Indian Street Chat : ಈ ಚಾಟ್ ತಿನ್ನೋದಕ್ಕೆ ನೀವು ನೂರಾರು ಮೈಲಿ ಪ್ರಯಾಣ ಮಾಡಬೇಕಾಗತ್ತೆ. ನಾಗ್ಪುರದ ಲಕಡ್ಗಂಜ್ನಲ್ಲಿರುವ ಬಾರ್ಬೆಟ್ ಗಾರ್ಡನ್ನ ಬೀದಿಬದಿಯ ಚಾಟ್ವಾಲಾ (Chatwala) ಇದನ್ನು ಸಂಶೋಧಿಸಿದ್ದಾರೆ. ರೂ. 40 ಕೊಟ್ಟರೆ ಸಾಕು ಈ ದಹೀ ಕುರ್ಕುರೆ ಚಾಟ್ ತಿನ್ನಬಹುದು. ಏನು ಇನ್ನೂ ಮೀನಾ ಮೇಷ ಎಣಿಸುತ್ತಿದ್ದೀರಾ? ಹೇಗೂ ವೀಕೆಂಡ್, ನಡೀರಿ ಹೋಗೋಣ ಮತ್ತೆ. ಸಾಕು ಸುಮ್ನಿರಿ, ಎರಡು ದಿನಕ್ಕೊಮ್ಮೆ ಇಂಥ ವಿಚಿತ್ರ ತಿಂಡಿಗಳನ್ನು ಚಾಟ್ವಾಲಾಗಳು ಮಾಡುತ್ತಿರುತ್ತಾರೆ. ಫುಡ್ ವ್ಲಾಗರ್ಗಳಿಗೂ ಅಂಥವರೇ ಬೇಕು. ಇವೆಲ್ಲ ಎಷ್ಟು ಆರೋಗ್ಯಕರ ಮತ್ತು ಸ್ವಾದಿಷ್ಠ? ಅಂತ ಬಯ್ಕೊಳ್ತಿದ್ದೀರಾ? ಆದರೂ ಈ ದಹೀ ಕುರ್ಕುರೆ ಚಾಟ್ ಹೇಗೆ ಮಾಡೋದು ಅಂತ ನೋಡದೆ ಇರುತ್ತೀರಾ?
ಸಾವಿರಾರು ಜನರು ಈ ವಿಡಿಯೋ ನೋಡಿ ತೋಚಿದಂತೆ ಪ್ರತಿಕ್ರಿಯಿಸಿದ್ದಾರೆ. ಟೊಮ್ಯಾಟೋ ಐಸ್ಕ್ರೀಮ್, ಸ್ಟ್ರಾಬೆರ್ರಿ ಬಿರಿಯಾನಿ, ಸಮೋಸಾ ಗುಲಾಬ್ ಜಾಮೂನ್ ನಂತರ ಇದೀಗ ಈ ದಹೀ ಕುರ್ಕುರೆ ಚಾಟ್? ಅವನ್ನೆಲ್ಲಾ ನೋಡಿ ಎಷ್ಟು ವಾಕರಿಕೆ ಬಂದಿತ್ತೋ ಇದನ್ನು ನೋಡಿಯೂ ಇನ್ನೂ ಹೆಚ್ಚು ವಾಕರಿಕೆ ಬರುತ್ತಿದೆ. ಇಷ್ಟು ಅಸಹ್ಯವಾದ ಚಾಟ್ ತಯಾರಿಸುವ ಉದ್ದೇಶವಾದರೂ ಏನು? ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : Viral: ಹೆಣ್ಣುಮಕ್ಕಳಿಂದ ನಿರಾಕರಣೆ; ತನ್ನ ಎತ್ತರ ಹೆಚ್ಚಿಸಿಕೊಳ್ಳಲು ಈತ ರೂ. 66 ಲಕ್ಷ ವ್ಯಯಿಸಿದ
ದೇಶಾದ್ಯಂತ ಬೀದಿವ್ಯಾಪಾರಿಗಳು ಇಂಥ ವಿಚಿತ್ರ ಪ್ರವೃತ್ತಿಗೆ ಬಿದ್ದಿದ್ದಾರೆ. ಟೇಸ್ಟ್ ಬಡ್ಸ್ಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ನಿಜವಾಗಿಯೂ ಹೀಗೆ ಮಾಡುವುದರಿಂದ ಏನು ಪ್ರಯೋಜನ? ಒಂದೆರಡು ಈ ವಿಡಿಯೋಗಳು ದಿನ ವೈರಲ್ ಆಗುತ್ತವೆ. ನಂತರ? ಎಂದು ಪ್ರಶ್ನಿಸಿದ್ದಾರೆ ಕೆಲವರು.
ಇದನ್ನೂ ಓದಿ : Viral Video:ನನ್ನ ಮೊಟ್ಟೆಗಳಿಗೆ ಕೈಹಾಕಿದರೆ ಅಷ್ಟೇ; ಹೆಬ್ಬಾವು ಮುಂದೇನು ಮಾಡಿತು?
ಸಾಮಾಜಿಕ ಜಾಲತಾಣದಲ್ಲಿ ಅಸ್ತಿತ್ವ ಹೊಂದಿದರೆ ಮಾತ್ರ ಬದುಕಿದ್ದೇವೆ ಮತ್ತು ಸಾಧನೆ ಮಾಡುತ್ತಿದ್ದೇವೆ ಎಂಬ ಹುಚ್ಚಿಗೆ ಮನುಷ್ಯ ಬಿದ್ದಿದ್ದಾನೆ. ವಿಡಿಯೋ ವ್ಲಾಗರ್ಗಳು ಕಂಟೆಂಟ್ಗಾಗಿ ಇಂಥ ಅಸಂದ್ಧ ಪ್ರಯೋಗಗಳನ್ನು ಚಾಟ್ವಾಲಾಗಳಿಂದ ಮಾಡಿಸುತ್ತಿದ್ಧಾರೆ ಎನ್ನುವುದು ಜನರಿಗೆ ಗೊತ್ತಾಗಿದೆ. ಎಷ್ಟು ದಿನ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯ? ಏನೇ ಆಗಲಿ ಒಂದೊಂದು ತಿಂಡಿ ತಿನಿಸಿಗೂ ಅದರದೇ ಆದ ವಿಧಾನ, ರುಚಿ, ಹದ ಎಲ್ಲವೂ ಇರುತ್ತದೆ. ಹೀಗೆಲ್ಲ ಅದನ್ನು ಕೆಡಿಸುವುದು ಸಲ್ಲದು. ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:30 pm, Sat, 24 June 23