Shocking News: ತಿಂಗಳಿಗೆ 52 ಲಕ್ಷ ರೂ. ಕರೆಂಟ್ ಬಿಲ್; ಶಾಕ್ ಆದ ಮಾಲೀಕ

|

Updated on: Jul 02, 2024 | 9:44 PM

ಬಿಹಾರದ ಮುಜಾಫರ್‌ಪುರದಲ್ಲಿ ವ್ಯಕ್ತಿಯೊಬ್ಬರ ಮನೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದಕ್ಕೆ ಕಾರಣವೇನೆಂದು ವಿಚಾರಿಸಿದಾಗ ಕರೆಂಟ್ ಬಿಲ್ ಕಟ್ಟಿಲ್ಲ ಎಂಬ ಉತ್ತರ ಬಂದಿತು. ಆ ಬಿಲ್ ಎಷ್ಟಿದೆ ಎಂದು ನೋಡಿದಾಗ ಒಂದು ತಿಂಗಳಿಗೆ ಬರೋಬ್ಬರಿ 52 ಲಕ್ಷ ರೂ. ವಿದ್ಯುತ್ ಬಿಲ್ ಬಂದಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.

Shocking News: ತಿಂಗಳಿಗೆ 52 ಲಕ್ಷ ರೂ. ಕರೆಂಟ್ ಬಿಲ್; ಶಾಕ್ ಆದ ಮಾಲೀಕ
ಕರೆಂಟ್ ಬಿಲ್
Image Credit source: istock
Follow us on

ನವದೆಹಲಿ: ನಿವೃತ್ತರಾಗಿ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬರ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಬಗ್ಗೆ ಅವರು ಉದ್ಯೋಗದ ಪ್ರಯುಕ್ತ ಬೇರೆ ಊರಿನಲ್ಲಿದ್ದ ತಮ್ಮ ಮಗನಿಗೆ ಹೇಳಿದಾಗ ಆತ ಬಿಲ್ ಪಾವತಿಸದ ಕಾರಣ ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಿದ್ದ. ಹೀಗಾಗಿ, ಆನ್​ಲೈನ್​ನಲ್ಲಿ ಈ ತಿಂಗಳು ಎಷ್ಟು ಬಿಲ್ ಬಂದಿದೆ ಎಂದು ನೋಡಿ ಅದನ್ನು ಕಟ್ಟಲು ಹೇಳಿದಾಗ ಅವರ ಮಗ ಹೇಳಿದ ಮೊತ್ತ ಕೇಳಿ ಅವರು ಆಘಾತಕ್ಕೊಳಗಾಗಿದ್ದಾರೆ. ಅವರ ಮನೆಗೆ 1 ತಿಂಗಳಿಗೆ 52 ಲಕ್ಷ ರೂ. ಕರೆಂಟ್ ಬಿಲ್ ಬಂದಿತ್ತು.

ಇಬ್ಬರೇ ವಾಸಿಸುವ ಮನೆಯಲ್ಲಿ ಪ್ರತಿ ತಿಂಗಳೂ 1 ಸಾವಿರಕ್ಕಿಂತಲೂ ಕಡಿಮೆ ಕರೆಂಟ್ ಬಿಲ್ ಬರುತ್ತಿತ್ತು. ಇದೀಗ ಇಷ್ಟು ದೊಡ್ಡ ಮೊತ್ತ ಹೇಗೆ ಬಂದಿತು ಎಂದು ಮುಜಾಫರ್‌ಪುರ ನಿವಾಸಿ ಹರಿಶಂಕರ್ ಮಣಿಯಾರಿ ದಿಗ್ಭ್ರಮೆಗೊಂಡಿದ್ದಾರೆ.

ಈಗಾಗಲೇ ಬಾಕಿಯಿದ್ದ 500 ರೂ. ವಿದ್ಯುತ್ ಬಿಲ್ ಕಟ್ಟಿದ್ದರೂ ಕರೆಂಟ್ ಸಂಪರ್ಕವನ್ನು ವಾಪಾಸ್ ಕೊಟ್ಟಿಲ್ಲ ಎಂದು ಹರಿಶಂಕರ್ ಅವರು ತಮ್ಮ ಮಗನ ಬಳಿ ಹೇಳಿದ್ದರು. ಹೀಗಾಗಿ, ಆನ್‌ಲೈನ್‌ನಲ್ಲಿ ತಮ್ಮ ವಿದ್ಯುತ್ ಬಿಲ್ ಅನ್ನು ಪರಿಶೀಲಿಸಲು ಹೇಳಿದ್ದರು. ಆಗ ಅವರ ಮನೆಗೆ ಜೂನ್ ತಿಂಗಳ ಕರೆಂಟ್ ಬಿಲ್ 52,43,327 ರೂ. ಬಂದಿದೆ ಎಂದು ನಮೂದಾಗಿತ್ತು.

ಇದನ್ನೂ ಓದಿ: Viral Video: ನೀರಿನ ಜೊತೆ ಹುಚ್ಚಾಟ ಬೇಡ!; ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ

ತಕ್ಷಣ ಹರಿಶಂಕರ್ ಅವರು ವಿದ್ಯುತ್ ಇಲಾಖೆಗೆ ಈ ದೋಷದ ಬಗ್ಗೆ ಮಾಹಿತಿ ನೀಡಿದರು. ದೂರು ಕೂಡ ಸಲ್ಲಿಸಿದರು. ಜೂನ್ 27 ರಂದು ನನ್ನ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಬಗ್ಗೆ ನನ್ನ ಮಗ ನನಗೆ ತಿಳಿಸಿದಾಗ, ನಾನು ತಕ್ಷಣ ನನ್ನ ವಿದ್ಯುತ್ ಖಾತೆಗೆ 500 ರೂ.ಗೆ ರೀಚಾರ್ಜ್ ಮಾಡಿದ್ದೇನೆ. ಆದರೆ ವಿದ್ಯುತ್ ಮರುಸ್ಥಾಪಿಸದೇ ಇದ್ದಾಗ ನಾನು ಬಿಲ್ ಅನ್ನು ಡೌನ್‌ಲೋಡ್ ಮಾಡಿದ್ದೇನೆ. ಅದು 52 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ತೋರಿಸಿದೆ ಎಂದು ಮಣಿಯಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ನಾನು ಯಾವಾಗಲೂ ನನ್ನ ಬಿಲ್‌ಗಳನ್ನು ಸಮಯಕ್ಕೆ ಪಾವತಿಸುತ್ತೇನೆ. ಆದರೆ, ಈ ಬಾರಿ ತಪ್ಪು ಕರೆಂಟ್ ಬಿಲ್ ನೀಡಿದ್ದು ಮಾತ್ರವಲ್ಲದೆ ಕರೆಂಟ್ ಸಂಪರ್ಕವನ್ನೂ ತೆಗೆದಿದ್ದಾರೆ. ನನ್ನ ಮನೆಯಲ್ಲಿ ನನ್ನ ಪತ್ನಿ ರೋಗಿಯಾಗಿದ್ದು, ಕರೆಂಟ್ ಇಲ್ಲದ ಕಾರಣ ತೊಂದರೆ ಅನುಭವಿಸುತ್ತಿದ್ದೇವೆ. ಇದು ವಿದ್ಯುತ್ ಇಲಾಖೆಯ ಅತ್ಯಂತ ಬೇಜವಾಬ್ದಾರಿ ವರ್ತನೆಯಾಗಿದೆ” ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: Shocking Video: ಪಿಕ್ನಿಕ್ ಹೋದ ಒಂದೇ ಕುಟುಂಬದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್

ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಮುಜಫರ್‌ಪುರ ವಿದ್ಯುತ್ ಇಲಾಖೆ, ಹಳೆಯ ಅನಲಾಗ್ ಮೀಟರ್‌ಗಳಿಂದ ಹೊಸ ಸ್ಮಾರ್ಟ್ ಮೀಟರ್‌ಗಳಿಗೆ ವರ್ಗಾಯಿಸಿದ ರೀಡಿಂಗ್‌ನಿಂದ ದೋಷ ಸಂಭವಿಸಿರಬಹುದು ಎಂದು ವಿವರಿಸಿದ್ದಾರೆ.

“ಮುಜಾಫರ್‌ಪುರದಲ್ಲಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ ಮತ್ತು ರೀಡಿಂಗ್‌ಗಳನ್ನು ವರ್ಗಾಯಿಸುವಾಗ ಈ ವ್ಯತ್ಯಾಸ ಉಂಟಾಗಿರಬಹುದು” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹರಿಶಂಕರ್ ಮಣಿಯಾರಿಗೆ ನೀಡಲಾದ ತಪ್ಪಾದ ಬಿಲ್ ಅನ್ನು ಸರಿಪಡಿಸಲಾಗುವುದು ಮತ್ತು ಅವರ ಮನೆಗೆ ವಿದ್ಯುತ್ ಮರುಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ