ಮೆನ್ಸ್​ ಡೇ ಪಂಚಾಂಗದಾಗೂ ಇಲ್ಲ ಮತ್ತ ಗೂಗಲ್​ ಡೂಡಲ್​ದಾಗೂ ಇಲ್ಲ; ಸೋನು ವೇಣುಗೋಪಾಲ

| Updated By: ಶ್ರೀದೇವಿ ಕಳಸದ

Updated on: Nov 21, 2022 | 12:25 PM

Sonu Venugopal : ಸೋನು ವೇಣುಗೋಪಾಲ ಓದಿದ್ದು ಎಂಜಿನಿಯರಿಂಗ್, ಕಾರ್ಪೋರೇಟ್​ ಲಾ ಮತ್ತು ಮನಃಶಾಸ್ತ್ರ ಆದರೆ ಗುರುತಿಸಿಕೊಂಡಿದ್ದು ಕಲಾವಿದರಾಗಿ. ನೆಟ್ಟಿಗರು ಇವರ ರೀಲ್ಸ್ ನೋಡಿ ಹೇಳುವುದು ಒಂದೇ ಮಾತು ‘ಬೆಂಕಿ ಬೆಂಕಿರೀ ಅಕ್ಕಾರ ನೀವ್​’

ಮೆನ್ಸ್​ ಡೇ ಪಂಚಾಂಗದಾಗೂ ಇಲ್ಲ ಮತ್ತ ಗೂಗಲ್​ ಡೂಡಲ್​ದಾಗೂ ಇಲ್ಲ; ಸೋನು ವೇಣುಗೋಪಾಲ
ಕಾಮಿಡಿಯನ್ ಸೋನು ವೇಣುಗೋಪಾಲ
Follow us on

Viral Video : ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಿಸಿದ ಕಾಮಿಡಿ ಕಂಟೆಂಟ್ ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಯಾಗಿದೆಯಾ ಎಂದು ನೀವು ಹುಡುಕುತ್ತಿರುವಾಗ ಧುತ್ತನೇ ಎದುರಾಗುತ್ತಾರೆ ಈ ಸೋನು ವೇಣುಗೋಪಾಲ. ಬೆಳಗಾವಿ ಮೂಲದ ಇವರು ಸ್ಟ್ಯಾಂಡ್​ಅಪ್​ ಕಾಮಿಡಿಯನ್​, ಇಂಪ್ರೋ ಆರ್ಟಿಸ್ಟ್​, ಕಂಟೆಂಟ್ ಕ್ರಿಯೇಟರ್. ಇವರು ಸಾಮಾಜಿಕ ಜಾಲತಾಣದಲ್ಲಿ ಇವರು ಗಮನ ಸೆಳೆದಿದ್ದು ‘ಬಾಜೂಮನಿ ಕಾಕೂ’ ಎಂಬ ಕಾಮಿಡಿ ಕ್ಯಾರೆಕ್ಟರ್ ಮೂಲಕ. ಇವರು ಓದಿದ್ದು ಎಂಜಿನಿಯರಿಂಗ್​, ಆದರೆ ರೇಡಿಯೋ ಜಾಕಿ ಮತ್ತು ರಂಗಭೂಮಿಯ ಮೂಲಕ  ತಮ್ಮೊಳಗಿನ ಕಲಾವಿದೆಯನ್ನು ಎಲ್ಲರೆದುರು ನಿಲ್ಲಿಸಿದರು. ಈಗ ಪೂರ್ಣಪ್ರಮಾಣದಲ್ಲಿ ತಮ್ಮನ್ನು ಹಾಸ್ಯ ಕಲಾವಿದರೆಂದು ಗುರುತಿಸಿಕೊಂಡಿದ್ದಾರೆ. ಇವರ ಕಂಟೆಂಟ್​ ಇವರ ಪ್ಲಸ್​ ಪಾಯಿಂಟ್​. ಉತ್ತರ ಕರ್ನಾಟಕದ ಶೈಲಿಯಲ್ಲಿ ಇವರು ಪ್ರಸ್ತುಪಡಿಸುವ ಹಾಸ್ಯಪ್ರಸಂಗಗಳಿಗೆ ಲಕ್ಷಾಂತರ ಅಭಿಮಾನಿಗಳು ಮನಸೋತಿದ್ದಾರೆ. ಮೊನ್ನೆಯಷ್ಟೇ ವಿಶ್ವ ಪುರುಷರ ದಿನ, ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಯಿತು. ಆ ಸಂದರ್ಭದಲ್ಲಿ ಸೃಷ್ಟಿಸಿದ ಸೋನು ಅವರ ಕಂಟೆಂಟ್​ ಹೇಗಿದೆ ನೋಡಿ.

ಈ ವಿಡಿಯೋ ನೋಡಿದ ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಫಾಲೋವರ್ಸ್​ನ್ನ ನೋಡಿ  ಆವಾಗ ಗೊತ್ತಾಗತ್ತೆ ಮೆನ್ಸ್​ ಡೇ ಬಗ್ಗೆ ಎಂದಿದ್ದಾರೆ ಒಬ್ಬರು. ಪಂಚಾಂಗದಾಗ ಇಲ್ಲ? ಗ್ರಹಣ ದಿವಸ ಕೊಟ್ಟಿರ್ತಾರ ನೋಡ್ರಿ ಮೆನ್ಸ್​ ಡೇ ಎಂದಿದ್ದಾರೆ ಇನ್ನೂ ಒಬ್ಬರು. ಆತು ಪಂಚಾಂಗ್​ದಾಗ ಸೇರಸೂಣಂತ ಹೀಗೆಂದು ಮತ್ತೊಬ್ಬರು ಹೇಳಿದ್ಧಾರೆ. ಬೆಂಕಿ ಬೆಂಕಿರೀ ನೀವ್ ಅಕ್ಕಾ, ದಿವ್ಸಾ ಮಾಡ್ತೀವಲ್ರಿ ಅದ ಮತ್ತ ಎಂದು ಅವರ ಡೈಲಾಗ್​ ಪುನರುಚ್ಚರಿಸಿ ತಮಾಷೆ ಮಾಡಿದ್ದಾರೆ ಇನ್ನೂ ಒಬ್ಬರು.

ಸಾಮಾನ್ಯರ ಮನದಾಳವನ್ನು, ಕುತೂಹಲವನ್ನು ಅದರಲ್ಲಿಯೂ ಇಡೀ ಕುಟುಂಬಕ್ಕಾಗಿ ತಮ್ಮ ಜೀವವನ್ನೇ ಸವೆಸುತ್ತಿರುವ ಹೆಣ್ಣುಮಕ್ಕಳ ಒಳಪ್ರಪಂಚವನ್ನು ಅತ್ಯಂತ ಮಾರ್ಮಿಕವಾಗಿ ಸಹಜಹಾಸ್ಯದೊಂದಿಗೆ ಇವರು ತೆರೆದಿಡುತ್ತಾರೆ. ಕೆಲದಿನಗಳ ಹಿಂದೆ ರಿಷಿ ಸುನಕ್​ ಭಾರತಕ್ಕೆ ಬಂದಾಗ ಮಾಡಿದ ರೀಲ್ಸ್ ಇಲ್ಲಿದೆ ನೋಡಿ.

ನಿತ್ಯಜೀವನದ ಆಗುಹೋಗುಗಳನ್ನೇ ಅತ್ಯಂತ ಸಹಜವಾಗಿ ಹಾಸ್ಯದ ಮೂಲಕ ಕಟ್ಟಿಕೊಡುವ ಸೋನು ಅವರ ಪ್ರತಿಭೆ ನಿಜಕ್ಕೂ ಅದ್ಭುತ. ದಿನವೂ ಅಷ್ಟೊಂದು ಕಂಟೆಂಟ್​ ಸೃಷ್ಟಿಸುವುದು ಮತ್ತು ಆ ಗುಣಮಟ್ಟವನ್ನು ಕಾಯ್ದುಕೊಂಡು ಹೋಗುವ ಸವಾಲಿದೆಯಲ್ಲ ಅದು ಸಣ್ಣ ವಿಷಯವಲ್ಲ. 24 ತಾಸೂ ಬುದ್ಧಿಗೆ ಭಾವಕ್ಕೆ ಸದಾ ಕೆಲಸವನ್ನು ಕೊಡಲೇಕಾಗುತ್ತದೆ. ಈಗ ಕೆಳಗಿರುವ ಈ ವಿಡಿಯೋ ನೋಡಿ. ಕನ್ನಡದ ಪ್ರತೀ ಹೆಣ್ಣುಮಕ್ಕಳು ಮದುವೆಯ ದಿನ ಯಾವ ಮನಸ್ಥಿತಿಯಲ್ಲಿರುತ್ತಾರೆ, ಯಾವುದಕ್ಕೆ ಆದ್ಯತೆ ಕೊಡುತ್ತಿರುತ್ತಾರೆ, ಸಂಭ್ರಮ, ಕಾತರ, ತಳಮಳ, ಗೊಂದಲಗಳ ನಡುವೆ ಅವರ ನಡೆವಳಿಕೆ ಹೇಗೆ ಅರಳಿರುತ್ತಿದೆ ಎನ್ನುವುದನ್ನು ಇದು ತೋರಿಸುತ್ತದೆ. ಈ ವಿಡಿಯೋ ನೋಡಿದ ಹೆಣ್ಣುಮಕ್ಕಳಿಗೆ ತಮ್ಮ ಮದುವೆಯ ದಿನದ ದೃಶ್ಯವು ಕಣ್ಣುಮುಂದೆ ಬಂದಿರಲು ಸಾಕು.

‘ಬಾಜೂ ಮನಿ ಕಾಕೂ’ ಪಾತ್ರ ಮಾತ್ರ ಕಳೆದ ಆರು ವರ್ಷಗಳಿಂದ ಜಗತ್ತಿನ ಕನ್ನಡಿಗರನ್ನೆಲ್ಲ ಸೆಳೆಯುತ್ತ ಬಂದಿದೆ. ನಿತ್ಯದ ಪ್ರಚಲಿತ ವಿಷಯಗಳು, ವಿದ್ಯಮಾನಗಳ ಬಗ್ಗೆ ಈ ಕಾಕೂ ಸದಾ ಕುತೂಹಲಿ, ಮಾತುಗಾರ್ತಿ, ಜೋರುಗಾರ್ತಿ, ತನ್ನ ಮುಗ್ಧತನ ಮತ್ತು ಮುದ್ದಾದ ಮೂರ್ಖತನದಿಂದಲೂ ಜನಮಾನಸವನ್ನು ಗೆದ್ದಾಕೆ. ಸಾಮಾನ್ಯ ಗೃಹಿಣಿಯ ಮನಸ್ಥಿತಿ, ತಿಳಿವಳಿಕೆ, ಚಾಲಾಕಿತನ, ಜ್ಞಾನದಾಹಿ ಮತ್ತು ತನ್ನದೇ ಆದ ಜಗತ್ತಿನಲ್ಲಿ ಸಣ್ಣಪುಟ್ಟ ಖುಷಿ, ಅಚ್ಚರಿಗಳನ್ನು ಕಾಣುವ ಲವಲವಿಕೆಯ ಈ ಪಾತ್ರ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಅಚ್ಚಳಿಯದ ಛಾಪು ಮೂಡಿಸಿದೆ. ಕ್ಷಮಾ ಬಿಂದು ಎಂಬ ಯುವತಿ ತನ್ನನ್ನೇ ತಾನು ಮದುವೆಯಾದ ಸುದ್ದಿ ಓದಿದ್ದಿರಿ. ಆ ವಿಷಯವನ್ನು ಭಾಜೂಮನಿ ಕಾಕೂ ತನ್ನ ಗೆಳತಿಯೊಂದಿಗೆ ಚರ್ಚಿಸಿದ್ದು ಇಲ್ಲಿದೆ.

ನಿತ್ಯದ ಜಂಜಡಗಳಲ್ಲಿ ಸುಸ್ತಾಗುವ ಅನೇಕರಿಗೆ ಸೋನು ವೇಣುಗೋಪಾಲ ಅವರ ಈ ರೀಲ್ಸ್​ಗಳು ಟಾನಿಕ್​ನಂತೆ. ಲಕ್ಷಾಂತರ ಫಾಲೋವರ್​ಗಳನ್ನು ಹೊಂದಿದ ಸೋನು ಕನ್ನಡ ಮತ್ತು ಇಂಗ್ಲಿಷ್​ ಎರಡರಲ್ಲಿಯೂ ಸ್ಟ್ಯಾಂಡ್​ ಅಪ್​ ಕಾಮಿಡಿ ಪ್ರದರ್ಶನ ನೀಡುತ್ತಾರೆ. ಇಂಪ್ರೋವ್​ ಮತ್ತು ನಟನೆಯಲ್ಲಿಯೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿರುವ ಸೋನು ಒಳಗೊಬ್ಬ ದಿಟ್ಟ ಹೆಣ್ಣುಮಗಳಿದ್ದಾಳೆ. ಅಷ್ಟೇ ಪ್ರೌಢ, ಛಲವಂತ ಮಹಿಳೆಯಿದ್ದಾಳೆ. ಅಂತಃಕರುಣಿಯೂ, ಸಹೃದಯಿಯೂ ಪೆದ್ದಿಯೂ ಆದ ಕಾಕೂ ಇದ್ದಾಳೆ. ಬೆಂಗಳೂರಿನಲ್ಲಿ ನೆಲೆಸಿರುವ ಸೋನು ಜಗತ್ತಿನ ಸಾಮಾನ್ಯರ ಮನವನ್ನು ಹೀಗೇ ತಣಿಸುತ್ತಿರಲಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 12:15 pm, Mon, 21 November 22