Viral News: 55 ಲಕ್ಷ ರೂ. ಕಳ್ಳತನ; ಇನ್‌ಸ್ಟಾಗ್ರಾಮ್ ರೀಲ್​ನಿಂದ ಸಿಕ್ಕಿಬಿದ್ದ ಕಳ್ಳಿಯರು

|

Updated on: May 16, 2024 | 5:51 PM

ಕದ್ದ ಬೆಲೆ ಬಾಳುವ ಬಟ್ಟೆ ಮತ್ತು ಆಭರಣಗಳನ್ನು ಧರಿಸಿ ಈ ಕಳ್ಳಿಯರು ರೀಲ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ರೀಲ್ ಸಹಾಯದಿಂದ ಪೊಲೀಸರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Viral News: 55 ಲಕ್ಷ  ರೂ. ಕಳ್ಳತನ; ಇನ್‌ಸ್ಟಾಗ್ರಾಮ್ ರೀಲ್​ನಿಂದ ಸಿಕ್ಕಿಬಿದ್ದ ಕಳ್ಳಿಯರು
Follow us on

ಮುಂಬೈ: 55 ಲಕ್ಷ ರೂ.ಗಳ ಕಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಸಹೋದರಿಯರನ್ನು ಪತ್ತೆ ಹಚ್ಚಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇನ್ಸ್ಟಾಗ್ರಾಮ್ ರೀಲ್ ಸಹಾಯದಿಂದ ಇಬ್ಬರು ಸಹೋದರಿಯರ ಕಳ್ಳತನ ಬಯಲಾಗಿದೆ. ಈ ಇಬ್ಬರೂ ಸಹೋದರಿಯರು ವೃದ್ಧ ದಂಪತಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚಿಗಷ್ಟೇ ವೃದ್ಧ ದಂಪತಿಯ ಮನೆಯಲ್ಲಿದ್ದ 55 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಲೆಬಾಳುವ ಬಟ್ಟೆ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ನಂತರ ಅದೇ ಬೆಲೆ ಬಾಳುವ ಬಟ್ಟೆ ಮತ್ತು ಆಭರಣಗಳನ್ನು ಧರಿಸಿ ರೀಲ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ರೀಲ್ ಸಹಾಯದಿಂದ ಪೊಲೀಸರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈನ ಕಲಾಚೌಕಿ ಪೊಲೀಸರು ಈ ಇಬ್ಬರು ಸಹೋದರಿಯರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಛಾಯಾ ವೆಟ್ಕೋಲಿ(24) ಮತ್ತು ಭಾರತಿ ವೆಟ್ಕೋಲಿ (21) ಎಂದು ಗುರುತಿಸಲಾಗಿದೆ.

ಕದ್ದ ಚಿನ್ನಾಭರಣ, ಬಟ್ಟೆ ಧರಿಸಿ ಮಾಡಿದ ರೀಲ್ಸ್​​​:

ಮನೆಯಲ್ಲಿದ್ದ ಬೆಲೆಬಾಳುವ ಚಿನ್ನಾಭರಣ ಹಾಗೂ ಬಟ್ಟೆಗಳು ನಾಪತ್ತೆಯಾಗಿರುವುದು ತಿಳಿದ ವೃದ್ಧ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಮನೆಗೆ ಕೆಲಸಕ್ಕೆ ಬರುವ ಇಬ್ಬರು ಸಹೋದರಿಯರ ಬಗ್ಗೆ ವೃದ್ಧ ದಂಪತಿಗಳಿಗೆ ಶಂಕೆಯಿರುವುದನ್ನು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ, ಇಬ್ಬರು ಸಹೋದರಿಯರು ರೀಲ್ಸ್​​​​​ ಅನ್ನು ಪೊಲೀಸರು ಗಮನಿಸಿದ್ದು, ಪೊಲೀಸರು ಮೊದಲು ವೃದ್ಧ ದಂಪತಿಯಿಂದ ಆಭರಣ ಮತ್ತು ಬಟ್ಟೆಗಳನ್ನು ಗುರುತಿಸಿದ್ದಾರೆ. ಆ ಬಳಿಕ ಇಬ್ಬರು ಸಹೋದರಿಯರ ಸ್ಥಳ ಪತ್ತೆ ಹಚ್ಚಿದಾಗ ಅವರು ರಾಯಗಡದಲ್ಲಿ ಇರುವುದು ಪತ್ತೆಯಾಗಿದೆ.

ಸಹೋದರಿಯರ ವಿರುದ್ಧ ಪ್ರಕರಣ ದಾಖಲು:

ಸಹೋದರಿಯರಾದ ಛಾಯಾ ಮತ್ತು ಭಾರತಿ ವೆಟ್ಕೋಲಿ ಅವರನ್ನು ರಾಯಗಡದಿಂದ ಪೊಲೀಸರು ಬಂಧಿಸಿದ್ದು, ಅವರಿಂದ 55 ಲಕ್ಷ ರೂಪಾಯಿ ಮೌಲ್ಯದ ಆಭರಣ ಮತ್ತು ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಇಬ್ಬರು ಸಹೋದರಿಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 381 ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ