ಆಂಜನೇಯನ ವಿಗ್ರಹದಿಂದ ಕೆಂಪು ಬಣ್ಣದ ನೀರು ಸೋರುತ್ತಿರುವಂತೆ ಕಾಣುವ ವಿಡಿಯೋವೊಂದು ಸೋಷಿಯಲ್ ಮಿಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಇದು ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯಲ್ಲಿರುವ ಬಾಮುರ್ಹಿಯಾ ಗ್ರಾಮದಲ್ಲಿರುವ ಆಂಜನೇಯನ ವಿಗ್ರಹವಾಗಿದ್ದು, ಸ್ಥಳೀಯರು ಕೆಂಪು ಬಣ್ಣದ ನೀರಲ್ಲ. ಇದು ರಕ್ತ ಎಂದೇ ಪ್ರತಿಪಾದಿಸುತ್ತಿದ್ದಾರೆ. ಮಂಗಳವಾರ ರಾತ್ರಿ ಮೊದಲಸಲ ಈ ಕೆಂಪುಬಣ್ಣದ ದ್ರವ ಆಂಜನೇಯನ ವಿಗ್ರಹದಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯ ನಿವಾಸಿಗಳು ಕೂಡಲೇ ಅಲ್ಲಿಗೆ ತೆರಳಿ ದೇವರನ್ನು ಪ್ರಾರ್ಥಿಸಲು ತೊಡಗಿದ್ದರು. ಅನೇಕರು ಇದರ ಫೋಟೋ, ವಿಡಿಯೋ ಸೆರೆಹಿಡಿದಿದ್ದಾರೆ. ಮಧ್ಯಪ್ರದೇಶದಿಂದ ಪದೇಪದೆ ಇಂಥ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಇತ್ತೀಚೆಗೆ ಆ ರಾಜ್ಯದ ಕೆಲವು ಜಿಲ್ಲೆಗಳ ದೇಗುಲಗಳಲ್ಲಿ ಇರುವ ಗಣಪತಿ ಮತ್ತು ಶಿವನ ವಿಗ್ರಹಳು ಹಾಲು ಕುಡಿಯುತ್ತವೆ ಎಂಬ ವದಂತಿಯೂ ಹಬ್ಬಿತ್ತು.
ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡುವಂತೆ ಹಿಂದೂಸ್ತಾನ್ ಲೈವ್ಸ್ ಮಾಧ್ಯಮ, ಸತ್ನಾದ ಸರ್ಕಾರಿ ಸ್ವಾಯತ್ತ ಸ್ನಾತಕೋತ್ತರ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಡಾ. ಪಿಕೆ ಮಿಶ್ರಾ ಎಂಬುವರ ಬಳಿ ಪ್ರತಿಕ್ರಿಯೆ ಕೇಳಿತ್ತು. ಅದಕ್ಕೆ ಉತ್ತರಿಸಿದ ಪಿ.ಕೆ.ಮಿಶ್ರಾ, ಇದರಲ್ಲಿ ಮೂಢನಂಬಿಕೆ ಏನೂ ಇಲ್ಲ. ಈ ಮೂರ್ತಿಗಳನ್ನೆಲ್ಲ ಸರಂಧ್ರ ಸಂಚಿತ ಕಲ್ಲುಗಳಿಂದ ನಿರ್ಮಿಸಲಾಗಿದೆ. ಹಾಗೇ ಪೂಜೆಗೆಂದು ಶ್ರೀಗಂಧ, ಸಿಂಧೂರಗಳನ್ನ ವಿಗ್ರಹದ ಮೇಲೆ ಲೇಪಿಸಿದಾಗ ಅವು ರಂಧ್ರಗಳ ಒಳಗೆ ಸೇರಿಕೊಳ್ಳುತ್ತದೆ. ಬಳಿಕ ವಿಗ್ರಹಕ್ಕೆ ನೀರು ಹಾಕಿದಾಗ ಅದೂ ಕೂಡ ರಂಧ್ರದೊಳಗೆ ಸೇರಿಕೊಳ್ಳುತ್ತದೆ. ಹೀಗೆ ರಂಧ್ರಗಳು ತುಂಬಿದಾಗ ಬಣ್ಣ ಮಿಶ್ರಿತ ನೀರು ಹೊರಬರಲು ಶುರುವಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಕೊರೊನಾ ಕಾಟದಿಂದ ಎರಡು ವರ್ಷದ ಬಳಿಕ ಬೆಳಗಾವಿಯಲ್ಲಿ ಮನೆಮಾಡಿದ ಶಿವಾಜಿ ಜಯಂತಿ ಸಂಭ್ರಮ