾಯಾನೆಯ ಜೊತೆ ಸೇರುತ್ತದೆ. ಎರಡು ಆನೆಗಳು ಜೊತೆ ಸೇರಿ ಮರಿಯನ್ನು ತಮ್ಮ ಸೊಂಡಿಲು ಮತ್ತು ದೇಹಗಳಿಂದ ನಿಧಾನವಾಗಿ ತಳ್ಳುತ್ತಾ, ರಸ್ತೆಗೆ ಸುರಕ್ಷಿತವಾಗಿ ಮೇಲೆ ಹತ್ತುವಂತೆ ಮಾಡುತ್ತದೆ.
ಇದನ್ನೂ ಓದಿ:Video: ಮಳೆಯಲ್ಲಿ ನೆನೆಯುತ್ತಿದ್ದ ಮಾಲಕಿಗೆ ಆಸರೆಯಾಗಿ ನಿಂತ ಆನೆ
ಅಕ್ಟೋಬರ್ 17 ರಂದು ಶೇರ್ ಮಾಡಲಾದ ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇದು ನಿಜಕ್ಕೂ ಕಡಿದಾದ ಇಳಿಜಾರು, ಸಹಾಯ ಹಸ್ತ ನೋಡಲು ತುಂಬಾ ಸಂತೋಷವಾಗುತ್ತದೆ ಎಂದಿದ್ದಾರೆ. ಇನ್ನೊಬ್ಬರು ಆನೆಗಳು ತಮ್ಮ ಮರಿಗಳನ್ನು ಬಹಳಷ್ಟು ಜೋಪಾನ ಮಾಡುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಭಾವನಾತ್ಮಕ ವಿಡಿಯೋ, ಪ್ರತಿ ಹೆಜ್ಜೆಯಲ್ಲೂ ನಿಷ್ಕಲ್ಮಶ ಪ್ರೀತಿಯ ಸಮ್ಮಿಲನ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:48 pm, Sat, 18 October 25