Shankar Mahadevan : ‘ಹುಟ್ಟುತ್ತಲೇ ಟೀಚರ್ ಆಗಿರುವವರನ್ನು ನೀವು ನೋಡಬೇಕೆ? ನೋಡಿ ಇಲ್ಲಿದ್ದಾರೆ ಆಕೆ!ಇದನ್ನೇ ದೇವರ ಆಶೀರ್ವಾದ ಎನ್ನುವುದು. ಅಂದಹಾಗೆ ಈ ಮುದ್ದು ಯಾರು, ನಾನಿವಳನ್ನೊಮ್ಮೆ ಭೇಟಿಯಾಗಬೇಕು, ಗಟ್ಟಿಯಾಗಿ ಅಪ್ಪಿಕೊಳ್ಳಬೇಕು ಮತ್ತವಳಿಗೆ ಆಶೀರ್ವದಿಸಬೇಕು ಎಂದು ಬಯಸುತ್ತಿದ್ದೇನೆ. ಎಷ್ಟೊಂದು ಸ್ಪಷ್ಟವಾಗಿ ಮಧುರವಾಗಿ ಸ್ವರಸಂಗತಿಗಳನ್ನು ಪ್ರಸ್ತುತ ಪಡಿಸಿದ್ದಾಳೆ’ ಖ್ಯಾತ ಗಾಯಕ ಶಂಕರ ಮಹಾದೇವನ್ ಹೀಗೊಂದು ಒಕ್ಕಣೆ ಬರೆದು ಈ ಕೆಳಗಿನ ವಿಡಿಯೋ ಅಪ್ಲೋಡ್ ಮಾಡಿ ಈ ಪುಟಾಣಿ ಸಂಗೀತ ಟೀಚರ್ (Music Teacher) ಅನ್ನು ಹುಡುಕುತ್ತಿದ್ದಾರೆ. ಇಷ್ಟೇ ಅಲ್ಲ ಕೆಲದಿನಗಳ ಹಿಂದೆ ಕರ್ನಾಟಕ ಸಂಗೀತ ಕಲಾವಿದೆಯರಾದ ರಂಜಿನಿ ಮತ್ತು ಗಾಯತ್ರಿ ಕೂಡ ಈಕೆಯ ಬಗ್ಗೆ ಟ್ವೀಟ್ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ, ‘ಹುಷಾರಾಗಿರಬೇಕು, ಈಕೆ ನಾಳೆಯೊಂದಿನ ನಮ್ಮ ಕಛೇರಿ ನಡೆದಾಗ ಸಂಗೀತ ವಿಶ್ಲೇಷಣೆಗೆ ತೊಡಗಿಬಿಟ್ಟರೆ!’
ನಾಲ್ಕೂವರೆ ವರ್ಷದ ಶಾಲ್ಮಲೀ ಶ್ರೀನಿವಾಸ್ (Shalmalee Srinivas) ವಾಸವಾಗಿರುವುದು ಬೆಂಗಳೂರಿನಲ್ಲಿ. ಹಾಡುತ್ತ, ವೀಣೆ ಮತ್ತು ಕೀಬೋರ್ಡ್ ನುಡಿಸುತ್ತ, ಕೇಳಿ ಬಂದ ಸಂಗೀತಕ್ಕೆ ಹೆಜ್ಜೆಯನ್ನೂ ಹಾಕುತ್ತ ಕಲೆಯನ್ನೇ ಉಸಿರಾಡುತ್ತಿರುವ ಈ ಪುಟಾಣಿ ಸಾಮಾಜಿಕ ಜಾಲತಾಣಗಳ ಮೂಲಕ ಈಗಾಗಲೇ ಅನೇಕ ಸಂಗೀತ ದಿಗ್ಗಜರ ಗಮನ ಸೆಳೆದಿದ್ದಾಳೆ. ಈಕೆ ಹಾಡಿದ ‘ಡೀಡೀಯಾಡ್ಯಾನೇ ತಂಗ’ ಹಾಡು 1 ಮಿಲಿಯನ್ಗಿಂತಲೂ ಹೆಚ್ಚು ಜನರಿಂದ ಕೇಳಲ್ಪಟ್ಟಿದೆ.
ಮೊಬೈಲ್ ರಿಂಗ್ಟೋನ್ ಆಗಲಿ, ಸಿನೆಮಾದ ಗೀತೆಯ ಸಾಲಾಗಲಿ ಕಿವಿಗೆ ಬಿದ್ದ ತಕ್ಷಣ ಓಡಿಬಂದು ಅದನ್ನು ಒಂದೇ ಬೆರಳಿನಿಂದ ಕೀಬೋರ್ಡ್ನಲ್ಲಿ ನುಡಿಸುವ ಖಯಾಲಿಗೆ ಬಿದ್ದಾಗ ಈಕೆಗೆ ಕೇವಲ ಎರಡೂವರೆ ವರ್ಷ. ಹೀಗೆ ಕೀಬೋರ್ಡ್ನೊಂದಿಗೆ ಮೋಹಕ್ಕೆ ಬಿದ್ದ ಈಕೆ ಕ್ರಮೇಣ ಅಮ್ಮ ಹೇಳಿಕೊಟ್ಟ ಹಾಡುಗಳನ್ನು ಕಲಿಯತೊಡಗಿದಳು. ಹಿಂದೂಸ್ತಾನಿ ಗಾಯಕ ಮಹೇಶ ಕಾಳೆಯವರ (Mahesh Kale) ಸರಗಮ್ ರೀಲನ್ನು ರೀಮಿಕ್ಸ್ ಮಾಡಿದ ಅತೀ ಚಿಕ್ಕವಯಸ್ಸಿನ ಗಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ‘ಬುಕ್ ಬ್ರಹ್ಮ’ ಶಾಲ್ಮಲಿ ಮತ್ತು ಈಕೆಯ ತಾಯಿಯನ್ನು ಸಂದರ್ಶಿಸಿದ ವಿಡಿಯೋ ಈ ಕೆಳಗಿದೆ.
ಆಧುನಿಕ ಜಗತ್ತಿನಲ್ಲಿ ಅದರಲ್ಲಿಯೂ ಮಹಾನಗರಗಳಲ್ಲಿ ಅನೇಕ ಪ್ರಭಾವಗಳಿಂದ ಮಕ್ಕಳ ಮನಸ್ಸನ್ನು, ಬುದ್ಧಿಯನ್ನು, ಹೃದಯವನ್ನು ಕಾಪಾಡುವುದು ದೊಡ್ಡ ಸವಾಲು. ಆದರೆ ತಂದೆಯೋ ತಾಯಿಯೋ ತಮ್ಮ ಗಮನವನ್ನು ಪೂರ್ತಿ ಮಗುವಿನ ಮೇಲೆ ಕೇಂದ್ರೀಕರಿಸಿದಾಗ ಖಂಡಿತ ಮಕ್ಕಳೊಳಗಿನ ಪ್ರತಿಭೆ, ಆಸಕ್ತಿಯನ್ನು ಪೋಷಿಸಬಹುದು. ಇದಕ್ಕೆ ಈ ಪುಟ್ಟ ಶಾಲ್ಮಲಿಯೇ ಉದಾಹರಣೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:20 pm, Tue, 1 August 23