Pune: ಆಟವಾಡುತ್ತಿದ್ದಾಗ ಮೈ ಮೇಲೆ ಬಿದ್ದ ಕಬ್ಬಿಣದ ಗೇಟ್, ಮಗು ಸ್ಥಳದಲ್ಲೇ ಸಾವು; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

|

Updated on: Aug 02, 2024 | 4:19 PM

ಮಕ್ಕಳು ಆಟವಾಡುತ್ತಾ ಕಬ್ಬಿಣದ ಗೇಟ್ ಬಳಿ ಬಂದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಂದು ಮಗು ಕಬ್ಬಿಣದ ಗೇಟನ್ನು ಏರಿ ಆಡಲು ಪ್ರಯತ್ನಿಸಿದೆ. ಸಾಕಷ್ಟು ವರ್ಷಗಳಿಂದ ತುಕ್ಕು ಹಿಡಿದು ಹಾಳಾಗಿದ್ದ ಗೇಟು, ಮಗು ಏರಿ ಆಟವಾಡಲು ಪ್ರಾರಂಭಿಸುತ್ತಿದ್ದಂತೆ, ಮಗುವಿನ ಮೈ ಮೇಲೆ ಬಿದ್ದಿದೆ. ಘಟನೆಗೆ ಸಂಬಂಧಿಸಿದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪುಣೆ: ಮನೆಯ ಹೊರಗೆ ಆಟವಾಡುತ್ತಿದ್ದಾಗ ಕಬ್ಬಿಣದ ಗೇಟ್ ಮೈ ಮೇಲೆ ಬಿದ್ದು ಮೂರೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಪಿಂಪ್ರಿ ಚಿಂಚ್‌ವಾಡ್‌(Pimpri-Chinchwad)ನ ಬೊಪ್ಖೇಲ್ ಪ್ರದೇಶದ ಗಣೇಶ್ ನಗರದ ಕಟ್ಟಡವೊಂದರ ಕಬ್ಬಿಣದ ಗೇಟಿನಲ್ಲಿ ಮಗು ನೇತಾಡುತ್ತಾ ಆಟವಾಡುತ್ತಿರುವ ವೇಳೆ ಗೇಟ್​​ ಮೈ ಮೇಲೆ ಬಿದ್ದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಘಟನೆಗೆ ಸಂಬಂಧಿಸಿದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಕ್ಕಳು ಆಟವಾಡುತ್ತಾ ಕಬ್ಬಿಣದ ಗೇಟ್ ಬಳಿ ಬಂದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಂದು ಮಗು ಕಬ್ಬಿಣದ ಗೇಟನ್ನು ಏರಿ ಆಡಲು ಪ್ರಯತ್ನಿಸಿದೆ. ಸಾಕಷ್ಟು ವರ್ಷಗಳಿಂದ ತುಕ್ಕು ಹಿಡಿದು ಹಾಳಾಗಿದ್ದ ಗೇಟು, ಮಗು ಏರಿ ನೇತಾಡಲು ಪ್ರಾರಂಭಿಸುತ್ತಿದ್ದಂತೆ, ಭಾರವಾದ ಕಬ್ಬಿಣದ ಗೇಟು ಮಗುವಿನ ಮೈ ಮೇಲೆ ಬಿದ್ದಿದೆ. ಮಗುವಿನ ಕಿರುಚಾಟ ಕೇಳುತ್ತಿದ್ದಂತೆ ಸ್ಥಳೀಯರು ಓಡೋಡಿ ಬಂದಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅದಾಗಲೇ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಧೃಡಪಡಿಸಿದ್ದಾರೆ.

ಇದನ್ನೂ ಓದಿ: 25 ಲಕ್ಷ ರೂ. ಸಂಬಳದ ಕೆಲಸ ಬಿಟ್ಟು UPSC ಗೆ ತಯಾರಿ ನಡೆಸುತ್ತಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆ

ಪೊಲೀಸರಿಂದ ಬಂದ ಮಾಹಿತಿ ಪ್ರಕಾರ ಶಿಂಧೆ ಕುಟುಂಬದಲ್ಲಿ ಈ ಅವಘಡ ಸಂಭವಿಸಿದೆ. ಮೃತ ಮಗುವಿನ ಹೆಸರು ಗಿರಿಜಾ, ತಂದೆ ಗಣೇಶ ಶಿಂಧೆ. ಕಬ್ಬಿಣದ ಗೇಟ್ ಹಾಳಾಗಿರುವುದು ಕಟ್ಟಡದ ಮಾಲೀಕರಿಗೂ ತಿಳಿದಿತ್ತು ಎಂದು ಹೇಳಲಾಗುತ್ತಿದೆ. ಆದರೆ ಅವರು ದುರಸ್ತಿಗೆ ಬಂದಿಲ್ಲ. ಇದರಿಂದಾಗಿ ಅವಘಡ ಸಂಭವಿಸಿದೆ ಎಂದು ದೂರಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Fri, 2 August 24