
ಚಂಬಾ, ಜನವರಿ 27: ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ನಾಯಿ ತನಗೆ ಕೊಂಚ ಪ್ರೀತಿ ತೋರಿದರೂ, ಒಂದು ತುತ್ತು ಅನ್ನ ಹಾಕಿದರೂ ಅವರನ್ನು ಸಾಯೋವರೆಗೂ ಮರೆಯುವುದಿಲ್ಲ. ಹಿಮಾಚಲ ಪ್ರದೇಶದಲ್ಲಿ ಒಂದು ವಿಚಿತ್ರವಾದ ಮನ ಕಲಕುವ ಘಟನೆ ನಡೆದಿದೆ. ಹಿಮಾಚಲ ಪ್ರದೇಶಕ್ಕೆ ಹೋಗಿದ್ದ ಅಣ್ಣ-ತಮ್ಮಂದಿರಿಬ್ಬರು ತಮ್ಮ ಜೊತೆಗೆ ಸಾಕುನಾಯಿಯಾದ ಪಿಟ್ ಬುಲ್ ಅನ್ನು ಕೂಡ ಕರೆದುಕೊಂಡು ಹೋಗಿದ್ದರು. ಅಲ್ಲಿ ರೀಲ್ಸ್ ಮಾಡುತ್ತಿದ್ದಾಗ ಹಿಮಪಾತವಾಗಿತ್ತು. ಇದರಿಂದ ಆ ಇಬ್ಬರು ಹಿಮದಡಿ (Snowfall) ಸಿಲುಕಿ ಮೃತಪಟ್ಟಿದ್ದರು.
ಹಿಮಪಾತದ ನಂತರ ನಾಪತ್ತೆಯಾಗಿದ್ದ ಬಿಕ್ಷಿತ್ ರಾಣಾ ಮತ್ತು ಪಿಯೂಷ್ ಎಂಬ ಕಸಿನ್ಗಳಿಗಾಗಿ ಹುಡುಕಾಟ ನಡೆದಿತ್ತು. ಈ ಘಟನೆ ನಡೆದು 3 ದಿನಗಳ ನಂತರ ಅವರ ಮೃತದೇಹ ಪತ್ತೆಯಾಗಿದೆ. ವಿಚಿತ್ರವೆಂದರೆ ಆ ಮೃತದೇಹಗಳ ಪಕ್ಕದಲ್ಲಿ ಅವರ ಮುದ್ದಿನ ಸಾಕುನಾಯಿ ಪಿಟ್ಬುಲ್ 72 ಗಂಟೆಗಳಿಂದ ಕಾಯುತ್ತಾ ನಿಂತಿತ್ತು. ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೋರ್‌ನಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.
ಇದನ್ನೂ ಓದಿ: Video: ಊಟ, ನಿದ್ರೆ ಬಿಟ್ಟು ಮಾಲೀಕರ ಶವದ ಬಳಿ ಕುಳಿತ ಶ್ವಾನ, ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ
ಬಿಕ್ಷಿತ್ ರಾಣಾ ಮತ್ತು ಪಿಯೂಷ್ ಎಂಬ ಇಬ್ಬರು ಯುವಕರು ಭರ್ಮೋರ್‌ನ ಭರ್ಮಣಿ ದೇವಾಲಯದ ಬಳಿ ವೀಡಿಯೊಗಳನ್ನು ಚಿತ್ರೀಕರಿಸುವಾಗ ನಾಪತ್ತೆಯಾಗಿದ್ದರು. ಕೆಟ್ಟ ಹವಾಮಾನ ಪರಿಸ್ಥಿತಿಗಳ ನಡುವೆ ಹಿಮದಲ್ಲಿ ಸಿಲುಕಿ ಅವರು ನಂತರ ಸಾವನ್ನಪ್ಪಿದ್ದಾರೆ ಎಂದು ಕಂಡುಬಂದಿದೆ. ರಕ್ಷಣಾ ತಂಡಗಳು ಮತ್ತು ಸ್ಥಳೀಯ ಗ್ರಾಮಸ್ಥರು 4 ದಿನಗಳ ನಂತರ ಆ ಸ್ಥಳಕ್ಕೆ ತಲುಪಿದಾಗ, ಅವರು ಕಂಡ ದೃಶ್ಯವು ಎಲ್ಲರನ್ನೂ ಭಾವುಕರನ್ನಾಗಿ ಮಾಡಿತು. ಪಿಯೂಷ್‌ನ ದೇಹವು ಹಿಮದ ಪದರಗಳ ಅಡಿಯಲ್ಲಿ ಹೂತುಹೋಗಿತ್ತು, ಆದರೆ ಅವರ ಪಕ್ಕದಲ್ಲಿಯೇ ಅವನ ಸಾಕು ನಾಯಿ ಕಾವಲಾಗಿ ಕುಳಿತಿತ್ತು.
ರಕ್ಷಣಾ ತಂಡವು ಆ ಮೃತದೇಹವನ್ನು ಹೊರತೆಗೆಯಲು ಪ್ರಯತ್ನಿಸಿದಾಗ, ಆ ನಾಯಿ ಆರಂಭದಲ್ಲಿ ಆಕ್ರಮಣಕಾರಿಯಾಯಿತು. ಅಪರಿಚಿತರು ಅದರ ಮಾಲೀಕರಿಗೆ ಹಾನಿ ಮಾಡಲು ಬಂದಿದ್ದಾರೆ ಎಂದು ಅದು ಭಾವಿಸಿತು. ಆದರೆ, ಕೊನೆಗೂ ಆ ನಾಯಿಯ ಮನವೊಲಿಸಿ ಆ ಮೃತದೇಹಗಳನ್ನು ಹೊರಗೆ ತೆಗೆಯಲಾಯಿತು. ಈ ಹೃದಯಸ್ಪರ್ಶಿ ಘಟನೆ ಅಲ್ಲಿ ಸೇರಿದ್ದವರ ಕಣ್ಣಲ್ಲಿ ನೀರು ತುಂಬಿಸಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ