ಡೌನ್ ಆಯಿತೇ ಟ್ವಿಟರ್: ನೆಟ್​ ಜಗತ್ತಿನಲ್ಲಿ ಮೆಸೇಜ್​ಗಳ ಮಹಾಪೂರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 17, 2022 | 11:04 PM

ಟ್ವಿಟರ್​ ಡೌನ್ ಆಗಿದೆ ಎಂದು ಕೆಲವೇ ನಿಮಿಷಗಳಲ್ಲಿ 4,500 ಪೋಸ್ಟ್​ಗಳು ಬಂದಿವೆ ಎಂದು ಡೌನ್​ಡಿಟೆಕ್ಟರ್ ವರದಿ ತಿಳಿಸಿದೆ

ಡೌನ್ ಆಯಿತೇ ಟ್ವಿಟರ್: ನೆಟ್​ ಜಗತ್ತಿನಲ್ಲಿ ಮೆಸೇಜ್​ಗಳ ಮಹಾಪೂರ
ಟ್ವಿಟರ್
Follow us on

ಟ್ವಿಟರ್ ವೆಬ್​ಸೈಟ್ ಮತ್ತು ಆ್ಯಪ್​ ಕೆಲ ಸಮಯ ಡೌನ್ ಇತ್ತು ಎಂದು ಸಾವಿರಾರು ಜನರು ಆನ್​ಲೈನ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಡೌನ್​ಡಿಟೆಕ್ಟರ್ (www.downdetector.com) ವೆಬ್​ಸೈಟ್ ವರದಿ ಮಾಡಿದೆ. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಆಗುವ ಪೋಸ್ಟ್​ಗಳು ಮತ್ತು ಸ್ವತಃ ತನಗೆ ಬರುವ ದೂರುಗಳನ್ನು ಆಧರಿಸಿ ಡೌನ್​ಡಿಟೆಕ್ಟರ್ ವೆಬ್​ಸೈಟ್​ ವರದಿಯನ್ನು ಪ್ರಕಟಿಸಿದೆ. ಟ್ವಿಟರ್​ ಡೌನ್ ಆಗಿದೆ ಎಂದು ಕೆಲವೇ ನಿಮಿಷಗಳಲ್ಲಿ 4,500 ಪೋಸ್ಟ್​ಗಳು ಬಂದಿವೆ ಎಂದು ಡೌನ್​ಡಿಟೆಕ್ಟರ್ ವರದಿ ತಿಳಿಸಿದೆ. ಯಾವುದೇ ಟ್ವೀಟ್ ಲೋಡ್ ಮಾಡಲು, ಹೊಸದಾಗಿ ಟ್ವೀಟ್ ಮಾಡಲು ಅಥವಾ ಬೇರೆಯವರ ಪ್ರೊಫೈಲ್​ಗಳನ್ನು ನೋಡಲು ಅವಕಾಶ ಸಿಗುತ್ತಿಲ್ಲ. ಲಿಂಕ್​ಗಳೂ ಕೆಲಸ ಮಾಡುತ್ತಿಲ್ಲ ಎಂದು ಜನರು ದೂರುತ್ತಿದ್ದರು.

ಕೆಲವರಿಗೆ ಸಮ್​ಥಿಂಗ್ ವೆಂಟ್ ರಾಂಗ್ ಮತ್ತು ಟ್ರೈ ರಿಲೋಡಿಂಗ್ (Something went wrong and Try reloading) ಮೆಸೇಜ್​ಗಳು ಹಲವರಿಗೆ ಕಾಣಿಸಿದವು ಎಂದು ಹಲವರು ವರದಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದ ಈ ದೈತ್ಯ ಕಂಪನಿಯಲ್ಲಿ ಸಮಸ್ಯೆ ಆಗಿದೆ ಎನ್ನುವುದು ಇದೇ ಮೊದಲ ಬಾರಿಗೆ ಹೊರಗೆ ಬಂದಿದ್ದಲ್ಲ. ಕಳೆದ ಶುಕ್ರವಾರವು ಟ್ವಿಟರ್​ನಲ್ಲಿ ತಾಂತ್ರಿಕ ಸಮಸ್ಯೆ ವರದಿಯಾಗಿತ್ತು. ಅದನ್ನು ಸರಿಪಡಿಸಿದ್ದಾಗಿ ಕಂಪನಿಯು ಹೇಳಿಕೆ ನೀಡಿತ್ತು.

ತೊಂದರೆಯಾಗಿರುವುದರ ಬಗ್ಗೆ ಒಪ್ಪಿಕೊಂಡು ಟ್ವಿಟರ್ ತನ್ನ ಅಧಿಕೃತ ಖಾತೆಯಿಂದ ಕ್ಷಮೆಯಾಚಿಸಿದೆ. ‘ಈಗ ಎಲ್ಲವೂ ಸರಿಯಾಗಿದೆ’ ಎಂದು ಟ್ವಿಟರ್ ಟ್ವೀಟ್ ಮಾಡಿದೆ. 2021ರ ಸತತ ನಾಲ್ಕನೇ ತ್ರೈಮಾಸಿಕದಲ್ಲಿ ವಿಶ್ವದಲ್ಲಿ ಟ್ವಿಟರ್​ನ ಸಕ್ರಿಯ ಬಳಕೆದಾರರ ಸಂಖ್ಯೆಯು 2.17 ಕೋಟಿಗೆ ಏರಿಕೆಯಾಗಿತ್ತು. ಟ್ವಿಟರ್​ನ ಬೆಳವಣಿಗೆಯು ವಾರ್ಷಿಕ ಸರಾಸರಿ ಶೇ 13ರಷ್ಟು ಹೆಚ್ಚಾಗುತ್ತಿದೆ. ಇದು ಅಮೆರಿಕ ಷೇರುಪೇಟೆ ಹೂಡಿಕೆದಾರರ ನಿರೀಕ್ಷೆಗಳಿಗಿಂತಲೂ ಕಡಿಮೆ ಎಂದು ಅಮೆರಿಕದ ಷೇರು ದಲ್ಲಾಳಿಗಳು ಹೇಳಿದ್ದಾರೆ. ಟ್ವಿಟರ್​ನ ತಾಂತ್ರಿಕ ಸಮಸ್ಯೆ ಬಹಿರಂಗಗೊಂಡ ನಂತರ ಟ್ವಿಟರ್ ಕಂಪನಿಯ ಷೇರುಗಳ ಮೌಲ್ಯ ನ್ಯೂಯಾರ್ಕ್ ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ ಶೇ 0.21ರಷ್ಟು ಕುಸಿತ ಕಂಡಿತ್ತು.

ಇದನ್ನೂ ಓದಿ: ಕೇಂದ್ರ ಸಚಿವ, ರಾಜಸ್ಥಾನ ರಾಜ್ಯಪಾಲರ ಟ್ವಿಟರ್ ಅಕೌಂಟ್​ಗಳೆಲ್ಲ ಹ್ಯಾಕ್​; ಅರೇಬಿಕ್​, ಉರ್ದು ಭಾಷೆಯಲ್ಲಿ ಪೋಸ್ಟ್​ ಮಾಡಿದ ಕಿಡಿಗೇಡಿಗಳು

ಇದನ್ನೂ ಓದಿ: IPL 2021 Auction: ಟ್ವಿಟರ್​ನಲ್ಲಿ ಅರ್ಜುನ್ ತೆಂಡೂಲ್ಕರ್ ಟ್ರೆಂಡಿಂಗ್, ಯಾವ ತಂಡಕ್ಕೆ ಸಚಿನ್ ಪುತ್ರ?